ಭಕ್ತಾದಿಗಳೇ ನೀವು ಸದ್ಯ ಧರ್ಮಸ್ಥಳಕ್ಕೆ ಬರಬೇಡಿ- ವಿನಂತಿ ಮಾಡಿಕೊಂಡ ಧರ್ಮಾಧಿಕಾರಿ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಈಗ ವಿಪರೀತ ನೀರಿನ ಸಮಸ್ಯೆ. ಹೌದು, ಈ ಬಾರಿ ಕೆರೆ ಕೊಳ್ಳಗಳೆಲ್ಲ ಬತ್ತಿದ್ದು ಅದರ ಬಿಸಿ ಧರ್ಮಸ್ಥಳದ ಮಂಜುನಾಥನಿಗೂ ತಟ್ಟಿದೆ. ನೇತ್ರಾವತಿ ನದಿ ಬತ್ತುವ ಹಂತಕ್ಕೆ ಬಂದಿದೆ ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದ್ದಾರೆ.

ad

ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟೆಯಲ್ಲಿ ಸ್ವಲ್ಪ ನೀರಿದೆ. ತೀರ್ಥದ ಗುಂಡಿಯಲ್ಲಿ ಅಲ್ಪ ಪ್ರಮಾಣದ ನೀರಿದೆ. ತೀರ್ಥದ ಗುಂಡಿಯಲ್ಲಿ ನಾಲ್ಕು ಅಡಿ ಕಡಿಮೆ ಆಗಿದೆ. ಪ್ರಸ್ತುತ ಸ್ವಾಮಿಯ ಅಭಿಷೇಕಕ್ಕೆ ನೀರಿನ ತೊಂದರೆ ಇಲ್ಲ. ಆದರೆ, ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲದಂತಾಗಬಹುದು. ಈ ಹಿಂದೆಯೂ ಹೀಗೆ ಆಗಿತ್ತು. ಆದರೆ, ಇಷ್ಟು ತೀವ್ರ ಪ್ರಮಾಣದಲ್ಲಿ ಬರ ಕಾಡಿರಲಿಲ್ಲ ಎಂದು ಧರ್ಮಾಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಭಕ್ತಾದಿಗಳು ಶ್ರೀಕ್ಷೆತ್ರ ದರ್ಶನವನ್ನು ಮುಂದೂಡುವಂತೆ ಧರ್ಮಾಧಿಕಾರಗಳು ಭಕ್ತರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಅನ್ನದಾಸೋಹಕ್ಕೂ ನೀರಿನ ಸಮಸ್ಯೆ ಎದುರಾಗಿದ್ದು, ಇನ್ನು 15 ದಿನ ಮಳೆ ಬರದಿದ್ದರೆ ಏನು ಮಾಡುವುದು ಎಂಬ ಚಿಂತೆ ಕಾಡತೊಡಗಿದೆ.

ಅನ್ನದಾಸೋಹಕ್ಕೆ ಪ್ರತೀನಿತ್ಯ 3 ಲಕ್ಷ ಲೀ. ನೀರು ಬಳಕೆಯಾಗ್ತಿದೆ. ಬರದ ಹಿನ್ನೆಲೆಯಲ್ಲಿ ನೀರಿನ ಅತಿಯಾದ ಬಳಕೆಗೆ ಬ್ರೇಕ್ ಹಾಕಲು ಆಡಳಿತ ಮಂಡಳಿ ಮುಂದಾಗಿದೆ. ಸ್ಟೀಲ್ ತಟ್ಟೆ ಬಳಸಿದಲ್ಲಿ ಅದನ್ನು ತೊಳೆಯಲು ಅಧಿಕ ನೀರು ಬೇಕಾಗುವ ಕಾರಣ ಎಲೆಯನ್ನು ಬಳಸಲು ತೀರ್ಮಾನಿಸಿದೆ.

ನೇತ್ರಾವತಿ ನದಿಯ ಉಪನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆಯಾಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ. ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಜನೆ ರೂಪಿಸಬೇಕು. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.