ಚುನಾವಣಾ ಕುರುಕ್ಷೇತ್ರ 2018 – ಬಿಟಿಎಂ ಲೇ ಔಟ್(ಬೆಂಗಳೂರು)

ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರ ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಸೋಲರಿಯದ ಸರದಾರನಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಲ್ಲಿನ ಶಾಸಕರಾಗಿದ್ದಾರೆ. ಆದ್ರೆ ಈ ಬಾರಿ ಮತ್ತೆ ಗೆಲ್ತಾರಾ? ಇವ್ರಿಗೆ ಇಲ್ಲಿ ಪ್ರಬಲ ಫೈಟ್ ಕೊಡ್ತಿರೋದ್ಯಾರು ಕ್ಷೇತ್ರದಲ್ಲಾಗ್ತಿರೋ ರಾಜಕೀಯ ಬದಲಾವಣೆಗಳೇನು ಅನ್ನೋದ್ರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

ಬಿಟಿಎಂ ಲೇ ಔಟ್ ವಿಧಾನಸಭಾ ಕ್ಷೇತ್ರ.ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಬಿಟಿಎಂ ಲೇ ಔಟ್ ಕೂಡಾ ಒಂದು. ರಾಜಕೀಯವಾಗಿ ತನ್ನದೇ ಚಾಪು ಹೊಂದಿರೋ ಈ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಮ ವರ್ಗ ಹಾಗೂ ಕಾರ್ಮಿಕ ವರ್ಗದವರು ಜಾಸ್ತಿ ಇದ್ದಾರೆ. ಅತೀ ಹೆಚ್ಚು ಬಾಡಿಗೆದಾರರು ಇರೋ ಕ್ಷೇತ್ರ ಅನ್ನೋ ಹೆಗ್ಗಳಿಕೆ ಇದೆ. ಪುರಾತನ ಮಡಿವಾಳ ಕೆರೆ, ಮಡಿವಾಳ ಮಾರ್ಕೇಟ್, ಹಳೇ ಕಾಲದ ಸೋಮೇಶ್ವರ ದೇವಸ್ಥಾನ, ಕೆಎಂಎಫ್, ಹೈಫೈ ಕೋರಮಂಗಲ, ನ್ಯಾಷನಲ್ ಗೇಮ್ಸ್ ವಿಲೇಜ್ ಹೀಗೇ ಸಾಕಷ್ಟು ವೈವಿಧ್ಯತೆಯನ್ನು ಹೊಂದಿರೋ ಈ ಕ್ಷೇತ್ರ2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊರ ಬಂತು. ಇನ್ನು ಈ ಕ್ಷೇತ್ರದಲ್ಲಿ ಅತಿ ಹೆಚ್ಚುಕನ್ನಡಿಗರೇ ವಾಸಿಸೋದ್ರಿಂದ ಕನ್ನಡಿಗರ ಹವಾ ಜಾಸ್ತಿ. ಒಕ್ಕಲಿಗ, ತಿಗಳ, ಮುಸ್ಲಿಂ ಎಸ್ಸಿ ಎಸ್ಟಿ ಒಬಿಸಿ ಮತದಾರರು ಇರೋ ಈ ಕ್ಷೇತ್ರದಲ್ಲಿ ಸ್ಥಳೀಯರದ್ದೇ ಪ್ರಾಬಲ್ಯ. ಇನ್ನು ರಾಜಕೀಯ ವಿಚಾರಕ್ಕೆ ಬರೋದಾದ್ರೆ ಈ ಬಾರಿಯ ಚುನಾವಣೆ ಕುತೂಹಲ ಹಾಗೂ ಕೌತುಕದಿಂದ ಕೂಡಿದೆ. 2008ರಲ್ಲಿ ಹಾಗೂ 2013ರಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಗೆದ್ದು ಅಧಿಕಾರ ನಡೆಸ್ತಿದ್ದಾರೆ.ಮತ್ತೆ 2018ರ ಚುನಾವಣೆ ಬಂದಿದೆ ಇಡಿ ರಾಜ್ಯದಲ್ಲೇ ಈ ಬಾರಿಯ ಚುನಾವಣ ಕಣ ರಣಕಣವಾಗಿದೆ. ಅದರಂತೆ ಬಿಟಿಂಎಂ ಕೂಡಾ ಹೊರತಾಗಿಲ್ಲ.ಇಲ್ಲೂ ಕೂಡಾ ಈ ಬಾರಿ ಬಿಜೆಪಿ ಕಾಂಗ್ರೆಸ್ ಗೆ ನೇರ ಹಣಾಹಣಿ ಏರ್ಪಟ್ಟಿದೆ. ಇಲ್ಲಿನ ಇನ್ನೊಂದಷ್ಟು ರಾದಕೀಯ ವಿಚಾರಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಅಖಾಡದಲ್ಲಿದ್ದ ರಾಮಲಿಂಗಾ ರೆಡ್ಡಿ ಅವ್ರು 69712 ಮತಗಳನ್ನು ಪಡೆದು ಗೆದ್ದು ಶಾಸಕರಾಗಿ ಗೃಹಸಚಿವರಾಗಿದ್ದಾರೆ. ಇನ್ನು ಬಿಜೆಪಿಯ ಸುದಾಕರ್ ಅವ್ರಿ ಕೇವಲ 20664 ಮತಗಳನ್ನು ಪಡೆದ್ರೆ ಜೆಡಿಎಸ್ ನ ಜೆ ರಮೇಶ್ ರೆಡ್ಡಿ ಅವ್ರು 8346 ಮತಗಳಷ್ಟೇ ಪಡೆದ್ರು.

ಪ್ರಸ್ತುತ ಎಲ್ಲಾ ರಾಜಕೀಯ ಪಕ್ಷಗಳಿಗೂ ಬೆಂಗಳೂರು ಚುನಾವಣೆ ಮೇಲೆ ಈ ಬಾರಿ ಕಣ್ಣು. ಅದ್ರಂತೆ ರಾಮಲಿಂಗಾ ರೆಡ್ಡಿ ಕ್ಷೇತ್ರ ಅಂದ್ರೆ ಹೇಳಬೇಕಾ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಗರಿಗೆದರಿ ಗೃಹ ಮಂತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರಾ ನೇರ ಫೈಟ್ ಇದ್ದು  ಜೆಡಿಎಸ್ ನೆಪ ಮಾತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ರೂ ಈ ಬಾರಿಯ ಚುನಾವಣೆಯಲ್ಲಿ ಯಾರೂ ಏನು ಬೇಕಾದ್ರೂ ಆಗಬಹುದು. ಆಡಳಿತ ಪಕ್ಷ ಕಾಂಗ್ರೆಸ್ ಆಗಿರೋ ಕಾರಣ ಕಾಂಗ್ರೆಸ್ ಗೆ ನಾವು ಗೆಲ್ತೀವಿ ಅನ್ನೋ ಕಾನ್ಫಿಡೆನ್ಸ್ ಇದೆ. ಬಿಜೆಪಿಗೆ ಈ ಬಾರಿ ಆಡಳಿತ ಪಕ್ಷವನ್ನು ಸೋಲಿಸಿ ನಾವು ಗದ್ದುಗೆ ಏರ್ತೀವಿ ಅನ್ನೋ ಹುಮ್ಮಸ್ಸು ಇದೆ. ಇದರ ಜತೆಗೆ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೀತೀವಿ ಅಂತಾ ಮತ್ತೊಂದ್ಕಡೆಯಿಂದ ಜೆಡಿಎಸ್ ಕೂಡಾ ತನ್ನದೇ ಶೈಲಿಯಲ್ಲಿ ಪ್ರಚಾರ ಶುರು ಮಾಡಿದೆ. ಹಾಗಾಗಿ ಈ ಬಾರಿ ಬಿಟಿಎಂ ಪ್ರತಿಷ್ಠೆಯ ಕಣವಾಗಿದ್ದು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳೇ ಇಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ಹಾಗಿದ್ರೆ ಈ ಬಾರಿ ಯಾರ್ಯಾರು ಯಾವ್ಯಾವ ಪಕ್ಷದಿಂದ ಕಣಕ್ಕಿಳಿತಾರೆ ನೋಡೋಣ.

 

ಕೈ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿ:

ಅಂದ್ಹಾಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಂದ್ರೆ ಕಾಂಗ್ರೆಸ್ ನ ನಿಷ್ಟಾವಂತ ನಾಯಕ, ಹಿರಿಯ ಮುಖಂಡ. ರಾಮಲಿಂಗಾ ರೆಡ್ಡಿ ಅಂದ್ರೆ ಎಲ್ಲಾ ಪಕ್ಷಗಳಿಗೂ ಬೇಕಾಗಿರೋ ಹಿರಿಯ ರಾಜಕಾರಣಿ. ರಾಮಲಿಂಗಾ ರೆಡ್ಡಿ ಅಂದ್ರೆ ಸೋಲಿಲ್ಲದ ಸರದಾರ. ಆದ್ರೆ ಈ ಬಾರಿ 2018 ಅವ್ರ ರಾಜಕೀಯ ಭವಿಷ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರೋ ಚುನಾವಣೆ. 40 ವರ್ಷಗಳ ಕಾಲ ರಾಜಕೀಯವಾಗಿ ಹಲವಾರು ಏರಿಳಿತವನ್ನು ಕಂಡಿರೋ ರಾಮಲಿಂಗಾ ರೆಡ್ಡಿ ಈ ಹಿಂದೆ ಜಯನಗರದಲ್ಲಿ ತಮ್ಮ ರಾಜಕೀಯ ಪ್ರಭಾವ ಮೆರೆದವರು.ತಾವೇನು ಅಂತಾ ತೋರಿಸಿಕೊಟ್ಟವರು. 2008ರಲ್ಲಿ  ಕ್ಷೇತ್ರ ಪುನರ್ ವಿಂಗಡಣೆ ನಂತ್ರ ಬಿಟಿಎಂ ಲೇ ಔಟ್ ನಲ್ಲಿ ಸತತ 2 ನೇ ಗೆಲುವನ್ನು ಗೆದ್ದು ಈ ಬಾರಿ ಹ್ಯಾಟ್ರಿಕ್ ಗೆಲುವಿಗೆ ಸಜ್ಜಾಗಿದ್ದಾರೆ. ಅಂದ್ಹಾಗೆ ಈ ಸಲ ಕಾಂಗ್ರೆಸ್ ಅಂದುಕೊಂಡಂತೆ ಬಿಜೆಪಿ ಪ್ರಬಲ ಪೈಪೋಟಿ ಕೊಡ್ತಾ ಇದೆ. ಈ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ ಹಿಂದೆ ಮಾಡಿದಂತ ರಾಜಕೀಯ ಕಸರತ್ತುಗಳಿಗಿಂತ ಈ ಬಾರಿ ಭಿನ್ನ ಕಸರತ್ತುಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹಲವಾರು ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿಯನ್ನು ನಿಭಾಯಿಸಿರೋ ರೆಡ್ಡಿ ಈ ಬಾರಿ ತನ್ನ ಕ್ಷೇತ್ರದ ಬಗ್ಗೆ ಜಾಸ್ತಿ ಗಮನ ಹರಿಸಲೇ ಬೇಕಾಗಿದೆ. ಹೇಳಿ ಕೇಳಿ ರಾಮಲಿಂಗಾ ರೆಡ್ಡಿ ಸಜ್ಜನ ವ್ಯಕ್ತಿ, ಸಹೃದಯಿ, ಅನ್ನಿಸಿಕೊಂಡಿದ್ದಾರೆ. ಆದ್ರೆ ಎಷ್ಟೇ ಒಳ್ಳೆಯವರಾದ್ರೂ ಚುನಾವಣೆಯಲ್ಲಿ ಇದೊಂದೇ ಫ್ಯಾಕ್ಟರ್ ಆಗಲ್ಲ. ಎಲ್ಲಾ ಆಯಾಮಗಳನ್ನು ತೋರಿಸಬೇಕು. ಈ ಬಾರಿ ರಾಮಲಿಂಗಾ ರೆಡ್ಡಿಯವ್ರಿಗೆ ಎರಡೆರಡು ಸವಾಲು ಚುನಾವಣೆಗೆ ನಿಂತು ಅವ್ರು ಗೆಲ್ಲಬೇಕು ಮತ್ತು ಮಗಳಿಗೇನಾದ್ರೂ ಜಯನಗರ ದಿಂದ ಟಿಕೆಟ್ ಸಿಕ್ರೆ ಮಗಳನ್ನು ಗೆಲ್ಲಿಸಬೇಕು. ಒಟ್ಟಾರೆ ಈ ಸಲ ರಾಮಲಿಂಗಾ ರೆಡ್ಡಿಗೆ ರಾಜಕೀಯ ಕುರುಕ್ಷೇತ್ರವೇ ನಿರ್ಮಾಣವಾಗಿರೋದಂತೂ ನಿಜ. ಇನ್ನು ಮಂತ್ರಿಯಾಗಿ ಯಾರಿಗೂ ಹರ್ಟ್ ಮಾಡದೇ ಹಲವಾರು ಕೆಲ್ಸ ಕಾರ್ಯಗಳನ್ನು ಮಾಡಿರೋ ರೆಡ್ಡಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಇದೆ. ಆದ್ರೂ ಚುನಾವಣೆಗೆ ಕೆಲವು ತಿಂಗಳಿದೆ ಎಲ್ಲಾ ಕಾದು ನೋಡುವ ಪರಿಸ್ಥಿತಿ ಆದ್ರೂ ಹಿಂದಿನ ಹಾಗೇ ಈಗಿನ ರಾಜಕೀಯ ಪರಿಸ್ಥಿತಿ ಇಲ್ಲ ಅನ್ನೋದು ಈಗಾಗಲೇ ಗೊತ್ತಾಗ್ತಿದೆ.

ಬಿಜೆಪಿ ಅಭ್ಯರ್ಥಿ:

ಜಮೀನ್ದಾರ್ ದೊಡ್ಡ ನಂಜುಡ ರೆಡ್ಡಿ ಮೊಮ್ಮಗ ಲಲ್ಲೇಶ್ ರೆಡ್ಡಿ ಈ ಬಾರಿಯ ಬಿಟಿಎಂ ಲೇ ಔಟ್ ಬಿಜೆಪಿ ಕ್ಯಾಂಡಿಡೇಟ್. ಲಲ್ಲೇಶ್ ರೆಡ್ಡಿ ಮೂಲತಃ ಬೆಂಗಳೂರಿನವರು.ಸ್ಥಳೀಯರು, ವಿದ್ಯಾವಂತರು ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡವರು. ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರು.ಬಿಜೆಪಿ ಹಾಗೂ ರೆಡ್ಡಿ ಜನಸಂಘದಲ್ಲಿ ಕಾರ್ಯನಿರ್ವಹಿಸಿದವರು. ಲಲ್ಲೇಶ್ ರೆಡ್ಡಿ ಬಿಜೆಪಿ ಕಾರ್ಯಕರ್ತರಾಗಿ ಮುಖಂಡರಾಗಿ ಪಕ್ಷದಲ್ಲಿ ಗುರುತಿಸಿಕೊಂಡಂತಹವರು. ಉದ್ಯಮಿಯಾಗಿ ಸಮಾಜ ಸೇವಕರಾಗಿ ಗೋಲ್ಡ್ ಲೈನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಕಳೆದ 12 ವರ್ಷಗಳಿಂದ ಜನರ ಜತೆ ಬೆರೆಯುತ್ತಿದ್ದಾರೆ. ರಾಜಕೀಯವಾಗಿ ಹಲವಾರು ಬಿಬಿಎಂಪಿ ಸದಸ್ಯರು ಹಾಗೂ ಶಾಸಕರನ್ನು ಗೆಲ್ಲಿಸಿದ ಕೀರ್ತಿ ಇವರಿಗಿದೆ. ಆದ್ರೂ ಈ ಬಾರಿ ರಾಮಲಿಂಗಾ ರೆಡ್ಡಿ ವಿರುದ್ಧ ಕ್ಯಾಂಡಿಡೇಟ್ ಆಗಬೇಕು ಆದ್ರೆ ಗುಂಡಿಗೆ ಗಟ್ಟಿ ಮಾಡ್ಕೊಂಡೇ ಇಲ್ಲಿ ಬರ್ಬೇಕು. ನಿಜ. ಕೊರಮಂಗಲ ನಿವಾಸಿಯಾದ ಲಲ್ಲೇಶ್ ರೆಡ್ಡಿ ಈ ಹಿಂದೇನೇ ರಾಮಲಿಂಗಾ ರೆಡ್ಡಿ ಜತೆ ಕೆಲ್ಸ ಮಾಡಿರೋ ಅನುಭವ ಇದೆ. ಹೇಮಾವೇಮಾ ರೆಡ್ಡಿ ಜನಸಂಘ ಸಮಾವೇಶದಲ್ಲಿ ಹಿರಿಯರಿಗೆ ರಾಮಲಿಂಗಾ ರೆಡ್ಡಿ ಅಧ್ಯಕ್ಷರಾದ್ರೆ ಯುವಕರಿಗೆ ಯುವ ಅಧ್ಯಕ್ಷರಾಗಿ ಲಲ್ಲೇಶ್ ರೆಡ್ಡಿ ಕೆಲ್ಸ ಮಾಡಿದವರು. ಇವ್ರೆಲ್ರ ಪರಿಶ್ರಮದಿಂದ ಕಾರ್ಯಕ್ರಮ ತುಂಬಾ ಯಶಸ್ವಿಯಾಯ್ತು. ಆದ್ರೆ ಅದೇ ರೆಡ್ಡಿ ಬ್ರದರ್ಸ್ ಈಗ ಬೇರೆ ಬೇರೆ ಪಕ್ಷಗಳಿಂದ ಕಾದಾಟಕ್ಕೆ ನಿಂತಿದ್ದಾರೆ. ರಾಮಲಿಂಗಾರೆಡ್ಡಿ ವಿರುದ್ಧ ಚುನಾವಣೆಗೆ ನಿಲ್ಲಬೇಕು ಅಂದ್ರೆ ಪ್ರಭಾವ, ಹಣ, ಧೈರ್ಯ, ಬುದ್ದಿ ಇರಬೇಕು. ಈ ಯಾವುದೂ ಇಲ್ಲಾಂದ್ರೆ ಬಿಟಿಎಂ ಲೇ ಔಟ್ ನಲ್ಲಿ ನಿಲ್ಲಕ್ಕಾಗಲ್ಲ ಗೆಲ್ಲಕ್ಕಾಗಲ್ಲ. ಈ ಬಾರಿ ಬಿಜೆಪಿಯಲ್ಲಿ ಲಲ್ಲೇಶ್ ರೆಡ್ಡಿಗೆ ಟಿಕೆಟ್ ಕೊಡ್ತಾರೆ.  ಹೈಕಮಾಂಡ್ ಸಪೋರ್ಟ್ ಇದೆ ಅವ್ರಿಗೆ. ಹಿರಿಯ ಬಿಜೆಪಿ ಪ್ರಭಾವಿ ರಾಜಕಾರಣಿಗಳೇ ಅವ್ರನ್ನು ಕ್ಷೇತ್ರಕ್ಕೆ ಕಳುಹಿಸಿದ್ದಾರೆ ಎನ್ನಲಾಗ್ತಿದೆ. ಯುವಕರಾಗಿರೋ ಲಲ್ಲೇಶ್ ರೆಡ್ಡಿ ಸ್ಥಳೀಯವಾಗಿ ಈ ಹಿಂದಿನಿಂದಲೂ ರಾಜಕೀಯವಾಗಿ ಗುರುತಿಸಿಕೊಂಡವರು ಯುವಕರ ಸಂಘಟನೆ ಮಾಡಿ ಮನೆ ಮನೆ ಮಾತಾಗಿದ್ದಾರೆ. ರಾಮಲಿಂಗಾ ರೆಡ್ಡಿ ವಿರುದ್ಧ ಚುನಾವಣೆಗೆ ನಿಲ್ಲಬೇಕು ಅಂದ್ರೆ ಎಲ್ಲಾ ರೀತಿಯ ಸರ್ಕಸ್ ಮಾಡಬೇಕು ಅದನ್ನು ಮಾಡಕ್ಕೆ ಅಂತಾನೆ ಲಲ್ಲೇಶ್ ರೆಡ್ಡಿ ನೇರವಾಗಿ ರೆಡ್ಡಿಗೆ ಟಾಂಗ್ ಕೊಡಲು ಸಜ್ಜಾಗಿ ನಿಂತಿದ್ದಾರೆ.

ತೆನೆ ಹೊರೋದ್ಯಾರು?

ಈ ಬಾರಿ ಜೆಡಿಎಸ್ ನಿಂದ ಬಿಟಿಎಂ ಲೇ ಔಟ್ ಕಾರ್ಪೋರೇಟರ್ ದೇವದಾಸ್ ಚುನಾವಣೆಗೆ ನಿಲ್ತಿದ್ದಾರೆ. ಕಾರ್ಪೋರೇಟರ್ ಆಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಸ್ಥಳೀಯರಾಗಿ ಗುರುತಿಸಿಕೊಂಡಿರೋ ದೇವದಾಸ್ ಈಗಾಗಲೇ ಚುನಾವಣಾ ಪ್ರತಚಾರದಲ್ಲಿ ತೊಡಗಿದ್ದಾರೆ.ತನ್ನದೇ ಆದ ವರಸೆ ಶುರು ಹಚ್ಕೊಂಡಿದ್ದಾರೆ. ರಾಮಲಿಂಗಾ ರೆಡ್ಡಿ ವಿರುದ್ಧ ತೊಡೆ ತಟ್ಟಿದ್ದಾರೆ. ಈಗಾಗಲೇ ಇವ್ರ ಮಧ್ಯೆ ಮುಸುಕಿನ ಗುದ್ದಾಟ ನಡೀತಾ ಇದೆ. ದೇವೇಗೌಡ್ರ ಸಪೋರ್ಟ್ ಇದೆ ಕುಮಾರ ಸ್ವಾಮಿ ಬೆಂಬಲ ಇದೆ ಅತಿ ಹೆಚ್ಚು ಒಕ್ಕಲಿಗರಿದ್ದಾರೆ ಇನ್ನೂ ಹಲವಾರು ಲೆಕ್ಕಾಚಾರಗಳ ಮುಖಾಂತರ ತೆನೆ ಹೊರಕ್ಕೆ ಬಂದಿರೋದೇ ದೇವದಾಸ್. ಕಾಂಗ್ರೆಸ್ ಬಿಜೆಪಿ ನೇರ ಫೈಟ್ ನಲ್ಲಿ ಅಂದ್ಕೊಂಡ ಹಾಗೇ ಆದ್ರೆ ಜೆಡಿಎಸ್ ಏನೂ ಕಡಿಮೆ ಆಗಲ್ಲ. ಆದ್ರೆ ಸದ್ಯಕ್ಕಂತೂ 3 ನೇ ಪಕ್ಷವಾಗಿ ದೇವದಾಸ್ ಮುನ್ನಡೆಸ್ತಾರೆ ಅನ್ನೋದು ಗೊತ್ತಾಗತ್ತೆ.

ಬಿಟಿಎಂ ಲೇ ಔಟ್ ಕ್ಷೇತ್ರದಲ್ಲಿ ಈ ಬಾರಿ ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದಕ್ಕಿಂತ ರಾಮಲಿಂಗಾ ರೆಡ್ಡಿ ವಿರುದ್ಧ ಫೈಟ್ ಕೊಡಕ್ಕೆ ಯಾರಿದ್ದಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಆದ್ರೆ ಈಗ ಅವ್ರದೇ ಜನಾಂಗದ ಬಿಜೆಪಿ ಮುಖಂಡ ಲಲ್ಲೇಶ್ ರೆಡ್ಡಿ ತನ್ನೆಲ್ಲಾ ರಾಜಕೀಯ ಪಟ್ಟುಗಳನ್ನು ಶುರುಹಚ್ಚಿಕೊಂಡಿದ್ದಾರೆ. ಸೋಲು ಗೆಲುವು ತೀರ್ಮಾನ ಮಾಡೋದಕ್ಕೆ ಈಗ ಸಮಯ ಅಲ್ಲ. ಬಟ್ ಬಿಜೆಪಿ ಕಾಂಗ್ರೆಸ್ ನೇರ ಫೈಟ್ ಇರೋದಂತೂ ಗೊತ್ತಾಗ್ತಿದೆ.

 

260000 ಮತದಾರರಿರೋ ಈ ಕ್ಷೇತ್ರದಲ್ಲಿ ನಿರ್ಣಾಯಕರು ತಿಗಳ ಜನಾಂಗದವರು. ಒಕ್ಕಲಿಗರು , ಮುಸ್ಲಿಂರು ಹಾಗೂ ಎಸ್ ಎಸ್ಟಿ ಪ್ರಬಲವಾಗಿ ಇರೋ ಮತದಾರರು. ಬಿಟಿಎಂ ಲೇ ಔಟ್ ಕ್ಷೇತ್ರದಲ್ಲಿ ನೇರವಾಗಿ ಹೇಳಬೇಕು ಅಂದ್ರೆ ಕಾಂಗ್ರೆಸ್ ಬಿಜೆಪಿ ನೇರ ಜಟಾಪಟಿ. ರಾಮಲಿಂಗಾ ರೆಡ್ಡಿ ಸೋಲಿಸಬೇಕು ಅಂದ್ರೆ ಎಲ್ಲಾ ತರಹದ ಸರ್ಕಸ್ ಮಾಡಬೇಕು. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಅದ್ರಲ್ಲೂ ಪ್ರಬಲ ಕ್ಯಾಂಡಿಡೇಟ್ ಬೇಕೇ ಬೇಕು. ಅದ್ರಲ್ಲೂ ಸ್ಥಳೀಯರೇ ಆಗಿರಬೇಕು. ಎಲ್ಲಾ ವಿದ್ಯೆ ಗೊತ್ತಿರಬೇಕು. ತೊಡೆ ತಟ್ಟಿ ನಿಲ್ಲಬೇಕು. ಹಿಂಗಿದ್ದಾಗ ಮಾತ್ರ ರಾಮಲಿಂಗಾ ರೆಡ್ಡಿಯವರಿಗೆ ಫೈಟ್ ಕೊಡಬಹುದು. ಲಲ್ಲೇಶ್ ರೆಡ್ಡಿ ಹೇಳಿ ಕೇಳಿ ರಾಜಕಾರಣಿಗಳ ಜತೆ ಬೆಳೆದವರು.ಪ್ರಬುದ್ಧತೆ ಬೆಳೆಸಿಕೊಂಡಿರೋರು. ಬಿಟಿಎಂ ಕ್ಷೇತ್ರದಲ್ಲಿ ತನ್ನದೇ ಸಮುದಾಯದ ಹಿರಿಯ ಅನುಭವಿ ರಾಜಕಾರಣಿ ವಿರುದ್ಧ ಟಿಕೆಟ್ ತಂದು ಫೈಟ್ ಕೊಟ್ಟು ಚುನಾವಣೆ ಎದುರಿಸ್ತಾರೆ ಲಲ್ಲೇಶ್ ರೆಡ್ಡಿ ಅಂದ್ರೆ ಈ ಬಾರಿ ಬಿಟಿಎಂ ಕ್ಷೇತ್ರ ನಿಜಕ್ಕೂ ರಣರಂಗವೇ ಸರಿ.