ಚುನಾವಣಾ ಕುರುಕ್ಷೇತ್ರ 2018 – ಬಾಗಲಕೋಟೆ

         ಬಾಗಲಕೋಟೆ  ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಾ ಇರೋ ಕ್ಷೇತ್ರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ. ಹೇಳಿ ಕೇಳಿ ಮಾಜಿ ಸಚಿವ ಹಾಲಿ ಶಾಸಕರಾಗಿರೋ ಹೆಚ್ ವೈ ಮೇಟಿ ಅವ್ರ ಕ್ಷೇತ್ರ. ಈ ಕ್ಷೇತ್ರದ ಮೇಲೆ ಇಡೀ ರಾಜ್ಯದ ಕಣ್ಣು ಇದೆ. ಹಾಗಿದ್ರೆ ಇಲ್ಲಿನ ರಾಜಕೀಯ ಪರಿಸ್ಥಿತಿ ಗಳೇನು ನೋಡೋಣ ಬನ್ನಿ.

 

ಬಾಗಲಕೋಟೆ ವಿಧಾನಸಭಾ ಕ್ಷೇತ್ರ. ಬಾಗಲಕೋಟೆ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಹಿಂದೂಪರ ಸಂಘಟನೆಯ ತವರು ಇದು. ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಮೂರೂವರೆ ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಗೆಲವು ಮರೀಚಿಕೆಯಾಗಿತ್ತು..ಆದ್ರೆ ಕಳೆದ ಚುನಾವಣೆಯಲ್ಲಿ ಬಿಜೆಪಿ,ಕೆಜೆಪಿ ನಡುವಿನ ಗೊಂದಲ,ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವೀರಣ್ಣ ಚರಂತಿಮಠ ಅವರ ರಾಜೀ ಇಲ್ಲದ ನಿಲುವುಗಳು ಹಾಗೂ ಕಾಂಗ್ರೆಸ್’ನ ಎಚ್.ವೈ.ಮೇಟಿ ಅವರ ರಾಜಕೀಯ ತಂತ್ರಗಾರಿಕೆಯಿಂದ ಬಿಜೆಪಿ ಸೋಲು ಅನುಭವಿಸಬೇಕಾಯಿತು. ಕಾಂಗ್ರೆಸ್‌ನ ಎಚ್.ವೈ.ಮೇಟಿ ಗೆಲುವಿನ ನಗೆ ಬೀರೋದಕ್ಕೆ ಸಾಧ್ಯವಾಯ್ತು. ಅಷ್ಟೇ ಅಲ್ಲ ಇಲ್ಲಿಂದ ಗೆದ್ದ ಮೇಟಿ ಅವ್ರು ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರೂ ಆಗಿದ್ರು. ಇಷ್ಟೆಲ್ಲಾ ರಾಜಕೀಯ ಇತಿಹಾಸವಿರೋ ಬಾಗಲಕೋಟೆ ಕ್ಷೇತ್ರದಲ್ಲಿ ಮತ್ತೆ ವಿಧಾಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಗಿದ್ರೆ ಇಲ್ಲಿನ ಇನ್ನೊಂದಷ್ಟು ರಾಜಕೀಯ ಬೆಳವಣಿಗೆಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

2013ರ ಮತಬರಹ

ಇದು 2013ರ ಮತಬರಹ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಎಚ್ ವೈ ಮೇಟಿ 67749 ಮತಗಳನ್ನು ಪಡೆಯೋದ್ರ ಮೂಲಕ ಗೆದ್ದು ಶಾಸಕರಾದ್ರು. ಇನ್ನು ಅವ್ರಿಗೆ ಪ್ರಬಲ ಪೈಪೋಟಿ ನೀಡಿದ ಬಿಜೆಪಿಯ ವೀರಣ್ಣ ಚರಂತಿ ಮಠ 64819 ಮತಗಳನ್ನು ಪಡೆದು ಸೋತ್ರು.

 

 

ಹೌದು ಈ ಹಿಂದಿನಿಂದಲೂ ಬಾಗಲಕೋಟೆ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. 1999ರಿಂದ 2004 ವರೆಗೂ ಇಲ್ಲಿ ಬಿಜೆಪಿ ಗೆದ್ದಿತ್ತು. ಈಗ ಕಾಂಗ್ರೆಸ್ ನಲ್ಲಿ ಗುರ್ತಿಸಿಕೊಂಡಿರೋ ಮಾಜಿ ಶಾಸಕ ಪಿ.ಎಚ್.ಪೂಜಾರ ಇಲ್ಲಿ ಶಾಸಕರಾಗಿದ್ದರು ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ 2004ರಲ್ಲಿ ಬಿಜೆಪಿ, ಪಿ.ಎಚ್.ಪೂಜಾರ ಬದಲಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ನೀಡಿತು. ಆಗ ಬಿಜೆಪಿ ವೀರಣ್ಣ ಚರಂತಿಮಠ ಗೆದ್ದು ಶಾಸಕರಾಗಿದ್ರು.2008ರಲ್ಲಿ ಮತ್ತೆ ಗೆದ್ದಿದ್ರು. ಆದ್ರೆ ಆದ್ರೆ ಕಳೆದ ಬಾರಿಯ ಎಲೆಕ್ಷನ್ ನಲ್ಲಿ ಬಿಜೆಪಿ ಮಾಡಿಕೊಂಡಿರೋ ಸ್ವಯಂಕೃತಾಪರಾಧ, ಒಳಜಗಳ, ವಿರಣ್ಣ ಚರಂತಿ ಮಠ ಅವ್ರ ವರ್ತನೆ ಬಿಜೆಪಿ ಸೋಲಿಗೆ ಕಾರಣವಾದ್ರೆ ಕಾಂಗ್ರೆಸ್ ನ ಮೇಟಿ ಅವ್ರ ರಾಜಕೀಯ ತಂತ್ರಗಾರಿಕೆ ಕೂಡಾ ಕಾಂಗ್ರೆಸ್ ಗೆಲುವಿಗೆ ಕಾರಣವಾಯ್ತು. ಕಳೆದ ಬಾರಿ ಸುಮಾರು 2930 ಮತಗಳ ಅಂತರದಿಂದ ಮೇಟಿ ಅವ್ರು ಇಲ್ಲಿ ಗೆಲ್ಲೋದ್ರ ಮೂಲಕ ಕಾಂಗ್ರೆಸ್ ಪತಾಕೆ ಹಾರಿಸಿದ್ರು. ಅಷ್ಟೇ ಅಲ್ಲ ಸಿದ್ದರಾಮಯ್ಯನವರ ಸಂಪುಟದಲ್ಲಿ ಮೇಟಿ ಅಬಕಾರಿ ಸಚಿವರೂ ಆದ್ರೂ. ಆದ್ರೆ ಮೇಟಿ ಅವರಿಗೆ ಮಹಿಳೆಯ ಪ್ರಕರಣ ಒಂದು ಮೈನಸ್ ಪಾಯಿಂಟ್ ಆಗಿಬಿಡ್ತು. ಇದನ್ನು ಹೊರತು ಪಡಿಸಿದ್ರೆ ಮೇಟಿ ಅವ್ರು ತಮ್ಮ ಕ್ಷೇತ್ರದಲ್ಲಿ ಓಡಾಡ್ತಾ ಅಭಿವೃದ್ಧಿ ಕೆಲ್ಸಗಳನ್ನು ಮಾಡಿದ್ದಾರೆ. ಇನ್ನು ಬಿಜೆಪಿ ಕೂಡಾ ಮತ್ತೆ ತಮ್ಮ ಕೋಟೆಯನ್ನು ಕೈ ಪಾಳಯದಿಂದ ವಶಕ್ಕೆ ಪಡೆಯೋದಕ್ಕೆ ಟ್ರೈ ಮಾಡ್ತಿದೆ. ಹಾಗಿದ್ರೆ ಬನ್ನಿ ಈ ಬಾರಿ ಯಾವ್ಯಾವ ಪಕ್ಷದಿಂದ ಯಾರ್ಯಾರು ಅದೃಷ್ಟ ಪರೀಕ್ಷೆಗೆ ಇಳಿತಾರೆ ಅನ್ನೋದನ್ನು ನೋಡಣ

ಕೈ ಅಭ್ಯರ್ಥಿ

ಹಾಲಿ ಶಾಸಕ,ಮಾಜಿ ಸಚಿವರಾಗಿರೋ ಎಚ್ ವೈ ಮೇಟಿ ಈ ಬಾರಿ ಮತ್ತೊಮ್ಮೆ ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿಯೋದು ಗ್ಯಾರಂಟಿ. ಯಾಕಂದ್ರೆ ಬಿಜೆಪಿಯ ವಶದಲ್ಲಿದ್ದ ಕ್ಷೇತ್ರವನ್ನು ಕಳೆದ ಬಾರಿ ಅವ್ರು ಕಾಂಗ್ರೆಸ್ ಗೆ ತಂದುಕೊಟ್ಟಿದ್ರು. ಇನ್ನು ಶಾಸಕರಾದ ಮೇಲೆ ಸಚಿವರಾದ ಮೇಲೆ ಮೇಟಿ ಸುಮ್ಮನೆ ಕೂತವರಲ್ಲ. ತನ್ನ ಕ್ಷೇತ್ರವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಅನ್ನೋ ಲೆಕ್ಕಾಚಾರವನ್ನು ಇಟ್ಕೊಂಡು ಸಾಕಷ್ಟು ಕೆಲ್ಸಗಳನ್ನು ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ,ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು,ರಾಂಪುರದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆರಂಭ.ಐತಿಹಾಸಿಕ ಮುಚಖಂಡಿ ಕೆರೆ ಹೂಳೆತ್ತುವ ಕಾಮಗಾರಿ ,ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಕೆರೆ ತುಂಬಿಸುವುದು ಸೇರಿದಂತೆ ಮುಳುಗಡೆ ಜನರ ಸಮಸ್ಯೆಗಳಿಗೆ ಮೇಟಿ ಅವ್ರು ಸ್ಪಂದಿಸಿದ್ದಾರೆ.ಅಷ್ಟೇ ಅಲ್ಲ ಹಲವು ಅಭಿವೃದ್ಧಿ ಪರ ಯೊಜನೆಗಳಿಗೆ ಅನುಮೋದನೆ ಕೂಡಾ ಪಡ್ಕೊಂಡಿದ್ದಾರೆ. ಹಾಗಾಗಿ ಎಚ್ ವೈ ಮೇಚಿ ಅವ್ರ ಬಗ್ಗೆ ಕ್ಷೇತ್ರದ ಜನರಿಗೆ ಅಪಾರ ಒಲವಿದೆ. ಇನ್ನುಳಿದಂತೆ. ಮೇಟಿ ಸಿದ್ಧರಾಮಯ್ಯನವರ ಆಪ್ತ .ಅಲ್ಲದೇ ಪ್ರಬಲ ಕುರುಬ ಸಮುದಾಯದ ಮುಖಂಡ. ಹೀಗಾಗಿ ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಇಟ್ಟುಕೊಂಡಿರುವ ಹಾಗೂ ಅಹಿಂದ ಮತಗಳನ್ನು ತನ್ನೆಡೆಗೆ ಸೆಳೆಯುವ ಶಕ್ತಿ ಇರೋ ಮೇಟಿ ಅವರಿಗಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವುದಕ್ಕೆ ಮೇಟಿ ಸಿದ್ಧತೆ ನಡೆಸಿದ್ದಾರೆ ಆದ್ರೆ ಮೇಟಿ ಅವರಿಗೆ ಮಹಿಳೆಯ ಪ್ರಕರಣ ಒಂದು ಹಿನ್ನಡೆಯನ್ನುಂಟು ಮಾಡಿತ್ತು ನಿಜ. ಆ ಪ್ರಕರಣದಿಂದ ಮೇಟಿ ಅವ್ರು ಸಚಿವಸ್ಥಾನದಿಂದ ಕೆಳಗಿಳಿಯಬೇಕಾಯ್ತು. ಆದ್ರೆ ಅದು ಮೇಟಿಯವ್ರನ್ನು ಹಣಿಯೋದಕ್ಕೆ ಮಾಡಿರೋ ಪಿತೂರಿ ಅಂತಾನೇ ಇಲ್ಲಿನ ಜನ ಮಾತಾಡ್ತಿದ್ದಾರೆ. ಹಾಗಾಗಿ ಈ ಆರೋಪಗಳಿಗೆ ಮೇಟಿ ತಲೆ ಕೆಡಿಸಿಕೊಂಡಿಲ್ಲ. ಇನ್ನು ಈ ತರಹದ ಆರೋಪ ಮೇಟಿ ಅವ್ರ ಮೇಲೆ ಬಂದಿದ್ರೂ ಕೂಡಾ ಅವ್ರ ಜತೆಗಿದ್ದವರು ಯಾರೂ ಮೇಟಿಯವರನ್ನು ಬಿಟ್ಟು ಹೋಗಿಲ್ಲ ಹಾಗಾಗಿ ಈ ಬಾರಿ ಮೇಟಿ ಮತ್ತೆ ಜಯಭೇರಿ ಬಾರಿಸೋ ಸಾಧ್ಯತೆ ಜಾಸ್ತಿ ಇದೆ.

ಕಮಲ ಮುಡಿಯೋರ್ಯಾರು?

ಕಳೆದ ಬಾರಿ ಮೇಟಿ ಅವ್ರ ವಿರುದ್ಧ ಸೋತಿದ್ದ ಬಿಜೆಪಿಯ ವೀರಣ್ಣ ಚರಂತಿ ಮಠ ಅವ್ರೇ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿತಾರೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಹಾಗೂ ಕೆ.ಜೆ.ಪಿ ಗೊಂದಲ, ವೀರಣ್ಣ ಚರಂತಿಮಠ ಅವರ ರಾಜೀ ಆಗದ ಕೆಲವು ನಿಲುವುಗಳು,ಪಕ್ಷದ ಪ್ರಮುಖರು ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಮಾಡಿತ್ತು. ಇದು ಬಿಜೆಪಿಯ ಸೋಲಿಗೆ ಕಾರಣವಾಯ್ತು. ಆದ್ರೆ ಇಷ್ಟೆಲ್ಲಾ ಆಗಿ ಪಕ್ಷ ಸೋಲೋದಕ್ಕೆ ಕಾರಣವಾದ್ರೂ ಕೂಡಾ ಮಾಜಿ ಶಾಸಕ ವಿರಣ್ಣ ಚರಂತಿಮಠ ಮತ್ತೆ ಕಣಕ್ಕಿಳಿಯಲಿದ್ದಾರೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರು ಆಗಿರುವ ಚರಂತಿ ಮಠ ತಮ್ಮ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲ್ಸ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅಂತಾ ಅವ್ರ ಬೆಂಬಲಿಗರು ಹೇಳ್ತಿದ್ದಾರೆ. ಆದ್ರೆ ಈ ಹಿಂದಿನ ಚುನಾವಣೆಯಲ್ಲಿ ಇವರ ಹಿಂದೆ ಗುರ್ತಿಸಿಕೊಂಡಿದ್ದ ಪ್ರಬಲ ಮುಖಂಡರು ಚರಂತಿ ಮಠ ಅವ್ರ ರಾಜೀಯಾಗದ ಗುಣ,ಹರಿತ ಬಾಯಿ ಮುಂಗೋಪ ಕಾರ್ಯಕರ್ತರನ್ನು ದೂರ ಇಡೋ ವರ್ತನೆಯಿಂದ ಬೇಸತ್ತು ಕಾಂಗ್ರೆಸ್ ಸೇರಿಕೊಂಡು ಮೇಟಿ ಅವರ ಗೆಲುವಿಗೆ ಶ್ರಮಿಸಿದ್ದರು. ಹಾಗಾಗಿ ಕಳೆದ ಬಾರಿ ಮೇಟಿ ಗೆದ್ದಿದ್ರು. ಈಗಲೂ ಆ ಮುಖಂಡರೆಲ್ಲ ಮೇಟಿ ಅವರ ಜೊತೆಗೆ ಇದ್ದಾರೆ..ಹೀಗಾಗಿ ಚರಂತಿಮಠ ಅವರ ನಡುವಳಿಕೆ ಅವ್ರಿಗೆ ಹಾಗೂ ಬಿಜೆಪಿಗೆ ಈ ಬಾರಿ ಕೂಡಾ ದೊಡ್ಡ ಹಿನ್ನಡೆಯನ್ನುಂಟುಮಾಡಬಹುದು.

ತೆನೆ ಹೊರೋದ್ಯಾರು?

ಬಾಗಲಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಅನಾಥವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕದ ಯಾವುದಾದರೂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಮಾತು ಹೊರ ಬಿದ್ದ ತಕ್ಷಣ ಜೆಡಿಎಸ್ ಪಕ್ಷದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಜೆಡಿಎಸ್ ತಲ್ಲೀನವಾಗಿದೆ. ಜೆಡಿಎಸ್ ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಜೆಡಿಎಸ್ ಮುಖಂಡ ಮೋಹನ ಜಿಗಳೂರು ತಾವೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದ್ರೆ ಜೆಡಿಎಸ್ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಜೆಡಿಎಸ್ ಪಕ್ಷದಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಗೊಂದಲ,ಕಾರ್ಯಕರ್ತರ ಅಸಮಾಧಾನಗಳು ಇದ್ದೇ ಇವೆ.ಇವನ್ನೆಲ್ಲ ನಿಭಾಯಿಸಿಕೊಂಡು ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಬೇಕೆನ್ನುವುದು ಜೆಡಿಎಸ್ ಲೆಕ್ಕಾಚಾರ. ಹಾಗಾಗಿ ಮೋಹನ ಜಿಗಳೂರು ಅವರನ್ನೇ ಅಭ್ಯರ್ಥಿಯಾಗಿ ಪಕ್ಷ ಘೋಷಿಸುತ್ತಾ?ವಲಸೆ ಬಂದವರಿಗೆ ಮಣೆ ಹಾಕುತ್ತಾ ಕಾದು ನೋಡಬೇಕು

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 284108 ಮತದಾರರಿದ್ದು,30000 ಕುರುಬ ಸಮಾಜದ ಮತಗಳು ಇರೋದ್ರಿಂದ ಅವರೇ ಇಲ್ಲಿ ನಿರ್ಣಾಯಕರು ಹಾಗೂ ಪ್ರಭಾವ ಬೀರೋ ಮತದಾರರು. ಹಾಲಿ ಶಾಸಕ ಮೇಟಿ ಕೂಡ ಕುರುಬ ಸಮಾಜದವರಾದ್ದರಿಂದ ಅವರಿಗೆ ಇದು ಪ್ಲಸ್ ಪಾಯಿಂಟ್.ಇಲ್ಲಿ ಅಹಿಂದ ಮತಗಳು ಜಾಸ್ತಿ ಇರೋದ್ರಿಂದ ಸಿದ್ಧರಾಮಯ್ಯನವರ ಪ್ರಭಾವ ಇಲ್ಲಿ ವರ್ಕೌಟ ಆಗುತ್ತೆ. ಬಿಜೆಪಿ ವಿಚಾರ ಮಾತಾಡೋಡಾದ್ರೆ ಚರಂತಿಮಠ ಲಿಂಗಾಯತ ಮುಖಂಡರು. ಆದ್ರೆ ವೀರಶೈವ ಲಿಂಗಾಯತ ಧರ್ಮದ ಹೋರಾಟ ಇಲ್ಲಿ ಅಷ್ಟೊಂದು ಪರಿಣಾಮ ಬೀರಲ್ಲ. ವೀರಶೈವ-ಲಿಂಗಾಯತರ ಒಳಪಂಗಡಗಳ ಮತಗಳು ಕೂಡ ಹೆಚ್ಚಾಗಿದ್ರೂ ನೇರ ಪರಿಣಾಮ ಬೀರುವುದಿಲ್ಲ. ಈ ಕ್ಷೇತ್ರದ ಮೇಲೆ ಮಾಜಿ ಸಿಎಂ ಯಡಿಯೂರಪ್ಪನವರ ಪ್ರಭಾವ ಕೂಡ ಇದೆ. ಆದ್ರೆ ಈ ಬಾರಿ ಇಲ್ಲಿ ಅದು ಹೇಗೆ ವರ್ಕೌಟ್ ಆಗತ್ತೆ ನೋಡಬೇಕು. ಒಟ್ಟಾರೆ ಪ್ರತಿಸಲದಂತೆ ಈ ಬಾರಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದ್ದು, ಕಳೆದ ಬಾರಿಯ ಫಲಿತಾಂಶವೇ ಮರುಕಳಿಸೋ ಸಾಧ್ಯತೆ ಇದೆ.

ಸದ್ಯದ ರಾಜಕೀಯ ಸ್ಥಿತಿಗತಿಗಳನ್ನ ನೋಡೋದಾದ್ರೆ ಬಾಗಲಕೋಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಇದೆ. ಆದ್ರೆ ಈ ಬಾರಿ ಮೇಟಿ ಅವ್ರ ಮೇಲೆ ಜನರಿಗೆ ಸ್ವಲ್ಪ ಜಾಸ್ತಿ ಒಲವಿದೆ. ಮೇಟಿ ಅವರು ಸೌಮ್ಯ ಸ್ವಭಾವದವರು ಹಾಗೂ ಅವ್ರು ತಮ್ಮ ಮೇಲೆ ಬಂದಿರೋ ಆರೋಪಗಳು ಎಷ್ಟೇ ಇದ್ರೂ ಅದೆಲ್ಲವನ್ನೂ ಬದಿಗಿರಿಸಿ ಕ್ಷೇತ್ರದಲ್ಲಿ ಮಾಡ್ತಿರೋ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸನ್ನು ಗೆದ್ದಿವೆ. ಹೀಗಾಗಿ ಅವರ ನಡವಳಿಕೆ, ವಯ್ಯಕ್ತಿಕ ವರ್ಚಸ್ಸು, ಬೆನ್ನಿಗಿರೋ ಪ್ರಬಲ ಕುರುಬ ಸಮುದಾಯ,ಜತೆಗೆ ಬಿಜೆಪಿಯಲ್ಲಿರೋ ಅಸಮಾಧಾನಗಳು ಮೇಟಿ ಅವ್ರಿಗೆ ಪ್ಲಸ್ ಪಾಯಿಂಟ್. ಹಾಗಾಗಿ ಕಾಂಗ್ರೆಸ್ ನಿಂದ ಮಾಜಿ ಸಚಿವ ಎಚ್ ವೈ ಮೇಟಿ ಕಣಕ್ಕಿಳಿದದ್ದೇ ಆದ್ರೆ ಗೆಲುವು ಅವರದ್ದೆ ಅಂತಿದ್ದಾರೆ ಇಲ್ಲಿನ ಮತದಾರರು