ಚುನಾವಣಾ ಕುರುಕ್ಷೇತ್ರ 2018 ಮೂಡಬಿದರೆ(ದಕ್ಷಿಣ ಕನ್ನಡ)

ಮೂಡಬಿದಿರೆ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬಗ್ಗೆ. ಮಾಜಿ ಸಚಿವ  ಅಭಯ ಚಂದ್ರ ಜೈನ್ ಇಲ್ಲಿನ ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿಯ 2018ರ ಮಹಾಸಮರಕ್ಕೆ ರಣಕಣಕ್ಕೆ ಹೇಗೆ ಸಜ್ಜಾಗಿದೆ ಇಲ್ಲಿನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

ಮೂಡಬಿದಿರೆ ವಿಧಾನಸಬಾ ಕ್ಷೇತ್ರ . ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಮಂಗಳೂರು ನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರೋ ಈ ಕ್ಷೇತ್ರವನ್ನ ಜೈನಕಾಶಿ ಆಂತಾನೂ ಕರೆಯಲಾಗುತ್ತೆ. ಜೈನ ಧರ್ಮೀಯರು ಜಿಲ್ಲೆಯ ಮಟ್ಟಿಗೆ ಹೋಲಿಸಿದ್ರೆ ಕೊಂಚ ಹೆಚ್ಚಾಗಿ ಇಲ್ಲಿದ್ದಾರೆ. ಹೀಗಾಗಿ ಜೈನ ಧರ್ಮಕ್ಕೆ ಸೇರಿದ ಅಭಯ ಚಂದ್ರ ಜೈನ್ ಈ ಭಾಗದ ಶಾಸಕರಾಗಿದ್ದಾರೆ. ಶೈಕ್ಷಣಿಕವಾಗಿ ಮುಂದುವರೆದಿರೋ ಇಲ್ಲಿ ರಾಜಕೀಯ ಲೆಕ್ಕಾಚಾರಗಳು ಜಾತಿ ರಾಜಕೀಯದ ಮೇಲೆ ನಿಂತಿಲ್ಲ.

ಎಲ್ಲಾ ಧರ್ಮದವ್ರು ಸಮಾನವಾಗಿರೋ ಇಲ್ಲಿ ಪಕ್ಷಗಳ ವರ್ಚಸ್ಸು ಮತ್ತು ವೈಯಕ್ತಿಕ ವರ್ಚಸ್ಸೇ ಚುನಾವಣೆ ಗೆಲ್ಲಲು ಇರೋ ಪ್ರಮುಖ ಅಸ್ತ್ರ. ಹೀಗಾಗಿ ಅಭಯ ಚಂದ್ರ ಜೈನ್ ವೈಯಕ್ತಿಕ ಅಲ್ಲದೇ ಇದ್ರೂ ಕಾಂಗ್ರೆಸ್ ವರ್ಚಸ್ಸಿನಿಂದ ಇಲ್ಲಿ ಗೆಲ್ತಿದ್ದಾರೆ. ಇನ್ನು ಜೈನರಿಗೆ ಸೇರಿದ ಸಾವಿರ ಕಂಬ ಬಸದಿ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಸೇರಿದಂತೆ ಒಂದಷ್ಟು ಖ್ಯಾತನಾಮ ಸಂಸ್ಥೆಗಳು ಇಲ್ಲಿವೆ. ಪ್ರತೀ ವರ್ಷ ನಡೆಯೋ ದೇಶದ ಅತೀ ದೊಡ್ಡ ಕನ್ನಡ ಸಂಸ್ಕೃತಿಯ ಸಂಗಮವಾದ ಆಳ್ವಾಸ್ ನುಡಿಸಿರಿಗೂ ಇದೇ ಮೂಡಬಿದ್ರೆ ವೇದಿಕೆಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಹೆಸ್ರು ಮಾಡಿರೋ ಮೂಡಬಿದ್ರೆ ರಾಜಕೀಯವಾಗಿ ಒಂದೇ ಪಕ್ಷದ ಕಡೆಗೆ ವಾಲಿ ನಿಲ್ಲುತ್ತೆ ಅನ್ನೋ ಹಾಗಿಲ್ಲ. ಇಲ್ಲಿನ ಮತದಾರನ ಅಭಿರುಚಿಗೆ ತಕ್ಕಂತೆ ಯಾವಾಗ ಬೇಕಾದ್ರೂ ಇಲ್ಲಿನ ರಾಜಕೀಯ ಚಿತ್ರಣ ಬದಲಾಗಬಹುದು. ಒಂದು ಕಾಲದಲ್ಲಿ ಇಲ್ಲಿ ಜೆಡಿಎಸ್ ಪಾರಮ್ಯ ಹೊಂದಿತ್ತು. ಆಗ ಅಮರನಾಥ್ ಶೆಟ್ಟರು ಶಾಸಕರಾಗಿದ್ದರು. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಸೆಣಸಾಟ ನಡೆಸ್ತಾ ಇದೆ. ಹೀಗಾಗಿ ಮುಂದೆ ಯಾವುದೇ ರೀತಿಯ ಬದಲಾವಣೆಗೂ ಈ ಕ್ಷೇತ್ರ ಸಾಕ್ಷಿಯಾಗಬಹುದು. ಇಲ್ಲಿನ ರಾಜಕೀಯ ಸ್ಥಿತಿ ಗತಿ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

 

ಇದು 2013ರ ಮತಬರಹ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಅಭಯ ಚಂದ್ರ ಜೈನ್ 53180 ಮತಗಳನ್ನು ಪಡೆದು ಗೆದ್ದು ಸಾಸಕರಾದ್ರು. ಬಿಜೆಪಿಯ ಉಮಾನಾಥ್ ಕೋಟ್ಯಾನ್ 48630 ಮತಗಳನ್ನು ಪಡೆದು 4550 ಮತಗಳ ಅಂತರದಿಂದ ಸೋತ್ರು. ಇನ್ನುಳಿದಂತೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಮರನಾಥ್ ಶೆಟ್ಟಿ 20471 ಮತಗದಳನ್ನು ಪಡೆದ್ರು.

ಹೌದು ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಈ ಹಿಂದೆ ಜೆಡಿಎಸ್ ನಿಂದ ಅಮರನಾಥ್ ಶೆಟ್ಟಿ ಗೆದ್ದಿದ್ದು ಬಿಟ್ರೆ ನಿರಂತರವಾಗಿ ಕಾಂಗ್ರೆಸ್ ಗೆಲ್ತಾನೆ ಬಂದಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಭಯ್ ಚಂದ್ರ ಜೈನ್ ಸಚಿವರೂ ಆಗಿದ್ರು. ಆದ್ರೆ  ಕೆಲ ತಿಂಗಳ ಹಿಂದೆ ಸಚಿವಸ್ಥಾನದಿಂದ ಕೆಳಗಿಳಿಯಬೇಕಾಯ್ತು.  ಹಾಗಾಗಿ ಈ ಬಾರಿ ಅವ್ರು ಮತ್ತೆ ಇಲ್ಲಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಅನುಮಾನ ಎಂಬ ಮಾತುಗಳೇ ಇಲ್ಲಿ ಕೇಳಿ ಬರ್ತಿದೆ. ಹಾಗಾಗಿ ಕಾಂಗ್ರೆಸ್ ಇಲ್ಲಿ ಹೊಸ  ಅಭ್ಯರ್ಥಿಯನ್ನು ಕಣಕ್ಕಿಳಿಸೋದಕ್ಕೆ ಪ್ಲಾನ್ ಮಾಡ್ತಿದೆ. ಇನ್ನು  ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪ್ರಬಲವಾಗಿದ್ರೂ ಕೂಡಾ ಕರಾವಳಿಯಲ್ಲಿ ಬಿಜೆಪಿ ಗೆಲ್ಲದ ಒಂದೇ ಒಂದು ಕ್ಷೇತ್ರ ಇದ್ದರೆ ಅದು ಮೂಡುಬಿದಿರೆ ಮಾತ್ರ, ಇಲ್ಲಿ ಕಮಲ ಪಾಳಯ ಗೆಲ್ಲೋದಕ್ಕೆ ಇದುವರೆಗೂ  ಸಾಧ್ಯವಾಗಿಲ್ಲ.  ಕಳೆದ ಬಾರಿ ಸ್ವಲ್ಪ ಮಟ್ಟಿನ ಫೈಟ್ ಕೊಟ್ಟಿರೋ ಕಾರಣ ಈ ಬಾರಿ ಬಿಜೆಪಿ ಕ್ಷೇತ್ರವನ್ನು ಹೇಗಾದ್ರೂ ತನ್ನತಕ್ಕೆಗೆ ಹಾಕಿಕೊಳ್ಳೋದಕ್ಕೆ ಮುಂದಾಗಿದೆ ಅದೇ ರೀತಿ ಜೆಡಿಎಸ್ ಈ ಕ್ಷೇತ್ರದಲ್ಲಿ ಈ ಹಿಂದೆ ಅದಿಕಾರದ ರುಚಿ ನೋಡಿರೋ ಕಾರಣ ದಕ್ಷಿಣ ಕನ್ನಡದಲ್ಲಿ ಮತ್ತೆ ಧ್ವಜ ಹಾರಿಸೋದಕ್ಕೆ ಕಾಯ್ತಾ ಇದೆ. ಹಾಗಿದ್ರೆ ಈ ಬಾರಿಯ ಚುನಾವಣೆಯಲ್ಲಿ  ಕ್ಷೇತ್ರದಿಂದ ಯಾರ್ಯಾರು ಕಣಕ್ಕಿಳಿತಾರೆ ಅವ್ರ ಬಲಾಬಲ ಏನು ನೋಡೋಣ.

ಕೈ ಟಿಕೆಟ್ ಆಕಾಂಕ್ಷಿಗಳು:

ಕಾಂಗ್ರೆಸ್ ಅಭ್ಯರ್ಥಿ

ಸದ್ಯ ಅಭಯ ಚಂದ್ರ ಜೈನ್ ಇಲ್ಲಿ ಶಾಸಕರಾಗಿದ್ದಾರೆ. ಈ ಬಾರಿ ಮತ್ತೊಮ್ಮೆ ಸ್ಪರ್ಧಿಸ್ಬೇಕು ಅನ್ನೋ ಆಸೆ ಅವ್ರಲ್ಲಿ ಇದ್ದ ಹಾಗೇ ಕಾಣ್ತಿದೆ. ಆದ್ರೆ ಶಾಸಕರು ಇಲ್ಲಿ ಸಿದ್ದರಾಮಯ್ಯ ಮತ್ತು ಸರ್ಕಾರದ ಪರವಾಗಿ ಅಷ್ಟಾಗಿ ಕೆಲಸ ಮಾಡಿಲ್ಲ ಅನ್ನೋ ಆರೋಪ ಇವ್ರ ಮೇಲಿದೆ. ಒಂದು ಹಂತಕ್ಕೆ ಅಭಯರಿಗೆ ಸಚಿವ ಸ್ಥಾನ ಕೊಟ್ಟರೂ ಮತ್ತೆ ಸಿದ್ದರಾಮಯ್ಯ ಅದನ್ನು ಹಿಂತೆಗೆದುಕೊಂಡಿದ್ದರು. ಅದು ಒಂದು ರೀತಿಯ ಹಿನ್ನಡೆ ಆದ್ರೆ ಅಭಯಚಂದ್ರ ಜೈನ್ ರ ವರ್ತನೆ ಬಗ್ಗೆ  ಇಲ್ಲಿನವರಿಗೆ ಬೇಸರವಿದೆ. ತೀರಾ ಕೋಪಿಷ್ಠರಂತೆ.ಸಾರ್ವಜನಿಕವಾಗಿಯೇ ನಿಂದಿಸ್ತಾರೆ. ಸರ್ವಾಧಿಕಾರಿ ಧೋರಣೆ ತೋರಿಸ್ತಾರೆ ಅನ್ನೋ ಆರೋಪಗಲು ಅವ್ರ ಮೇಲಿದೆ. ಅಷ್ಟೇ ಅಲ್ಲದೆ ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋದ್ರಿಂದ ಈ ಭಾಗದಲ್ಲಿ ಸಿದ್ದರಾಮಯ್ಯನವರ ವಿರೋಧಿ ಅಲೆಗೆ ಕಾರಣವಾಗಿದೆ. ಹಿಂದೂಜಾಗರಣ ವೇದಿಕೆಯ ಮುಖಂಡ ಪ್ರಶಾಂತ್ ಪೂಜಾರಿ ಹತ್ಯೆಯ ನಂತ್ರ ಈ ಭಾಗದಲ್ಲಿ ಕಾಂಗ್ರೆಸ್​ಗೆ ಹಿಂದೂ ವಿರೋಧಿ ಹಣಪಟ್ಟಿ ಬಂದಿದ್ದು, ಅಭಯ ಚಂದ್ರ ಜೈನ್ ಹಿಂದೂಗಳ ಪರವಾಗಿ ನಿಲ್ಲದೇ ಇರೋದ್ರಿಂದ ಸರ್ಕಾರದ ಹೆಸ್ರು ಕೂಡಾ ಹಾಳಾಗಿದೆ. ಇದೆಲ್ಲದರ ಜತೆಗೆ  ಕಳೆದ ಬಾರಿ ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದ ಅಭಯ ಚಂದ್ರ ಜೈನ್ ಅವ್ರಿಗೆ ಅವ್ರ ಮಾತೇ ಮುಳುವಾಗೋ ಹಾಗೇ ಕಾಣ್ತಿದೆ. ಹಾಗಾಗಿ ಈ ಬಾರಿ ಅಭಯ ಚಂದ್ರ ಜೈನ್ ಟಿಕೆಟ್ ಆಕಾಂಕ್ಷಿಯಾಗಿದ್ರೂ ಕೂಡಾ ಟಿಕೆಟ್ ಸಿಗೋದೇ ಡೌಟ್.

 

ಕಾಂಗ್ರೆಸ್ ಅಭ್ಯರ್ಥಿ:

ದಿನೇಶ್ ಅಮೀನ್ ಮಟ್ಟು. ಈ ಹೆಸರು ಕೇಳದೇ ಇರೋರು ರಾಜ್ಯದಲ್ಲಿ ಇರೋದಕ್ಕೆ ಸಾಧ್ಯವಿಲ್ಲ. ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿರೋ ದಿನೇಶ್ ಹೆಸರು ಈ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸೋಕೆ ಕೇಳಿಬರ್ತಿದೆ. ನಮಗೆ ನಿಮಗೆ ಗೊತ್ತಿರೋಹಾಗೇ ದಿನೇಶ್ ಅಮೀನ್ ಮಟ್ಟು ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು. ಆದ್ರೆ ಅದೆಲ್ಲಕ್ಕಿಂತ ಹೆಚ್ಚಾಗಿ ಅವ್ರು ಬಹುಮುಖ ಪ್ರತಿಭೆ. ಮೂಲತಃ ಮೂಡಬಿದಿರೆಯವರಾಗಿರೋ ಅಮೀನ್ ಮಟ್ಟು ವೃತ್ತಿಯಲ್ಲಿ ಪತ್ರಕರ್ತರು.

ಪ್ರವೃತ್ತಿಯಲ್ಲಿ ಹೋರಾಟಗಾರರು, ವ್ಯವಸ್ಥೆಯಲ್ಲಿ ಸಮಾಜಸೇವಕರು. ಪತ್ರಕರ್ತರಾಗಿರೋ ಕಾರಣ ರಾಜ್ಯ ರಾಷ್ಚ್ರವನ್ನು ಬೇಕಾದಷ್ಟು ಬಾರಿ ಪ್ರವಾಸ ಮಾಡಿದ್ದು ಪ್ರತಿಯೊಂದು ಕ್ಷೇತ್ರದ ರಾಜಕೀಯ ನಾಡಿಮಿಡಿತ ಇವ್ರಿಗೆ ಚೆನ್ನಾಗಿ ಗೊತ್ತು. ಪತ್ರಕರ್ತರಾಗಿರೋ ಮಟ್ಟು ಅದೆಷ್ಟೋ ಎಲೆಕ್ಷನ್ ಗಳನ್ನು ತುಂಬಾ ಹತ್ತಿರದಿಂದ ನೋಡಿ ರಾಜಕೀಯ ಪಟ್ಟುಗಳೇನು ಒಳಸುಳಿಗಳೇನು ಅನ್ನೋದನ್ನು ಅರಿತುಕೊಂಡು ಕರಗತ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ತಮ್ಮ ತೀಕ್ಷ್ಣ ಹಾಗೂ ಹರಿತ ಬರಹಗಳಿಂದ ಸಮಾಜದ ಓರೆಕೋರೆಗಳನ್ನು ತಿದ್ದುವಂತಹ ಪ್ರಯತ್ನ ಮಾಡಿದ್ದಾರೆ. ಇಲ್ಲಿವರೆಗೆ ರಾಜಕೀಯದ ಬಗ್ಗೆ ತಿಳಿದುಕೊಂಡ ಅವ್ರು ಇದೀಗ ರಾಜಕೀಯಕ್ಕೆ ಎಂಟ್ರಿಯಾಗ್ತಿದ್ದಾರೆ. ಮಟ್ಟು ಅವ್ರು ಮೂಡಬಿದಿರೆ ಕ್ಷೇತ್ರದವರೇ ಆಗಿರೋ ಕಾರಣ, ಇಲ್ಲಿ ಅಭಯ ಚಂದ್ರ ಜೈನ್ ಗೆ ಒಳ್ಳೆ ಹೆಸರಿಲ್ಲದ ಕಾರಣ ಹಾಗೂ ಕಾಂಗ್ರೆಸ್ ಇಲ್ಲಿ ಬಲವಾಗಿರೋ ಕಾರಣ ಅಮೀನ್ ಮಟ್ಟು ಅವ್ರ ರಾಜಕೀಯ ಪ್ರವೇಶಕ್ಕೆ ಇದು ಸೂಕ್ತ ವೇದಿಕೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಇದೆಲ್ಲದರ ಜತೆಗೆ ಮೂಡಬಿದಿರೆಯ ಸ್ಥಳೀಯ ಸಮಸ್ಯೆಗಳಿಗೆ ಈಗಾಗಲೇ ಮಟ್ಟು ಸ್ಪಂದಿಸ್ತಿರೋದ್ರಿಂದ ಅವ್ರಿಗೆ ಇಲ್ಲಿ ಗೆಲುವು ಕಷ್ಟವಾಗದು. ಕಾಂಗ್ರೆಸ್ ನಾಯಕರಿಗೂ ಮಟ್ಟು ಹತ್ತಿರವಿರೋದ್ರಿಂದ ಟಿಕೆಟ್ ಗಿಟ್ಟಿಸಿಕೊಳ್ಲೋದು ಕಷ್ಟವೇನಲ್ಲ.

ಕಾಂಗ್ರೆಸ್ ಅಭ್ಯರ್ಥಿ:

ಇನ್ನು ಮೂಡಬಿದ್ರೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ನಿಂದ ಅಭಯಚಂದ್ರ ಜೈನ್ ಸ್ಪರ್ಧಿಸೋದು ಅನುಮಾನ ಅನ್ನೋ ಮಾತು ಕೇಳಿ ಬರ್ತಿದ್ದಂತೆ  ಯುವ ನಾಯಕ ಮಿಥುನ್ ರೈ ಹೆಸರು ಕೂಡಾ ಇಲ್ಲಿ ಚಾಲ್ತಿಗೆ ಬಂದಿದೆ.

ಈಗಾಗಲೇ ಮಿಥುನ್ ರೈ ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ. ಜನರ ಜತೆ ಬೆಯುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆ ಅವಕಾಶವೇನೋ ಇದೆ. ಹಾಗಂತ ತಕ್ಷಣಕ್ಕೆ ಮಿಥುನ್ ರೈ ಗೆ ಟಿಕೆಟ್ ಕೊಡೋ ಸಾಧ್ಯತೆ ಕಡಿಮೆ ಇದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗೆ ಆಪ್ತರಾಗಿದ್ದಾರೆ. ಆದ್ರೆ ಟಿಕೆಟ್ ವಿಚಾರಕ್ಕೆ ಬಂದಾಗ ದಿನೇಶ್ ಅಮೀನ್ ಮಟ್ಟು ಇಲ್ಲಿ ಸ್ಪರ್ದಿಸೋದಕ್ಕೆ ಮುಂದಾಗಿದ್ದೇ ಆದಲ್ಲಿ ಮಿಥುನ್ ರೈ ಗೆ ಟಿಕೆಟ್ ಸಿಗೋದು ಕಷ್ಟ. ಕೈ ನಾಯಕರು  ಅವ್ರ ಮನವೊಲಿಸೋ ಸಾಧ್ಯತೆ ಜಾಸ್ತಿ ಇದೆ. ಒಂದ್ವೇಳೆ ಮಟ್ಟು ಟಿಕೆಟ್ ನಿರಾಕರಿಸಿದ್ರೆ ಮಿಥುನ್ ರೈ ಇಲ್ಲಿನ ಅಭ್ಯರ್ಥಿಯಾಗೋದ್ರಲ್ಲಿ ಡೌಟ್ ಇಲ್ಲ.

 

ಕಮಲ ಮುಡಿಯೋರ್ಯಾರು?

ಬಿಜೆಪಿ ಅಭ್ಯರ್ಥಿ:

ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಕ್ಷೇತ್ರ.ಇದು ಕಾಂಗ್ರೆಸ್ ನ ಭದ್ರ ಕೋಟೆ. ಒಂದು ಬಾರಿ ಜೆಡಿಎಸ್  ಗೆದ್ದಿದ್ದು ಬಿಟ್ರೆ ಕರಾವಳಿಯಲ್ಲಿ ಸ್ಟ್ರಾಂಗ್ ಆಗಿರೋ ಬಿಜೆಪಿ ಇಲ್ಲಿ ಖಾತೆ ತೆರೆದಿಲ್ಲ.ಆದ್ರೂ ಬಿಜೆಪಿ ನಾಯಕರು ಶತಾಯಗತಾಯ ಕ್ಷೇತ್ರ ಗೆಲ್ಲೋದಕ್ಕೆ ಪ್ಲಾನ್ ಮಾಡಿದ್ದಾರೆ. ಕಳೆದ ಬಾರಿ ಅಭಯ ಚಂದ್ರ ಜೈನ್ ಅವ್ರ ವಿರುದ್ಧ ಉಮಾನಾಥ್ ಕೋಟ್ಯಾನ್ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ರು.

ಅದೇ ರೀತಿ ಈ ಬಾರಿ ಕೂಡಾ ಅವ್ರು ಕಣಕ್ಕಿಳಿತಾರೆ ಅಂತಾ ಹೇಳಲಾಗ್ತಿದೆ. ಆದ್ರೆ ಈಗಾಗಲೇ ಅವ್ರಿಗೆ ಚಾನ್ಸ್ ಕೊಟ್ಟಾಗಿದೆ ಹಾಗಾಗಿ ಜಗದೀಶ್ ಅಧಿಕಾರಿ ಹೆಸರು ಕೂಡಾ ಇಲ್ಲಿ ಕೇಳಿಬರ್ತಿರೋದ್ರಿಂದ ಹೊಸ ಮುಖಕ್ಕೆ ಅವಕಾಶ ಕೊಡೋದಕ್ಕೆ ಬಿಜೆಪಿ ನಾಯಕರು ಮನಸ್ಸು ಮಾಡಿದ್ರೂ ಆಸ್ಚರ್ಯ ಇಲ್ಲ. ಇನ್ನು  ಈಗಾಗಲೇ ಜಗದೀಶ್ ಅಧಿಕಾರಿ ಕ್ಷೇತ್ರದಲ್ಲಿ ಓಡಾಡ್ತಾ ಪಕ್ಷ ಸಂಘಟನೆ ಮಾಡ್ತಿರೋದ್ರಿಂದ ಕೊನೆ ಘಳಿಗೆಯಲ್ಲಿ  ಇವ್ರಿಗೆ ಟಿಕೆಟ್ ಸಿಕ್ರೂ ಆಶ್ಚರ್ಯ ಇಲ್ಲ.

ತೆನೆ ಹೊರೋದ್ಯಾರು?

ಜೆಡಿಎಸ್ ಅಭ್ಯರ್ಥಿ:

ಯಸ್ ಈ ಹಿಂದೆ ಒಂದು ಬಾರಿ ಕರಾವಳಿಯಲ್ಲಿ ಜೆಡಿಎಸ್ ನ್ನು ಗೆಲ್ಲಿಸಿಕೊಟ್ಟ ಕೀರ್ತಿ ಅಮರನಾಥ್ ಶೆಟ್ಟಿ ಅವ್ರಿಗಿದೆ. ಅವ್ರ ವಯ್ಯಕ್ತಿತ ವರ್ಚಸ್ಸಿನಿಂದಲೇ ಜೆಡಿಎಸ್ ಇಲ್ಲಿ ಗೆದ್ದಿತ್ತು. ಕಳೆದ ಬಾರಿ ಕೂಡಾ 20 ಸಾವಿರಕ್ಕೂ ಹೆಚ್ಚು ಮತಗಳನ್ನು ಶೆಟ್ರು ಪಡೆದುಕೊಂಡಿದ್ರು. ಹಾಗಾಗಿ ಮತ್ತೆ ಈ ಬಾರಿ ಅಮರನಾಥೆ ಶೆಟ್ಟಿ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ ಅಂತಾ ಜೆಡಿಎಸ್ ನಾಯಕರೇ ಹೇಳ್ತಿದ್ದಾರೆ. ಇನ್ನು ಇವ್ರ ಜತೆಗೆ ಅಶ್ವಿನ್ ಪೆರೇರಾ ಅನ್ನೋರ ಹೆಸರು ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೇಳಿ ಬರ್ತಿದೆ. ಕೊನೆ ಜೆಡಿಎಸ್ ನಾಯಕರು ಯಾರಿಗೆ ಟಿಕೆಟ್ ನೀಡ್ತಾರೆ ಕಾದು ನೋಡಬೇಕು.

ಇನ್ನು ಕರಾವಳಿಯಲ್ಲಿ ಇಲ್ಲಿವರೆಗೆ ಜನಾರ್ಧನ ಪೂಜಾರಿಯವರು ಬಿಲ್ಲವರ ನಾಯಕಾರಾಗಿದ್ರು. ಆದ್ರೆ ಇತ್ತೀಚೆಗೆ ದಿನೇಶ್ ಅಮೀನ್ ಮಟ್ಟು ನಾರಾಯಣ ಗುರು ಮತ್ತು ಬಿಲ್ಲವ ಸಮುದಾಯದ ಬಗ್ಗೆ ಜಾಸ್ತಿ ಮಾತಾಡ್ತಿರೋದ್ರಿಂದ ದಿನೇಶ್ ಅವ್ರು ಕೂಡಾ ಇಲ್ಲಿ ನಾಯಕರಾಗಿ ಬೆಳೆಯುತ್ತಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ನಾರಾಯಣ ಗುರು ಜಯಂತಿಯನ್ನು ಆಚರಿಸೋದು ನೋಡಿದ್ರೆ ಅದೂ ಕೂಡಾ ಮಟ್ಟುಗೆ ಲಾಭ ತರೋದ್ರಲ್ಲಿ ಅನುಮಾನ ಇಲ್ಲ. ಆದ್ರೆ ಈ ಕ್ಷೇತ್ರದಲ್ಲಿ ಅಭಿವೃದ್ದಿ, ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಬಂದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಹೀಗಾಗಿ ಬಿಜೆಪಿ ಕೂಡಾ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೇ ಆದಲ್ಲಿ ಮೂಡಬಿದ್ರೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಟಪ್ ಫೈಟ್ ನಡೆಯತ್ತೆ..

ಈಗಾಗಲೇ ಅದೆಷ್ಟೋ ಜನ ಪತ್ರಕರ್ತರು ರಾಜಕೀಯ ಪ್ರವೇಶ ಮಾಡಿ ಗೆದ್ದಿರೋದನ್ನು ನೋಡಿದ್ದೀವಿ. ಅದೇ ರೀತಿ ಈ ಬಾರಿ ದಿನೇಶ್ ಅಮೀನ್ ಮಟ್ಟು ಅವ್ರು ತಮ್ಮ ಸ್ವಕ್ಷೇತ್ರ ಮೂಡಬಿದಿರೆಯಿಂದ ರಾಜಕೀಯ ಅದೃಷ್ಟ ಪರೀಕ್ಷೆಗೆ ಒಳಗಾಗ್ತಿದ್ದಾರೆ. ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬಂಟರು ಹೆಚ್ಚಿನ ಸಂಖ್ಯೆಯಲ್ಲಿರೋದ್ರಿಂದ ಅಮೀನ್ ಮಟ್ಟು ನಿಂತರೆ ಶೇಕಡಾ 90 ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಇವ್ರಿಗೆ ಮತ ಹಾಕ್ತಾರೆ ಇನ್ನು ಬಿಲ್ಲವರನ್ನು ಮ್ಯಾನೇಜ್ ಮಾಡಿದರೆ ಸುಲಭ ಜಯ ಅವ್ರದ್ದಾಗತ್ತೆ ಅನ್ನೋ ಲೆಕ್ಕಾಚಾರ ರಾಜಕೀಯ ವಿಶ್ಲೇಷಕರದ್ದು. ಇಲ್ಲಿವರೆಗೆ ರಾಜಕೀಯದ ಒಳಸುಳಿಗಳನ್ನು ಬಿಟ್ಟಿಡುತ್ತಿದ್ದ ಹಿರಿಯ ಪತ್ರಕರ್ತರನ್ನು ಮೂಡಬಿದಿರೆಯ ಜನ ಗೆಲ್ಲಿಸ್ತಾರಾ ಕಾದು ನೋಡೋಣ.