ಕಾಪಾಡಿ-ಕಾಪಾಡಿ ಅಂದ್ರೂ ಕ್ಯಾರೆ ಎನ್ನದ ಸ್ಥಳೀಯರು- ಬೀದರ್​ನಲ್ಲಿ ಅಮಾನವೀಯ ಘಟನೆ

ಅಪಘಾತದ ಸಂದರ್ಭದಲ್ಲಿ ಪ್ರತಿಕ್ಷಣವೂ ಅಮೂಲ್ಯ. ಒಂದು ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮನುಷ್ಯನ ಪ್ರಾಣ ರಕ್ಷಿಸಬಲ್ಲದು. ಹೀಗಾಗಿಯೇ ಸರ್ಕಾರ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಎಂದು ಮನವಿ ಮಾಡುತ್ತಲೇ ಇದೆ. ಆದರೂ ಇನ್ನು ಜನರು ಎಚ್ಚೆತ್ತುಕೊಂಡಿಲ್ಲ. ಇಂತಹುದೇ ಘಟನೆಯೊಂದು ಬೀದರ್​ನಲ್ಲಿ ನಡೆದಿದ್ದು, ಅಪಘಾತದ ವೇಳೆ ಗಾಯಗೊಂಡ ಬೈಕ್ ಸವಾರರು ಸವಾರರು ಸಹಾಯಕ್ಕೆ ಅಂಗಲಾಚುತ್ತ ರಸ್ತೆಯಲ್ಲೇ ಬಿದ್ದು ಒದ್ದಾಡಿದ್ದಾರೆ. ಆದರೂ ಯಾರು ಸಹಾಯಕ್ಕೆ ಧಾವಿಸದೇ ಅಮಾನವೀಯತೆ ಮೆರೆದಿದ್ದಾರೆ.

ಬೀದರ್​ ಜಿಲ್ಲೆಯ ಔರಾದ್​​ ತಾಲೂಕಿನ ಶೆಂಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಬೈಕ್​ ಸವಾರರು ಸಾಗುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ನೆಲಕ್ಕೆ ಬಿದ್ದ ಬೈಕ್​ ಸವಾರರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸಿದ್ದರೂ ಸ್ಥಳೀಯರ್ಯಾರು ಸಹಾಯಕ್ಕೆ ಬಂದಿಲ್ಲ.

ಬೈಕ್​ ಸವಾರರು ಅಪಘಾತದಿಂದ ಗಾಯಗೊಂಡು ಕಾಪಾಡಿ-ಕಾಪಾಡಿ ಎಂದು ಅಂಗಲಾಚಿದರೂ ಸ್ಥಳೀಯರು ಮೊಬೈಲ್​ನಲ್ಲಿ ದೃಶ್ಯಾವಳಿ ರೆಕಾರ್ಡ್​ ಮಾಡುವಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಬಳಿಕ ಎಚ್ಚೆತ್ತ ಸಾರ್ವಜನಿಕರು ಬೈಕ್​ ಸವಾರರನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಓರ್ವ ಬೈಕ್​ ಸವಾರ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಇನ್ನು ಕೂಡ ರಸ್ತೆ ಅಪಘಾತದ ವೇಳೆಯಲ್ಲಿ ಗಾಯಾಳುಗಳನ್ನು ರಕ್ಷಿಸುವ ಮನಸ್ಥಿತಿ ಜನರಿಗೆ ಬಾರದೇ ಇರೋದು ನಿಜಕ್ಕೂ ದುರಂತವೇ ಸರಿ.

https://www.youtube.com/watch?v=Aap1AIkUTxY