ಚುನಾವಣಾ ಕುರುಕ್ಷೇತ್ರ 2018 – ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ)

 

ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಜೆಡಿಎಸ್ ನ ಪಿಳ್ಳ ಮುನಿಶ್ಯಾಮಪ್ಪ ಇಲ್ಲಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ನೇರ ಹಣಾಹಣಿಯ ಕ್ಷೇತ್ರ ಇದಾಗಿದ್ದು ಈ ಬಾರಿ ಇಲ್ಲೇನಾಗತ್ತೆ ಅನ್ನೋದನ್ನು ಹೇಳ್ತೀವಿ ನೋಡಿ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರೋ ದೇವನ ಹಳ್ಳಿ ಅಂದಾಗ ನೆನಪಾಗೋದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಜತೆಗೆ ಐತಿಹಾಸಿಕ ಟಿಪ್ಪು ಜನ್ಮ ಸ್ಥಳ. ಕೃಷಿ ಪ್ರಧಾನ ದೇವನಹಳ್ಳಿ ಕ್ಷೇತ್ರ ಮಳೆಯಾಧಾರಿತ ಕೃಷಿಗೆ ಹಸೆರಾದ ಪ್ರದೇಶ. ಬೆಂಗಳೂರಿಗೆ ಈ ಹಿಂದೆ ತರಕಾರಿ ಬರ್ತಿದ್ದಿದ್ದು ಇಲ್ಲಿಂದಲೇ. ಆದ್ರೆ ಅಂತಾರಾಷ್ಠ್ರೀಯ ವಿಮಾನ ನಿಲ್ದಾಣ ನೆಪದಲ್ಲಿ ಇದ್ದಬದ್ದ ಜಮೀನೆಲ್ಲಾ ರೈತರು ಕಳೆದುಕೊಂಡ್ರು. ಕೆಲ್ಸ ಇಲ್ಲದೆ ಸುಮಾರು ಕುಟುಂಬಗಳು ಬೀದಿಪಾಲಾಯ್ತು. ಇನ್ನು ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಎರಡು ಪುರಸಭೆಗಳು ಹಾಗೂ 4 ಜಿಲ್ಲಾ ಪಂಚಾಯ್ತಿ 15 ತಾಲೂಕು ಪಂಚಾಯ್ತಿಯನ್ನು ಒಳಗೊಂಡಿದೆ. ಇಲ್ಲಿನ ರಾಜಕೀಯ ವಿಶೇಷತೆ ಅಂದ್ರೆ ಕ್ಷೇತ್ರದ ಇತಿಹಾಸದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದ ಇತಿಹಾಸ ಇಲ್ಲ. ಆದ್ರೂ ಈ ಬಾರಿ ಚುನಾವಣೆ ಭಿನ್ನವಾಗಿದೆ. ಹಳ್ಳಿ ಗಾಡಿನ ಪ್ರದೇಶವಾಗಿರೋ ದೇವನಹಳ್ಳಿ ಹಳ್ಳಿ ವಿಜಯಪುರ ,ದೇವನಹಳ್ಳಿ ಪುರಸಭೆಯನ್ನೊಳಗೊಂಡಿದೆ. ಈ ಕ್ಷೇತ್ರ ಹಿಂದೆ ಹೇಗಿತ್ತೋ ಹಾಗೇ ಇದೆ. ನಿಮಗೊಂದು ವಿಷ್ಯ ಹೇಳ್ತೀವಿ ಆಶ್ಚರ್ಯ ಆಗಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರೋ ವಿಶ್ವ ವಿಖ್ಯಾತಿಯ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಇವತ್ತಿಗೂ ಒಳಚರಂಡಿ ವ್ಯವಸ್ತೆ ಇಲ್ಲ. ಆದ್ರೂ 2018ರ ಮಹಾಸಮರಕ್ಕೆ ದೇವನಹಳ್ಳಿ ಸಜ್ಜಾಗ್ತಿದೆ. ಜೆಡಿಎಸ್ ಕಾಂಗ್ರೆಸ್ ಪ್ರಬಲವಾಗಿ ಬೇರೂರಿರುವ ಪಕ್ಷಗಳು. ಬಿಜೆಪಿ ಇಲ್ಲಿ ಸುಧಾರಿಸಿಲ್ಲ ಸುಧಾರಿಸೋದು ಇಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಇಲ್ಲಿನ ಇನ್ನಷ್ಚು ವಿಷಯಗಳನ್ನು ಹೇಳೋದಕ್ಕೂ ಮೊದಲು 2013ರ ಮತಬರಹ ನೋಡೋಣ

 

 

2013ರ ಮತಬರಹ

ಇದು 2013ರ ಮತಬರಹ ಜೆಡಿಎಸ್ ಪಿಳ್ಳಮುನಿಶ್ಯಾಮಪ್ಪ 70323 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರೆ, ಕಾಂಗ್ರೆಸ್ ನ ವೆಂಕಟಸ್ವಾಮಿ 68381 ಮತಗಳನ್ನು ಪಡೆದ್ರು. ಇನ್ನು ಬಿಜೆಪಿಯ ಶ್ರೀ ಚಂದ್ರಣ್ಣ ಕೇವಲ 9418 ಮತಗಳನ್ನಷ್ಟೇ ಪಡೆದ್ರು.

2008 ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವೆಂಕಟ ಸ್ವಾಮಿ ಗೆದ್ದು ಶಾಸಕರಾದ್ರು. 2013ರಲ್ಲಿ ಗೆದ್ದೇ ಬಿಡ್ತಾರೆ ಅನ್ನುವಷ್ಟರಲ್ಲಿ ಜೆಡಿಎಸ್ ನ ಪಿಳ್ಳಮುನಿಶ್ಯಾಮಪ್ಪ ಗೆದ್ದು ವಿಧಾನಸಭೆಗೆ ಆಯ್ಕೆಯಾದ್ರು. 2013 ಆದ ಮೇಲೆ ದೇವನಹಳ್ಳಿಯ ರಾಜಕೀಯ ಚಿತ್ರಣ ಬದಲಾಯ್ತು. ರಾಜಕೀಯ ಮಾಡೋದಕ್ಕಾಗೇ ಇಲ್ಲಿಗೆ ಸುಮಾರು ಜನ ಬಂದ್ರು. ಜೆಡಿಎಸ್ ಕಾಂಗ್ರೆಸ್ ಇಲ್ಲಿ ಜಿದ್ದಾ ಜಿದ್ದಿನ ಫೈಟ್ ಗೆ ಬಿತ್ತು. ಈ ಫೈಟ್ ನ್ಲಲಿ ಕಾಂಗ್ರೆಸ್ 2 ಬಣ ಆಗೋಯ್ತು. ಜೆಡಿಎಸ್ ಗೆ ಹೊಸ ಮುಖಂಡರು ಬಂದು ಸೇರಿಕೊಂಡ್ರು. ಸಿ ನಾರಾಯಣ ಸ್ವಾಮಿ ಹಿರಿಯ ರಾಜಕಾರಣಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋದ್ರು. ಮತ್ತೆ ಜೆಡಿಎಸ್ ಗೆ ನಿಸರ್ಗ ನಾರಾಯಣ ಸ್ವಾಮಿ ಸೇರಿದ್ರು. ಇನ್ನು ಈ ಬಾರಿ  ಕಾಂಗ್ರೆಸ್ ನಲ್ಲಿ ಹಳೇ ಹುಲಿಗಳ ಅಬ್ಬರ ಜೆಡಿಎಸ್ ನ ಕಟ್ಟಾಳುಗಳ ಕಲರವ ಇಡೀ ಕ್ಷೇತ್ರವೇ ರಾಜಕೀಯ ರಣರಂಗವನ್ನಾಗಿಸಿವೆ. ಹಾಗಾದ್ರೆ ಯಾರ್ಯಾರು ಕಣದಲ್ಲಿರ್ತಾರೆ ಅವ್ರ ಬಲಾಬಲಾ ಏನು ನೋಡೋಣ

ತೆನೆ ಹೊರೋದ್ಯಾರು?

2013ರಲ್ಲಿ ಮಾಜಿ ಶಾಸಕ ಜಿ ಚಂದ್ರಣ್ಣ ಹಾಗೂ ಪಿಳ್ಳ ಮುನಿಶ್ಯಾಮಪ್ಪನವರ ನಡುವೆ ಟಿಕೆಟ್ ಗಾಗಿ ಫೈಟ್ ನಡೆದಿತ್ತು. ಆದ್ರೆ ಶಾಸಕರನ್ನು ಬಿಟ್ಟು ಪಿಳ್ಳ ಮನುನಿಶ್ಯಾಮಪ್ಪಗೆ ಟಿಕೆಟ್ ಕೊಡಲಾಗಿತ್ತು..ಅವ್ರು ಗೆದ್ದು ಶಾಸಕರಾದ್ರು. ಪಿಳ್ಳ ಮುನಿಶ್ಯಾಮಪ್ಪ ಗೆದ್ದಿದ್ದೇ ತಡ ಸಿ ನಾರಾಯಣ ಸ್ವಾಮಿ ಪಕ್ಷ ಬಿಟ್ರು. ಸಂಪೂರ್ಣ ಜವಾಬ್ದಾರಿ ಪಿಳ್ಳ ಮುನಿಶ್ಯಾಮಪ್ಪ ಮೇಲೆ ಬಿತ್ತು. ಸಜ್ಜನ ವ್ಯಕ್ತಿ ಅಂತಾ ಅನ್ನಿಸಿಕೊಂಡ ಶಾಸಕರು ಪಕ್ಷ ಸಂಘಟನೆ ಕ್ಷೇತ್ರ ಅಭಿವೃದ್ಧಿ ಒಟ್ಟಿಗೆ ನಿಭಾಯಿಸಕ್ಕೆ ಕಷ್ಟ ಪಡಬೇಕಾಯ್ತು.ಪಿಳ್ಳ ಮುನಿಶ್ಯಾಮಪ್ಪ ಒಬ್ಬರಿಗೆ ತೊಂದರೆ ಕೊಟ್ಟವರಲ್ಲ ರಿಸ್ಕ್ ತೆಗೊಂಡವರೂ ಅಲ್ಲ. ಡಿಢೀರ್ ಚುನಾವಣೆಗಳನ್ನು ಎದುರಿಸೋದ್ರಲ್ಲಿ ವಿಫಲರಾಗಿದ್ರಿಂದ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಪಾಲಾದ್ವು. ಆದ್ರೆ ಜನಸಾಮಾನ್ಯರ ಕೈಗೆ ಶಾಸಕರು ಸಿಗ್ತಾರೆ ಅನ್ನೋದು ಮಾತ್ರ ಇವ್ರ ಪ್ಲಸ್ ಪಾಯಿಂಟ್. ಆದ್ರೂ ಈ ಭ್ರಷ್ಟ ವ್ಯವಸ್ಥೆಯಿಂದ ಪಿಳ್ಳ ಮುನಿಶ್ಯಾಮಪ್ಪ ಬೇಜಾರಾಗ್ಬಿಟ್ಟಿದ್ದಾರೆ. ನನಗೆ ರಾಜಕೀಯ ಬೇಡಾ ಅಂತಾ ಒಂದ್ಸಲ ರಾಜೀನಾಮೆ ಕೊಟ್ಟಿದ್ರು. ಆದ್ರೆ ದೇವೇಗೌಡ್ರು ಪಕ್ಷ ಬಿಡೋದು ಬೇಡ ರಾಜಕೀಯ ಬಿಡೋದು ಬೇಡ ಇದನ್ನೆಲ್ಲಾ ಎದುರಿಸಬೇಕು ಅಂತಾ ಮನವೊಲಿಸಿದ್ರು. ಆದ್ರೆ ಈ ಬಾರಿ ಇವ್ರಿಗೆ ಟಿಕೆಟ್ ಸಿಗೋದು ಕಷ್ಟ ಅಂತಾನೇ ಹೇಳಲಾಗ್ತಿದೆ.

ನಿಸರ್ಗ ನಾರಾಯಣ ಸ್ವಾಮಿ ಜೆಡಿಎಸ್ ಮುಖಂಡ. ಸಮಾಜ ಸೇವಕ. ಬಿದಿಲೂರಿನ ಚೆನ್ನಕೇಶವ ದೇವಸ್ಥಾನ ಜೀರ್ಣೋದ್ದಾರದ ಮೂಲಕ 4ವರ್ಷಗಳಿಂದ ದೇವನಹಳ್ಳಿಯಲ್ಲಿ ರಾಜಕೀಯ ಕ್ಕೆ ಬಂದ ಇವ್ರು ಹಿಂತಿರುಗಿ ಹೋಗಿಲ್ಲ. ಇಡೀ ಕ್ಷೇತ್ರದಲ್ಲಿ ಸಿಕ್ಕ 4 ವರ್ಷದ ಸಮಯದಲ್ಲಿ 155 ದೇವಸ್ಥಾನಗಳ ಜೀರ್ಣೋದ್ದಾರ ಸೇರಿದಂತೆ  ಹೆಲ್ತ್ ಕ್ಯಾಂಪ್, ಕಿಡ್ನಿ ಚಿಕಿತ್ಸೆ, ಮಹಿಳೆಯರಿಗೆ ಆರೋಗ್ಯ ತಪಾಸಣೆ ಹೀಗೆ ಹತ್ತಾರು ಸಮಾಜ ಮುಖಿ ಕೆಲ್ಸಗಳ ಮೂಲಕ ದೇವನಹಳ್ಳಿಯಲ್ಲಿ ಗುರುತಿಸಿಕೊಂಡ್ರು. ದಿನೇ ದಿನೇ ಇಡೀ ಕ್ಷೇತ್ರದಲ್ಲಿ ಅಘೋಷಿತ ರಾಜಕೀಯ ನಾಯಕರಾಗಿ ಬೆಳೆಯುತ್ತಿದ್ದಾರೆ. ಇವ್ರ ಬಗ್ಗೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ಯಾರೋ ಮಾಹಿತಿ ಕೊಟ್ರು. ಹೆಚ್ಡಿಕೆ ಹೇಳಿ ಕೇಳಿ ರಾಜಕೀಯದಲ್ಲಿ ನಿಪುಣರು. ತಕ್ಷಣ ಅವ್ರನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತ ಅಂತಾ ಜೆಡಿಎಸ್ ಗೆ ಸೇರಿಸಿಕೊಂಡ್ರು. ಪಕ್ಷ ಸೇರಿದ್ದೇ ಸಂಘಟನೆ ಸಮಾಜ ಸೇವೆ ಜತೆಗೆ ತನ್ನ ವಯ್ಯಕ್ತಿಕ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದ್ರು. ದೇವನಹಳ್ಳಿಗೆ ಒಳಒಚರಂಡಿ,ಕಾವೇರಿ ನೀರು ತರಬೇಕು, ಜಮೀನಿ ಕಳೆದುಕೊಂಡೋರಿಗೆ ಕೆಲ್ಸ ಕೊಡಿಸಬೇಕು ಅಂತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡ್ರು. ಇದೀಗ ತನಗೆ ಟಿಕೆಟ್ ಕೊಡಿ ಅಂತಾ ನಾರಾಯಣ ಸ್ವಾಮಿ ಕೇಳ್ತಿದ್ದಾರೆ. ಕೊಡೋದು ಬಿಡೋದು ಪಕ್ಷಕ್ಕೆ ಸೇರಿದ್ದಾದ್ರೂ ಇವ್ರು ಮಾತ್ರ ಕ್ಷೇತ್ರದಲ್ಲಿ ನಿರಂತರವಾಗಿ ಜೆಡಿಎಸ್ ನ ನಿಷ್ಟಾವಂತ ಕಾರ್ಯಕರ್ತನಾಗಿ ಸಂಘಟನೆ  ಮಾಡ್ತಿದ್ದಾರೆ. 2013ರಲ್ಲಿ ಮಾಜಿ ಶಾಸಕ ಜಿ ಚಂದ್ರಣ್ಣ ಹಾಗೂ ಪಿಳ್ಳ ಮುನಿಶ್ಯಾಮಪ್ಪನವರ ನಡುವೆ  ಟಿಕೆಟ್ ಗಾಗಿ ಫೈಟ್ ನಡೆದ ರೀತಿಯಲ್ಲೇ 2018ರಲ್ಲೂ ನಡೆಯೋ ಹಾಗೇ ಕಾಣಿಸ್ತಿದೆ. ಈ ಬಾರಿ ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೋದೆ ಬಹಳ ದೊಡ್ಡ ವಿಷ್ಯ. ಯಾಕಂದ್ರೆ ರಾಜಕೀಯದಲ್ಲಿ ಯಾವಾಗ ಏನು ಬೇಕಾದ್ರು ಆಗತ್ತೆ ಅನ್ನೋದಕ್ಕೆ 2013ರ ಘಟನೆ ಸಾಕ್ಷಿ.

ಕೈ ಹಿಡಿಯೋದ್ಯಾರು?

ಮಾಜಿ ಶಾಸಕ ವೆಂಕಟಸ್ವಾಮಿ 2008ರಲ್ಲಿ ಒಮ್ಮೆ ಗೆದ್ರು. ಆಗಲೇ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಪ್ರಾರಂಭವಾಯ್ತು. ಕೊನೆಗೆ ಹಿರಿಯರೆಲ್ಲಾ ಸೇರಿ ಕಾಂಗ್ರೆಸ್ ನ ಮತ್ತೆ ಅಧಿಕಾರಕ್ಕೆ ತರಬೇಕು ಅಂತಾ 2013ರಲ್ಲಿ ಮತ್ತೆ ವೆಂಕಟಸ್ವಾಮಿ ಗೆ ಟಿಕೆಟ್ ಕೊಡಿಸಿದ್ರು. ಆದ್ರೆ ವಿಪರ್ಯಾಸ ವೆಂಕಟಸ್ವಾಮಿ ಸೋತ್ರು. ದೇವನಹಳ್ಳಿಯಲ್ಲಿ ಕಾಂಗ್ರೆಸ್ ತುಂಬಾ ಪ್ರಬಲವಾಗಿದ್ರೂ ಬಣ ರಾಜಕೀಯ ಅದಕ್ಕಿಂತ ಪ್ರಬಲವಾಗಿದೆ. ಇಲ್ಲೂ ಕೂಡಾ ನಿಷ್ಠಾವಂತ ಕಾಂಗ್ರೆಸಿಗರು ತುಂಬಾ ಜನ ಇದ್ದಾರೆ. ಆದ್ರೆ ತುಂಬಾ ಜನಕ್ಕೆ ಈ ಬಾರಿ ವೆಂಕಟಸ್ವಾಮಿ ಗೆ ಟಿಕೆಟ್ ಕೊಡಿಸೋದಕ್ಕೆ ಇಷ್ಟ ಇಲ್ಲ. ಜಗಳದಲ್ಲೇ ಕಾಲಹರಣ ಮಾಡ್ತಿದ್ದಾರೆ. ಆದ್ರೆ ಟಿಕೆಟ್ ತಂದೇ ತರ್ತೀನಿ ಅಂತಾ ವೆಂಕಟಸ್ವಾಮಿ ಹಠ ಹಿಡಿದಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಅವ್ರ ಬಲಗೈ ಬಂಟ. ಪಕ್ಷದ ನಿಷ್ಠವಾಂತ ಕಾರ್ಯಕರ್ತ. ಪಕ್ಷಕ್ಕಾಗಿ ಸಂಘಟನೆಗಾಗಿ ಏನು ಬೇಕಾದ್ರು ಮಾಡ್ತಾರೆ.ತಮ್ಮ ಪ್ರಬಲ ಜನಾಂಗದವರು ದೇವನಹಳ್ಳಿಯಲ್ಲಿದ್ದಾರೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸಲೇ ಬೇಕು ಅನ್ನೋ ಕಾರಣಕ್ಕೆ ಬಂದಿಲ್ಲಿ ಸಂಘಟನೆ ಮತ್ತು ಸಮಾಜ ಸೇವೆ ಮಾಡ್ತಿದ್ದಾರೆ. ಹಲವಾರು ಕಾಂಗ್ರೆಸ್ ಮುಖಂಡರ ಜತೆ ಗುರುತಿಸಿಕೊಂಡಿದ್ದಾರೆ ಕೆಲ್ಸ ಮಾಡ್ತಿದ್ದಾರೆ. ಹೈ ಕಮಾಂಡ್ ನಲ್ಲಿ ಖರ್ಗೆ ಇದ್ದಾರೆ. ಸ್ಥಳೀಯವಾಗಿ ಜನ ಇದ್ದಾರೆ. ಒಡೆದ ಮನೆಯನ್ನು ಒಂದು ಮಾಡ್ತೀನಿ ಟಿಕೆಟ್ ತಂದೇ ತರ್ತೀನಿ ಅನ್ನೋ ನಂಬಿಕೆಯಲ್ಲಿ ಕ್ಷೇತ್ರದಲ್ಲಿ ಓಡಾಡ್ತಾ ಕೆಲ್ಸ ಮಾಡ್ತಿದ್ದಾರೆ. ಛಲವಾದಿ ನಾರಾಯಣ ಸ್ವಾಮಿ ಈ ಹಿಂದೆ ರೈಲ್ವೇ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದವರು.ಕರ್ನಾಟಕ ಗೃಹಮಂಡಳಿಯ ನಿರ್ದೇಶಕರಾಗಿದ್ದವರು. ರಾಜಕೀಯದ ಪಟ್ಟುಗಳು ಗೊತ್ತಿರೋದ್ರಿಂದ ಇವ್ರಿಗೆ ಕೆಲ್ಸ ಮಾಡೋದು ಗೊತ್ತು ಟಿಕೆಟ್ ತರೋದು ಗೊತ್ತು. ದೇವನಹಳ್ಳಿಲಿ ಛಲವಾದಿ ನಾರಾಯಣ ಸ್ವಾಮಿ ಹವಾ ಶುರುವಾಗಿರೋದಂತೂ ನಿಜ.​

ಕಮಲ ಮುಡಿಯೋರ್ಯಾರು?

ದೇವನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಮುಖಂಡರಿಲ್ಲದ ಕಾರಣ ದೇವನಹಳ್ಳಿಯಲ್ಲಿ ಯಾರಿಗೆ ಟಿಕೇಟ್​ ನೀಡಿದ್ರು ಕಮಲ ಅರಳುವುದು ಕಷ್ಟ. ಇದುವರೆಗೂ ಈ  ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ಇತಿಹಾಸ ಇಲ್ಲ. ಆದ್ರೂ ಕೂಡಾ ಮಾಜಿ ಶಾಸಕ ಜಿ.ಚಂದ್ರಣ್ಣ, ಡಿ.ಆರ್.ನಾರಾಯಣಸ್ವಾಮಿ, ಎಕೆಪಿ ನಾಗೇಶ್ ಟಿಕೆಟ್ ಆಕಾಂಕ್ಷಿಗಳು.

ಒಟ್ಟು 191300 ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರವಾದರೂ ಇಲ್ಲಿ ಒಕ್ಕಲಿಗರೇ ನಿರ್ಣಾಯಕರು. ಇನ್ನು ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರಿದ್ದರೆ, ಮೂರನೇ ಸ್ಥಾನದಲ್ಲಿ ಹಿಂದುಳಿದ ವರ್ಗದ ಮತದಾರರಿದ್ದಾರೆ. ಚುನಾವಣೆ ಅಂತಾ ಬಂದಾಗ ಇಲ್ಲಿನ ಮತದಾರರು ಈ ಬಾರಿ ಯಾರ ಕೈ ಹಿಡಿತಾರೆ ಅನ್ನೋದನ್ನು ಸುಲಭವಾಗಿ ಹೇಳೋದಕ್ಕೆ ಅಸಾಧ್ಯ.

ಒಕ್ಕಲಿಗರೇ ನಿರ್ಣಾಯಕವಾಗಿರೋ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಮಧ್ಯೆ ನೇರ ಫೈಟ್. ಕಾಂಗ್ರೆಸ್ ನಲ್ಲಿರೋ ಗೊಂದಲ ನಿವಾರಣೆಯಾದ್ರೆ ಕಾಂಗ್ರೆಸ್ ಮೇಲುಗೈ. ಕಾಂಗ್ರೆಸ್ ನ್ಲಲಿರೋ ಒಳ ಜಗಳ ನಿಲ್ಲದೇ ಇದ್ರೆ ಜೆಡಿಎಸ್ ಮೇಲುಗೈ. ಜೆಡಿಎಸ್ ಗೆಲ್ಲೋ ಕುದುರೆಗೆ ಟಿಕೆಟ್ ಕೊಡೋದಂತೂ ಗ್ಯಾರಂಟಿಯಾಗಿದ್ರಿಂದ ಯಾರಿಗೆ ಬಿಪಾರ್ಮ್ ಸಿಗತ್ತೆ ಅನ್ನೋದೇ ಕುತೂಹಲ. ನಿಸರ್ಗ ನಾರಾಯಣ ಸ್ವಾಮಿ ಈಗಾಗಲೇ ಕೆಲ್ಸ ಮಾಡ್ತಾ ಜನಮನ ಗೆದ್ದಿರೋದ್ರಿಂದ ಅವ್ರಿಗೆ ಟಿಕೆಟ್ ಸಿಗೋ ಚಾನ್ಸ್ ಇದೆ. ಈ ಬಾರಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ಪಕ್ಷ ಮತ್ತೊಮ್ಮೆ ಗೆಲ್ಲೋದಿಲ್ಲ ಅನ್ನೋ ಮಾತನ್ನು ಸುಳ್ಳು ಮಾಡಿ ಮತ್ತೊಮ್ಮೆ ಜೆಡಿಎಸ್ ಗೆದ್ದು ಇತಿಹಾಸ ನಿರ್ಮಿಸೋದ್ರಲ್ಲಿ ಅನುಮಾನ ಇಲ್ಲ ಅಂತಿದ್ದಾರೆ ಇಲ್ಲಿನವರು.