ಚುನಾವಣಾ ಕುರುಕ್ಷೇತ್ರ 2018 – ಉಡುಪಿ

ಉಡುಪಿ ವಿಧಾನಸಭಾ ಕ್ಷೇತ್ರ

ಈಗ ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋ ಕ್ಷೇತ್ರ ಉಡುಪಿ ವಿಧಾನಸಭಾ ಕ್ಷೇತ್ರ. ಪ್ರಸ್ತುತ ಈ ಕ್ಷೇತ್ರದ ಪ್ರಮೋದ ಮಧ್ವರಾಜ್ ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಉಡುಪಿ ಕ್ಷೇತ್ರ ರಾಜಕೀಯದಲ್ಲಿ ಸದ್ದು ಮಾಡ್ತಿರೋದ್ಯಾಕೆ. ಇಲ್ಲಿನ ರಾಜಕೀಯ ಬೆಳವಣಿಗೆಗಳೇನು ನೋಡೋಣ ಬನ್ನಿ..

ಉಡುಪಿ ವಿಧಾನಸಭಾ ಕ್ಷೇತ್ರ. ದೇವಾಲಯಗಳ ನಗರಿ ಅಂತಾನೇ ಕರೆಯೋ ಉಡುಪಿ ಜಿಲ್ಲೆಯಲ್ಲಿರೋ ಪ್ರಮುಖ ವಿಧಾನಸಬಾ ಕ್ಷೇತ್ರ. ಉಡುಪಿ ಅಂದಾಕ್ಷಣ ಮೊದಲಿಗೆ ನೆನಪಾಗೋದೇ ಶ್ರೀ ಕೃಷ್ಣದೇವಾಲಯ. ಹೌದು ಈ ದೇವಸ್ಥಾನ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಭಕ್ತಾದಿಗಳು ಆಗಮಿಸ್ತಾರೆ. ಇನ್ನುಳಿದಂತೆ ಶೈಕ್ಷಣಿಕವಾಗಿ ಕೂಡಾ ಉಡುಪಿ ಮಾನ್ಯತೆಯನ್ನು ಪಡೆದುಕೊಂಡಿದೆ. ಇದೆಲ್ಲ ಒಂದು ಕಡೆ ಆದ್ರೆ ರಾಜಕೀಯವಾಗಿ ಕೂಡಾ ಉಡುಪಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ಆಸ್ಕರ್ ಫೆರ್ನಾಂಡಿಸ್, ಡಾ.ವಿಎಸ್ ಆಚಾರ್ಯ, ಮನೋರಮಾ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆಯಂತಹ  ಘಟಾನುಘಟಿ ರಾಜಕಾರಣಿಗಳು ಈ ಜಿಲ್ಲೆಯಲ್ಲಿದ್ದುಕೊಂಡೇ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರಸ್ತುತ ಈ ವಿಧಾನಸಭಾ ಕ್ಷೇತ್ರದವರಾಗಿರೋ ಮನೋರಮಾ ಮಧ್ವರಾಜ್ ಪುತ್ರ ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದಾರೆ. ಹಾಗಾದ್ರೆ ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಉಡುಪಿ ವಿಧಾನಸಭಾ ಕ್ಷೇತ್ರ ಹೇಗೆ ಸಿದ್ದವಾಗಿದೆ? ಇಲ್ಲಿನ ರಾಜಕೀಯ ಚಿತ್ರಣ ಏನು ಅನ್ನೋದನ್ನು ಹೇಳ್ತೀವಿ.. ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

2013ರ ಮತಬರಹ

ಇದು 2013ರ ಮತಬರಹ ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ 86868 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಅಷ್ಟೇ ಅಲ್ಲ ಈಗ ಸಚಿವರೂ ಆಗಿದ್ದಾರೆ. ಇನ್ನು ಇವ್ರಿಗೆ ಪೈಪೋಟಿ ನೀಡಿದ ಬಿಜೆಪಿಯ ಸುಧಾಕರ್ ಶೆಟ್ಟಿ ಕೇವಲ 47344 ಮತಗಳನ್ನಷ್ಟೇ ಪಡೆದು ಸೋಲಬೇಕಾಯ್ತು.

ಕಳೆದ ಬಾರಿಯ ಚುನಾವಣೆಯಲ್ಲೇನೋ ಕಾಂಗ್ರೆಸ್ ನಿಂದ ಕಣಕ್ಖಿಳಿದಿದ್ದ ಪ್ರಮೋದ್ ಮಧ್ವರಾಜ್ ಸುಲಭವಾಗಿ ಭರ್ಜರಿ ಜಯಗಳಿಸಿದ್ರು. ಅದಕ್ಕೆ ಕಾರಣಾನೂ ಇತ್ತು.ಯಾಕಂದ್ರೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನವಣೆಯ ಸಂದರ್ಬ ನೇರ ಹಣಾಹಣಿ ಇರೋದು ಕಾಂಗ್ರೆಸ್-ಹಾಗೂ ಬಿಜೆಪಿಗೆ . ಅಂದರೆ ಹಾಲಿ ಶಾಸಕ ಪ್ರಮೋದ್ ಮದ್ವರಾಜ್ ಹಾಗೂ ಬಿಜೆಪಿಯ ಮಾಜಿ ಶಾಸಕ ರಘುಪತಿಭಟ್ ನಡುವೆ ನೇರ ಸ್ಪರ್ದೆ ಅಂತಾನೇ ಹೇಳಬಹುದು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಘುಪತಿಭಟ್ ಅವ್ರ ಮೇಲೆ ಬೇರೆ ಬೇರೆ ಆರೋಪಗಳು ಕೇಳಿ ಬಂದಿದ್ದರಿಂದ ರಘುಪತಿ ಭಟ್ ಸ್ಪರ್ದೆಯಿಂದ ಹಿಂದೆ ಸರಿದಿದ್ದರು. ಹಾಗಾಗಿ ಉದ್ಯಮಿ ಸುಧಾಕರ ಶೆಟ್ಟಿಗೆ ಟಿಕೆಟ್ ನೀಡಲಾಗಿತ್ತು. ಈ ಕಾರಣದಿಂದಾಗಿ ಬಿಜೆಪಿಯನ್ನು ಇಲ್ಲಿನ ಮತದಾರ ತಿರಸ್ಕರಿಸಿದ್ದ. ಹಾಗಾಗಿ ನಿರಾಯಾಸವಾಗಿ ಕಾಂಗ್ರೆಸ್ ನಿಂದ ಪ್ರಮೋದ್ ಮದ್ವರಾಜ್ ಗೆದ್ದು ಬಂದಿದ್ದರು ಸುಮಾರು ೪೫ ಸಾವಿರಗಳ ಅಂತರದಲ್ಲಿ ಗೆದ್ದ ಪ್ರಮೋದ್ ಈಗ ಸಚಿವರೂ ಆಗಿದ್ದಾರೆ. ಆದ್ರೆ ಈ ಬಾರಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಗೆ ಬರ್ತಾರೆ. ಬಿಜೆಪಿಯಿಂದ ಇಲ್ಲಿಂದ ಕಣಕ್ಕಿಳಿತಾರೆ ಅನ್ನೋ ಮಾತುಗಳು ಕ್ಷೇತ್ರದಲ್ಲಿ ದೊಡ್ಡದಾಗಿ ಕೇಳಿ ಬರ್ತಿದೆ. ಹಾಗಿದ್ರೆ ಈ ಕ್ಷೇತ್ರದಿಂದ ಯಾವ ಪಕ್ಷದಿಂದ ಯಾರು ಕಣಕ್ಕಿಳಿತಾರೆ. ಅವ್ರ ಬಲಾಬಲಾ ಏನು ನೋಡೋಣ ಬನ್ನಿ.

ಕೈ ಅಭ್ಯರ್ಥಿ

ಮೊದಲ ಬಾರಿಗೆ ಶಾಸಕರಾದ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್  ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವರಾಗಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಬಿಜೆಪಿಯ ರಘುಪತಿ ಭಟ್  ಒಂದಷ್ಟು ವಿವಾದಗಳಿಗೆ ಸಿಲುಕಿದ ಕಾರಣ ಕೊನೆ ಕ್ಷಣದಲ್ಲಿ  ಚುನಾವಣಾ ಕಣದಿಂದ ಹೊರ ಸರಿದ್ರು. ಇದು ಕಾಂಗ್ರೆಸ್ ಗೆ ವರದಾನವಾಗಿತ್ತು. ಇನ್ನು ಈ ಬಾರಿ ಕೂಡಾ ಕೈ ಪಾಳಯವಂತೂ ಪ್ರಮೋದ್ ಮಧ್ವರಾಜ್ ಅವ್ರನ್ನೇ ಕಣಕ್ಕಿಳಿಸೋದಕ್ಕೆ ಮುಂದಾಗಿದೆ. ಯಾಕಂದ್ರೆ ಪ್ರಮೋದ್ ಮಧ್ವರಾಜ್ ಗೆ ಕ್ಷೇತ್ರದಲ್ಲಿ ಒಳ್ಳೆ ಹಿಡಿತ ಇದೆ. ಇನ್ನು ಸಚಿವರಾದ ಮೇಲಂತೂ ಜನರಿಗೆ ತುಂಬಾ ಹತ್ತಿರವಾಗಿದ್ದಾರೆ. ಹಾಗಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು ಅಂದ್ರೆ ಮತ್ತೆ ಅವ್ರನ್ನೇ ಕಣಕ್ಕಿಳಿಸಬೇಕು ಅನ್ನೋದು ಕಾಂಗ್ರೆಸ್ ನಾಯಕರಿಗೆ ಚೆನ್ನಾಗಿ ಗೊತ್ತು. ಆದ್ರೆ ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲ ದಿನಗಳಿಂದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ತಾರೆ ಅನ್ನೋ ಸುದ್ದಿ ದೊಡ್ಡದಾಗಿ ಈ ಭಾಗದಲ್ಲಿ ಹರಿದಾಡ್ತಿದೆ. ಇದೇ ಪ್ರಶ್ನೆಯನ್ನು ಸಿಎಂ ಗೂ ಕೂಡಾ ಅವ್ರು ಉಡುಪಿ ವಿಸಿಟ್ ಮಾಡಿದ ಸಂದರ್ಭದಲ್ಲಿ ಕೇಳಿದಾಗ ಇಲ್ಲ ಇದೆಲ್ಲಾ ಸುಳ್ಳು ಅಂತಾ ಹೇಳಿದ್ರು. ಹಾಗಂತಾ ಅದೇ ನಿಜ ಅಂತಾ ಇರಕ್ಕಾಗಲ್ಲ. ಬದಲಾಗೋ ರಾಜಕೀಯ ಸನ್ನಿವೇಶಗಳಲ್ಲಿ ಮಧ್ವರಾಜ್ ಅವ್ರು ಬಿಜೆಪಿಗೆ ಬಂದು ಇಲ್ಲಿಂದ ಕಣಕ್ಕಿಳಿದ್ರೂ ಆಶ್ಚರ್ಯ ಇಲ್ಲ. ಅಥವಾ ಮತ್ತೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದ್ರು ಆಶ್ಚರ್ಯ ಇಲ್ಲ. ಯಾಕಂದ್ರೆ ರಾಜಕೀಯದಲ್ಲಿ ಯಾರು ಯಾವಾಗ ಯಾವ ಪಕ್ಷಕ್ಕೆ ಸೇರ್ತಾರೆ ಅನ್ನೋದೇ ಹೇಳಕ್ಕಾಗಲ್ಲ. ಹಾಗಾಗಿ ಕೊನೆ ಕ್ಷಣದ ವರೆಗೂ ಕಾಯಲೇ ಬೇಕು

ಕಮಲ ಮುಡಿಯೋರ್ಯಾರು?

ಉಡುಪಿ ರಘುಪತಿ ಭಟ್ ಅಂದ್ರೆ ಈ ಹೆಸರು ಕೇಳದವರು ಇರ್ಲಿಕ್ಕಿಲ್ಲ.ಯಾಕಂದ್ರೆ ಅವ್ರ ಹೆಸರು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿತ್ತು. ಕೌಟುಂಬಿಕ ಕಲಹ ಬೀದಿಗೆ ಬಂದಿತ್ತು. ಪತ್ನಿಯ ಸಾವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣಗಳಿಂದ ಬೇಸತ್ತಿದ್ದ ರಘುಪತಿ ಭಟ್ ಹಿಂದೆ ಸರಿದಿದ್ದು ಆದ್ರೆ ಈ ಬಾರಿ ಮತ್ತೆ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಅವ್ರ ಮೇಲೆ ಬಂದಿರೋ ಆರೋಪಗಳ ಹೊರತಾಗಿಯೂ ಕೂಡಾ ರಘುಪತಿಭಟ್ ತಾನು ಶಾಸಕನಾಗಿದ್ದ ಅವಧಿಯಲ್ಲಿ ಉಡುಪಿಯಲ್ಲಿ ಮಾಡಿರುವ ಅಭಿವೃದ್ದಿಯನ್ನು ಇನ್ನೂ ಜನ ಮರೆತಿಲ್ಲ. ಅಲ್ಲದೇ ಈ ಬಾರಿ ಅವ್ರ ಬೆಂಬಲಿಗರೇ ರಘುಪತಿ ಭಟ್ ಇಲ್ಲಿಂದ ಕಣಕ್ಕಿಳಿದ್ರೆ  ಸಚಿವ ಪ್ರಮೋದ್ ಮಧ್ವರಾಜರನ್ನು ಸೋಲಿಸ್ತಾರೆ ಬಿಜೆಪಿ ಇಲ್ಲಿ ಗೆಲ್ಲತ್ತೆ ಅಂತಿದ್ದಾರೆ.

ಸುಧಾಕರ್ ಶೆಟ್ಟಿ,ಆಕಾಂಕ್ಷಿ

ಕಳೆದ ಬಾರಿ ಪ್ರಮೋದ್ ಮಧ್ವರಾಜ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದು ಇದೇ ಸುಧಾಕರ್ ಶೆಟ್ಟಿಯವ್ರು. ಆದ್ರೆ ಕೊನೆ ಕ್ಷಣದಲ್ಲಿ ಅವ್ರಿಗೆ ಟಿಕೆಟ್ ಸಿಕ್ಕಿದ್ದ ಕಾರಣ ತೀವ್ರ ಪೈಪೋಟಿ ನೀಡೋದಕ್ಕೂ ಕೂಡಾ ಅವ್ರಿಗೆ ಸಾಧ್ಯವಾಗಿರ್ಲಿಲ್ಲ. ಹಾಗಾಗಿ ಸುಮಾರು 45 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋತ್ರು. ಆದ್ರಕೆ ಈ ಬಾರಿ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ ರಘುಪತಿ ಭಟ್ ಅವ್ರು ಕೂಡಾ ಆಕಾಂಕ್ಷಿಯಾಗಿರೋ ಕಾರಣ ಇವರಿಬ್ಬರ ನಡುವೆ ಯಾರಿಗೆ ಟಿಕೆಟ್ ಕೊಡ್ತಾರೆ ಕಾದು ನೋಡಬೇಕು.

ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ

ಮಾಜಿ ಸಚಿವರಾಗಿರೋ ಜಯಪ್ರಕಾಶ್ ಹೆಗ್ಡೆ ಅವ್ರ ಹೆಸರು ಕೂಡಾ ಬಿಜೆಪಿಯಿಂದ ಈ ಬಾರಿ ಕೇಳಿ ಬರ್ತಿದೆ.  ಹಲವಾರು ವರ್ಷಗಳಿಂದ ರಾಜಕೀಯದಲ್ಲಿದ್ರೂ ಕೂಡಾ ಇವ್ರ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ಸಜ್ಜನ ರಾಜಕಾರಣಿ ಅಂತಾನೂ ಗುರುತಿಸಿಕೊಂಡಿದ್ದಾರೆ. ಶಾಸಕರಾಗಿ, ಸಂಸದರಾಗಿ ಸಚಿವರಾಗಿ ಕೆಲ್ಸ ಮಾಡಿರೋ ಅನುಭವ ಇವ್ರಿಗಿದೆ. ಪಕ್ಷೇತರರಾಗಿ ನಿಂತಾಗ್ಲೂ ಇಲ್ಲಿನ ಜನ ಇವ್ರನ್ನು ಗೆಲ್ಸಲಿಸಿದ್ದಾರೆ ಅಂದ್ರೆ ಅವ್ರ ಸಾಮರ್ಥ್ಯವನ್ನು ತೋರಿಸತ್ತೆ. ಹಾಗಾಗಿ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ರೆ ಜಯಪ್ರಕಾಶ್ ಹೆಗ್ಡೆ ನಿಲ್ಲೋದು ಗ್ಯಾರಂಟಿ ಮತ್ತು ಕಾಂಗ್ರೆಸ್ ನ್ನು ಸೋಲಿಸೋ ಕೆಪಾಸಿಟಿ ಕೂಡಾ ಇವ್ರಿಗೆ ಇದೆ ಅಂತಾರೆ ಇಲ್ಲಿನ ಮತದಾರರು ಇನ್ನುಳಿದಂತೆ ಬಿಜೆಪಿಯಿಂದ ಉಡುಪಿ ಕ್ಷೇತ್ರದಲ್ಲಿ ಕಣಕ್ಕಿಳಿಯೋ ಲಿಸ್ಟ್ ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಸದಸ್ಯರಾಗಿರೋ ಉದಯ್ ಕುಮಾರ್ ಶೆಟ್ಟಿ ಅವ್ರ ಹೆಸರು ಇದೆ ಹಾಗೇನೇ ಮೀನುಗಾರಿಕಾ ಫೆಡರೇಶನ್ ಅದ್ಯಕ್ಷರಾಗಿರೋ ಯಶ್ ಪಾಲ್ ಸುವರ್ಣ ಅವ್ರ ಹೆಸರು ಕೂಡಾ ಇದೆ. ಹಾಗಾಗಿ ಬಿಜೆಪಿ ನಾಯಕರು ಕೊನೆ ಕ್ಷಣದಲ್ಲಿ ಯಾರಿಗೆ ಬಿ ಫಾರ್ಮ್ ಕೊಡ್ತಾರೆ ಅನ್ನೋದನ್ನು ಕಾದು ನೋಡಬೇಕು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 190785 ಮತದಾರರಿದ್ದಾರೆ. ಹಾಗಾನೇ ಒಟ್ಟು 3 ಹೋಬಳಿಗಳಿವೆ. ಉಡುಪಿ ಬ್ರಹ್ಮಾವರ ಮತ್ತು ಕೋಟ. ಉಡುಪಿ ಹೋಬಳಿಯಲ್ಲಿ ಅನೇಕ ಘಟಾನುಘಟಿ ಮುಖಂಡರಿದ್ದಾರೆ. ಮಾಜಿ ಶಾಸಕ ರಘುಪತಿಭಟ್ , ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡೀಸ್, ಸಚಿವ ಪ್ರಮೋದ್ ಮದ್ವರಾಜ್. ಇನ್ನು ಬ್ರಹ್ಮಾವರ ತಾಲೂಕಾಗಿ ಪರಿವರ್ತನೆ ಆಗಬೇಕೆಂಬ ಕಾರಣಕ್ಕಾಗಿ ಅನೇಕ ಹೋರಾಟಗಳು ಇಲ್ಲಿ ನಡೆದಿದೆ. ಇಲ್ಲಿ ಪ್ರಾಭಲ್ಯ ಇರೋದು ಮಾಜಿ ಸಂಸದ ಜಯ ಪ್ರಕಾಶ್ ಹೆಗ್ಡೆ ಅವರ ಬಣ. ಇಲ್ಲಿ ಕಾಂಗ್ರೆಸ್ , ಬಿಜೆಪಿ ಪ್ರಭಾವ ಹೆಚ್ಚಿಲ್ಲ. ಆದ್ರೆ ಇದೀಗ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ನಲ್ಲಿಲ್ಲದ ಕಾರಣ ಬಿಜೆಪಿ ತನ್ನ ಬಲವನ್ನು ಹೆಚ್ಚಿಸಿದೆ. ಇನ್ನು ಕೋಟದಲ್ಲಿ ಮಾಜಿ ಸಚಿವರಾಗಿ ಇದೀಗ ವಿಧಾನಪರಿಷತ್ ಸದಸ್ಯರಾಗಿರುವ  ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಪ್ರಭಾವಿ ಲೋಕಲ್ ಲೀಡರ್. ಇದೆಲ್ಲವನ್ನು ನೋಡ್ತಾ ಇದ್ರೆ ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಲ್ ಮೋಸ್ಟ್ ಆಲ್ ಈಕ್ವಲ್ ಆಗಿದೆ. ಹಾಗಾಗಿ ಈ ಬಾರಿ ಜಿದ್ದಾಜಿದ್ದಿನ ಪೈಟ್ ಇರೋದು ಗ್ಯಾರಂಟಿ.

ಸಚಿವರಾಗಿರೋ ಪ್ರಮೋದ್ ಮಧ್ವರಾಜ್ ಗೆ ಕ್ಲೀನ್ ಇಮೇಜ್ ಇದೆ. ಯಾವುದೇ ಹಗರಣದಲ್ಲಿ ಅವ್ರ ಹೆಸರಿಲ್ಲ. ಆರೋಪ ಮುಕ್ತರಾಗಿದ್ದಾರೆ. ಜತೆಗೆ ಮೊಗವೀರ ನಾಯಕರಾಗಿ ಮಿಂಚುತ್ತಿದ್ದಾರೆ. ಹಾಗಾಗಿ ಮತ್ತೆ ಕಾಂಗ್ರೆಸ್ ನಿಂದಲೇ ಕಣಕ್ಕಿಳಿದ್ರೆ ಗೆಲ್ಲೋ ಚಾನ್ಸ್ ಇದೆ. ಹಾಗೇನೇ ಬಿಜೆಪಿ ಕೂಡಾ ಇಲ್ಲಿ ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಈ ಹಿಂದೆ ರಘುಪತಿ ಭಟ್ ಅವ್ರಿದ್ದಾಗ ಮಾಡಿದ ಅವ್ರ ಅಭಿವೃದ್ಧಿ ಕೆಲ್ಸಗಳನ್ನು ಜನ ಮರೆತಿಲ್ಲ.  ಹಾಗಾಗಿ ಮೋದಿ ಪ್ರಭಾವ ಮತ್ತು ಇಲ್ಲಾಗ್ತಿರೋ ಒಂದಷ್ಟು ಘಟನೆಗಳನ್ನು ಬಳಸಿಕೊಂಡ್ರೆ ಬಿಜೆಪಿ ಕೂಡಾ ಇಲ್ಲಿ ಗೆಲ್ಲಬಹುದು. ಒಟ್ನಲ್ಲಿ ಎಲೆಕ್ಷನ್ ಟೈಮ್ ನಲ್ಲಿ ಯಾರು ಸರಿಯಾದ ರೀತಿಯಲ್ಲಿ ಮತದಾರನ ಮನ ಗೆಲ್ಲೋದಕ್ಕಾಗತ್ತಾ ಅಂತಹವರೇ ಇಲ್ಲಿ ಗೆಲ್ತಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಸದ್ಯಕ್ಕೆ ಕೋಮುವಾದ,  ಮತ್ತು ಇಲ್ಲಿನ ಸರಣಿ ಹತ್ಯೆಗಳು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here