ರೈತರ ಬೆಳೆಸಾಲ ಮನ್ನ !! ಅನ್ನದಾತರ ಸಭೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಣೆ !!

ಅನ್ನದಾತರ ಬೆಳೆಸಾಲ ಮನ್ನ ಮಾಡಲು ರಾಜ್ಯ ಸರಕಾರ ಘೋಷಿಸುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಂಬಂಧ ಅಧಿಸೂಚನೆ ಪ್ರಕಟ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ad


ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ನಂತರ ಈ ಘೋಷಣೆ ಮಾಡಿದರು. ಆದರೆ ಈ ಪ್ರಕ್ರಿಯೆಗೆ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. 2009, ಏಪ್ರಿಲ್ 1ರಿಂದ 2017ರ ಡಿಸೆಂಬರ್ 31 ರವರೆಗೆ ರೈತರು ಮಾಡಿರುವ ಎಲ್ಲಾ ಬೆಳೆ ಸಾಲ‌ಮನ್ನಾ, ಶ್ರೀಮಂತ ರೈತರು, 3 ವರ್ಷದ ಆದಾಯ ತೆರಿಗೆ ಪಾವತಿಸಿರುವ ರೈತರು, ವ್ಯಾಪಾರದ ಜತೆಗೆ ಕೃಷಿ ಮಾಡುತ್ತಿರುವ ರೈತರ ಸಾಲ ಮನ್ನಾ ಮಾಡಬೇಕೆ, ಕೃಷಿಯೇತರ ಉದ್ದೇಶಕ್ಕೆ ಮಾಡಿರುವ ಸಾಲ ಮನ್ನಾ ಮಾಡಬೇಕೆ ಎಂಬ ಬಗ್ಗೆ ಚರ್ಚಿಸಲಿದ್ದೇವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಲಹೆಯನ್ನೂ ಪಡೆಯಬೇಕಿದ್ದು, ಇನ್ನು 15 ದಿನದೊಳಗೆ ಸೂಕ್ತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ‘ರಾಜ್ಯದ ಬಜೆಟ್‌ ಇರೋದೇ 2 ಲಕ್ಷ ಕೋಟಿ. ಇದರಲ್ಲಿಯೇ ಸಾಲಮನ್ನಾ ಮಾಡಿ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ, ಶಿಕ್ಷಣ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳ ಯೋಜನೆಗಳಿಗೂ ಅನುದಾನ ನೀಡಬೇಕಿದೆ’ ಎಂದರು.

ರೈತರು ಹಲವು ಕೆಲಸಗಳಿಗೆ ಸಂಬಂಧಪಟ್ಟಂತೆ ಸಾಲ ಪಡೆದುಕೊಂಡಿದ್ದಾರೆ. ಅವರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ರೈತಮುಖಂಡರು, ಕೃಷಿ ತಜ್ಞರ ಜೊತೆ ಚರ್ಚೆ ನಡೆಸಿ ಇನ್ನು 10-15 ದಿನಗಳಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇನ್ನೆರಡು ದಿನಗಳಲ್ಲಿ ದೆಹಲಿಗೆ ವಾಪಸ್ಸಾಗುತ್ತಾರೆ. ಅವರ ಜೊತೆ ಕೂಡ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು. ಈಗಾಗಲೇ ಕೆಲವು ರಾಜ್ಯಗಳು ಸಾಲ ಮನ್ನಾ ಮಾಡಿದ್ದು, ಆ ಬಗ್ಗೆಯೂ ಮಾಹಿತಿ ತೆಗೆದುಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ರೈತರು ಸಲಹೆ ನೀಡಬೇಕು, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದರು. ‘ಚುನಾವಣೆ ಪೂರ್ವದಲ್ಲಿ ನೀಡಿದ ಮಾತಿನಂತೆ ನಡೆಯುತ್ತೇವೆ, ಹಿಂದೆ ಸರಿಯುವ ಮಾತಿಲ್ಲ. ಡಿಸಿಎಂ ಪರಮೇಶ್ವರ ಮತ್ತು ನಾನು ಇಬ್ಬರೂ ಈ ಕುರಿತು ಚರ್ಚಿಸಿದ್ದೇವೆ’ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ‘ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲ ಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಸರಿಯಲ್ಲ. ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.