ಸಾಲಮನ್ನಾದ ಕನಸು ತೋರಿಸಿ ಕೈಕೊಟ್ರಾ ಸಿಎಂ?- ಅನ್ನದಾತನ ಮೂಗಿಗೆ ತುಪ್ಪ ಸವರಿ ಸುಮ್ಮನಾಗುತ್ತಾ ಸಮ್ಮಿಶ್ರ ಸರ್ಕಾರ?!

 

ad

ರಾಜ್ಯದಲ್ಲಿ ನಾಳೆ ಅಧಿಕಾರಕ್ಕೆ ಬರಲಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರಲ್ಲಿ ನೀರಿಕ್ಷೆಯ ಹೊಸ ಹುರುಪನ್ನು ಹುಟ್ಟುಹಾಕಿತ್ತು. ನುಡಿದಂತೆ ನಡೆಯುತ್ತೇವೆ ಎಂದ ಕುಮಾರಸ್ವಾಮಿ ಸಂಪೂರ್ಣ ಸಾಲ ಮನ್ನಾಮಾಡುತ್ತಾರೆ ಎಂದು ಅನ್ನದಾತರು ಕಾತರದಿಂದ ಕಾಯುತ್ತಿದ್ದರು. ಆದರೇ ಇದೀಗ ಕುಮಾರಸ್ವಾಮಿ ಕೊಟ್ಟ ಮಾತಿಗೆ ಮತ್ತೊಮ್ಮೆ ತಪ್ಪುವ ಮುನ್ಸೂಚನೆ ದೊರೆತಿದೆ. ಹೌದು ಸಾಲಮನ್ನಾಕ್ಕೆ ತಾರ್ಕಿಕ ಕಾರಣಗಳನ್ನು ಕೊಟ್ಟು ಅಡ್ಡ ಗೋಡೆಯ ದೀಪ ಇಡುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮಂಗಳೂರಿಗೆ ಭೇಟಿ ನೀಡಿದ ಕುಮಾರಸ್ವಾಮಿ ದೇವರ ದರ್ಶನದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದು, ಎರಡು ಪ್ರಣಾಳಿಕೆಗಳಿಗೆ ನ್ಯಾಯ ಒದಗಿಸುವ ಹೊಣೆಗಾರಿಕೆ ನನ್ನ ಮೇಲಿದೆ. ಅಲ್ಲದೇ ರಾಜ್ಯದ ಜನತೆಗೆ ಯಾವುದೇ ತೆರಿಗೆ ಹೊರೆಯಾಗದಂತೆ ಹಾಗೂ ಆರ್ಥಿಕವಾಗಿಯೂ ಸಮಸ್ಯೆಯಾಗದಂತೆ ನಿರ್ವಹಿಸಿ ರೈತರ ಹಿತ ಕಾಪಾಡಬೇಕಿದೆ ಎಂದಿದ್ದಾರೆ.

ಕುಮಾರಸ್ವಾಮಿ ಈ ಹೇಳಿಕೆ ರೈತರ ಸಾಲ ಮನ್ನಾ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಮಾತನ್ನು ನಂಬಿರುವ ರಾಜ್ಯದ ಲಕ್ಷಾಂತರ ರೈತರು ಸಾಲಬಾಧೆ ನಿವಾರಣೆಯಾಗುವ ಕನಸಿನಲ್ಲಿದ್ದರು. ಆದರೇ ಈಗ ಮೈತ್ರಿ ಸರ್ಕಾರದ ಹಿತ ಕಾಪಾಡುವ ಕಾರಣ ನೀಡಿ ಕುಮಾರಸ್ವಾಮಿ ಸಾಲಮನ್ನಾ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ರೈತ ವರ್ಗದ ಕಣ್ಣಿರಿಗೆ ಕಾರಣವಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿತ್ತು. ಇದರಿಂದಲೇ ಸರ್ಕಾರಕ್ಕೆ 8 ಸಾವಿರ ಕೋಟಿಯಷ್ಟು ಹೆಚ್ಚುವರಿ ವೆಚ್ಚವಾಗಿದೆ ಎನ್ನಲಾಗುತ್ತಿದೆ. ಇದೀಗ ಸಂಪೂರ್ಣ ಸಾಲ ಮನ್ನಾ ಮಾಡಿದಲ್ಲಿ ಮತ್ತೆ 55 ಸಾವಿರ ಕೋಟಿ ಅನುದಾನ ಬೇಕಾಗಲಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಸಾಲಮನ್ನಾವನ್ನು ಮುಂದೂಡಿಕೊಂಡು ಹೋಗುವ ಮೂಲಕ ಬ್ಯಾಲೆನ್ಸ್​ ನೀತಿ ಅನುಸರಿಸುತ್ತಾರೆ ಎನ್ನಲಾಗುತ್ತಿದೆ. ಏನಾಗುತ್ತೆ ಅನ್ನೋದನ್ನು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.