ನಾನು ಬೆಟ್​​ ಕಟ್ತಿನಿ- ಚೆನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ- ಇಂಧನ ಸಚಿವ ಡಿಕೆಶಿ ಓಪನ್ ಚಾಲೆಂಜ್

ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಕಾರಣಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಗರಿಗೆದರುತ್ತಿದೆ. ಹಾಲಿ ಶಾಸಕರು, ಸಚಿವರು ಸೇರಿದಂತೆ ಎಲ್ಲರೂ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್​​ನ ಗಟ್ಟಿನೆಲ ಎನ್ನಿಸಿರುವ ಚೆನ್ನಪಟ್ಟಣದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲೋದಿಲ್ಲ. ನಾನು ಬೆಟ್​​​ ಕಟ್ಟೋಕು ರೆಡಿ ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್​ ಚಾಲೆಂಜ್​ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ನಾಳೆ ಸಿಎಂ ಚನ್ನಪಟ್ಟಣಕ್ಕೆ ಬರ್ತಿದ್ದಾರೆ. ಅದು ಸರ್ಕಾರದ ಕಾರ್ಯಕ್ರಮ. ಕೆರೆ ತುಂಬಿಸುವ ಯೋಜನೆ ಮತ್ತು ಇತರೆ ಅಭಿವೃದ್ಧಿ ಯೋಜನೆಗೆ ರಾಮನಗರ ಜಿಲ್ಲೆಯಲ್ಲೇ ಚನ್ನಪಟ್ಟಣಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದೇವೆ. ನಾಳೆಯೂ ಸರ್ಕಾರದ ವತಿಯಿಂದ ಹತ್ತು ಹಲವಾರು ಯೋಜನೆಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.
ಇನ್ನು ಚುನಾವಣೋತ್ತರ ಸಮೀಕ್ಷೆಗಳ ವಿಚಾರದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ ಒಂದು ಸರ್ವೆ ಮಾಡಿಸುತ್ತಿದ್ದಾರೆ. ಪಕ್ಷದ ವತಿಯಿಂದ ಕೂಡ ಸರ್ವೆ ನಡೆದಿದೆ. ಹೀಗಾಗಿ ಬೇಕಿದ್ರೆ ಬೆಟ್ ಕಟ್ಟಲೂ ರೆಡಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್​ಗೆ ಟಾಂಟ್​ ನೀಡಿದರು.

 

 

 

ಇನ್ನು ರಾಹುಲ್ ಗಾಂಧಿ ಶೃಂಗೇರಿ ಭೇಟಿ ಕೊಡುವ ಕುರಿತು ಮಾತನಾಡಿದ ಡಿಕೇಶಿ, ಶೃಂಗೇರಿಗೂ ರಾಜೀವ ಗಾಂಧಿಗೂ ಅವಿನಾಭಾವ ಸಂಬಂಧವಿದೆ. ಶೃಂಗೇರಿ ಶಾರದಾಂಬೆಗೂ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಭೇಟಿ ನೀಡಿದರೂ ತಪ್ಪೇನಿಲ್ಲ ಎಂದರು. ಇನ್ನು ಕೂಡ್ಲಿಗಿಯ ಬಿಜೆಪಿ ಶಾಸಕ ಬಿ ನಾಗೇಂದ್ರ ಕಾಂಗ್ರೆಸ್ ಗೆ ಬರೋ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ನಾಗೇಂದ್ರ ನನ್ನ ಆತ್ಮೀಯ ಸ್ನೇಹಿತ. ನಮ್ಮ ಪಕ್ಷಕ್ಕೆ ಬಂದರೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದರು. ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣಾಪೂರ್ವ ಚಟುವಟಿಕೆ ಗರಿಗೆದರಿದೆ.