ಮೋದಿಯ “ವಿಕಾಸ್ ಕಾ ಗಾಂಡೊಛೆ” ಮತ್ತು ಗುಜರಾತ್ ಚುನಾವಣೆ !!

ಗುಜರಾತ್ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡುವ ಸಲುವಾಗಿ ಬಿಟಿವಿ ತಂಡ ಗುಜರಾತ್ ಪ್ರವಾಸದಲ್ಲಿದೆ. ಗುಜರಾತ್ ನ ಅಭಿವೃದ್ದಿ ಬಗ್ಗೆ ಪರವಿರೋಧ ಚರ್ಚೆಗಳು ಆಗುತ್ತಿರೋ ಸಂಧರ್ಭದಲ್ಲಿ ಅಲ್ಲಿನ ಗ್ರೌಂಡ್ ರಿಯಾಲಿಟಿ ಬಗ್ಗೆ ಬಿಟಿವಿಯ ಹಿರಿಯ ರಾಜಕೀಯ ವರದಿಗಾರ ನವೀನ್ ಸೂರಿಂಜೆ ಬರೆಯುತ್ತಾರೆ :

ಅಹಮದಾಬಾದ್ ನ ರಿವರ್ ಫ್ರಂಟ್ ನಿಂದ ವಾಪಸ್ ಬರುತ್ತಿದ್ವಿ. ನಾವು ಕನ್ನಡಿಗರು ಎಂದು ತಿಳಿದ ಕ್ಯಾಬ್ ಚಾಲಕ, ತಾನೂ ಬೆಂಗಳೂರಿನಲ್ಲಿ ಕೆಲ ಸಮಯ ಇದ್ದೆ ಅಂದ. ಬೆಂಗಳೂರು ಡೆವಲಪ್ಮೆಂಟ್ ಮತ್ತು ಅಹಮದಾಬಾದ್ ಡೆವಲಪ್ಮೆಂಟ್ ಎರಡನ್ನೂ ಕಂಪೇರ್ ಮಾಡಿದ್ರೆ ಏನನ್ನಿಸುತ್ತೆ ? ಅಂತ ನೇರವಾಗಿ ಕೇಳಿದೆ. ಎಲ್ಲಿಯ ಬೆಂಗಳೂರು ? ಎಲ್ಲಿಯ ಅಹಮದಾಬಾದ್ ? ಎಂದು ಮರಳಿ ಪ್ರಶ್ನಿಸಿದ. ಆದ್ರೂ ಯಾಕೆ ಜನ ಮೋದಿ ಮೋದಿ ಅಂತಾರೆ ಅಂತ ಕೇಳಿದ್ರೆ ” ವಿಕಾಸ್ ಕಾ ಗಾಂಡೋಛೆ” ಅಂದ. ಗಾಂಡೋಚೆ ಅಂದರೆ ಹುಚ್ಚು ಕಲ್ಪನೆ. ವಿಕಾಸದ ಹುಚ್ಚು ಕಲ್ಪನೆ ಈ ರೀತಿ ಕೂಗು ಹಾಕಿಸುತ್ತದೆ ಎಂಬುದು ಆತನ ಅಭಿಪ್ರಾಯ. ಮೋದಿ ವಿಕಾಸ್ ಕಾ ಗಾಂಡೋಚೆ ಎಂಬುದು ಗುಜರಾತ್ ನ ಜನಸಾಮಾನ್ಯರ ಆಡುಮಾತಿನ ಟೀಕೆ !

ಗುಜರಾತ್ ನ ಪಟಾನ್ ಜಿಲ್ಲೆಯ ಸಿದ್ಪುರ್ ನಲ್ಲಿ ಒಂದು ಸ್ಮಶಾನ ಇದೆ. ವಾಟ್ಸಪ್, ಫೇಸ್ ಬುಕ್, ಸ್ಮಾರ್ಟ್ ಫೋನ್ ಗಳು ಇಲ್ಲದ ದಿನಗಳವು. ಆಗಲೇ ಆ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ಲೈವ್ ಮಾಡುವ ವ್ಯವಸ್ಥೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮುತುವರ್ಜಿಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಉತ್ತಮ ಧರ್ಜೆಯ ಕ್ಯಾಮಾರ, ಕಂಪ್ಯೂಟರ್ ಗಳು, ಹೈಸ್ಪೀಡ್ ಇಂಟರ್ನೆಟ್ ವ್ಯವಸ್ಥೆ ಈ ಸ್ಮಶಾನದಲ್ಲಿದೆ. ಅದಕ್ಕೆ ಕಾರಣ ಈ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಗಳು ಹೊಂದಿರುವ ವಿದೇಶದ ಸಂಪರ್ಕ. ಸಿದ್ಪುರದ ಸುತ್ತಮುತ್ತದ ಜಿಲ್ಲೆಗಳು ಪಟೇಲ್ ಪ್ರಾಬಲ್ಯವನ್ನು ಹೊಂದಿದೆ. ಪಟೇಲ್ ಸಮುದಾಯ ಅತ್ಯಧಿಕ ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅದು ಸಾಧ್ಯ ಆಗಿರೋದು ಅವರ ವ್ಯವಹಾರಿಕ ಜಾಣ್ಮೆಯಿಂದ. ಜೊತೆಗೆ ಬೇರೆ ಸಮುದಾಯಗಳ ಕುಟುಂಬಗಳೂ ಕೂಡಾ ಇತ್ತಿಚೆಗೆ ವಿದೇಶದಲ್ಲಿ ಬದುಕು ಕಂಡುಕೊಂಡಿದೆ. ಅನಿವಾಸಿ ಭಾರತೀಯರಾಗಿರುವ ಗುಜರಾತಿಗಳ ಕುಟುಂಬದವರು ಗುಜರಾತಿನ ಊರುಗಳಲ್ಲಿ ನಿಧನ ಹೊಂದಿದಾಗ ಭಾರತಕ್ಕೆ ಬರಲಾಗದ ಎನ್ ಆರ್ ಐಗಳು ಸ್ಮಶಾನದಲ್ಲಿರುವ ಲೈವ್ ವ್ಯವಸ್ಥೆ ಬಳಸಿಕೊಂಡು ವಿದೇಶದಲ್ಲೇ ಕುಳಿತುಕೊಂಡು ತಮ್ಮವರ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ನೋಡಬಹುದು. ಇದು ಬಹುಶಃ ದೇಶದ ಯಾವ ಮೂಲೆಯಲ್ಲೂ ಇಲ್ಲ.

ಮೊನ್ನೆ ಮೊನ್ನೆ ನದಿಯಲ್ಲಿ ಪ್ರಧಾನಿ ವಿಮಾನ ಇಳಿಸಿ, ನದಿ ನೀರನ್ನೇ ರನ್ ವೇ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿದ್ದು ಸುದ್ದಿಯಾಯ್ತು. ಅವರು ಸಮುದ್ರ ವಿಮಾನ (ಸೀ ಫ್ಲೈಟ್)   ತೋರಿಸಲು ಈ ಪ್ರಯೋಗಕ್ಕೆ ಮುಂದಾಗಿದ್ದಲ್ಲ. ಬದಲಾಗಿ ರಿವರ್ ಫ್ರಂಟ್ ಯೋಜನೆಯನ್ನು ತೋರಿಸಿ ಗುಜರಾತ್ ಅಭಿವೃದ್ದಿಯನ್ನು ಜನರ ಮುಂದಿಡಬೇಕಿತ್ತು. ರಿವರ್ ಫ್ರಂಟ್ ಎನ್ನುವುದು ಒಂದು ಮಾಯಾಲೋಕ. ಯಾವುದೇ ದೇಶದ ಪ್ರಧಾನಿ ಬಂದರೂ, ರಾಯಬಾರಿ ಬಂದರೂ ರಿವರ್ ಫ್ರಂಟ್ ನಲ್ಲೇ ಕಾರ್ಯಕ್ರಮ, ಸುತ್ತಾಟ. ರಿವರ್ ಫ್ರಂಟ್ ಅನ್ನೋದು ಸಾಬರಮತಿ ನದಿಯ ಇಕ್ಕೆಲಗಳಲ್ಲಿ ಚತುಷ್ಪಥ ರಸ್ತೆ, ಮೇಲ್ಬಾಗ, ಕೆಳಭಾಗದಲ್ಲಿ ಆಕರ್ಷಕ ಪಥ, ಗಾರ್ಡನ್ ಗಳನ್ನು ಹೊಂದಿರುತ್ತದೆ. ಒಟ್ಟು 12 ಕಿಮಿ ರಸ್ತೆ ಇದ್ದು, ಎರಡು ಬ್ರಿಡ್ಜ್ ಗಳೂ ಸೇರಿದಂತೆ ಸುಮಾರು 500 ಎಕರೆ ಭೂ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿಯನ್ನು ವೆಚ್ಚಮಾಡಲಾಗಿದೆ. ಇದು ಇಡೀ ಗುಜರಾತ್ ನ ಹೆಮ್ಮೆಯ ಪ್ರತೀಕವಾಗಿ ನಿಂತಿದೆ. ಇದು ನರೇಂದ್ರ ಮೋದಿಯವರ ಪೆಟ್ ಪ್ರಾಜೆಕ್ಟ್ !

ಗುಜರಾತ್ ನಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಈ ರಿವರ್ ಫ್ರಂಟ್ ಯೋಜನೆಯ ಪ್ರಸ್ತಾಪವಿತ್ತು. ಆದರೆ ಮೂರು ಕಾರಣಗಳಿಗಾಗಿ ಕಾಂಗ್ರೆಸ್ ಸರಕಾರ ಈ ಯೋಜ‌ನೆಯ ಜಾರಿಗೆ ಮೀನಮೇಷ ಎಣಿಸಿತು. ಮೊದಲನೆಯದು ಸಬರಮತಿ ರಿವರ್ ಫ್ರಂಟ್ ಯೋಜನೆಯಿಂದಾಗಿ ದೇಶವಿದೇಶಿಗರ ಗಮನ ಸೆಳೆದಿರುವ ಮಹಾತ್ಮಾ ಗಾಂಧೀಜಿಯ ಸಬರಮತಿ ಆಶ್ರಮ ಕಳೆಗುಂದುತ್ತದೆ. ಎರಡನೆಯದು ನದಿಯ ಇಕ್ಕೆಲಗಳಲ್ಲಿ ಗುಡಿಸಲು ಕಟ್ಟಿಕೊಂಡಿರುವ ಸಾವಿರಾರು ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಮೂರನೆಯದ್ದು ಪರಿಸರ ನಾಶ. ನದಿಯ ಪ್ರಾಕೃತಿಕ ದಂಡೆಯನ್ನು ನಾಶಪಡಿಸಿ ಕಾಂಕ್ರೀಟ್ ದಂಡೆಯ ಜೊತೆಗೆ ನದಿಗೆ ತಟವೇ ಇಲ್ಲವಾಗಿಸುವುದು ಹಲವು ಜೀವವೈವಿದ್ಯಗಳ ನಾಶಕ್ಕೆ ಕಾರಣವಾಗುತ್ತದೆ. ಸಾವಿರಾರು ಮರಗಳನ್ನೂ ಧರೆಗುರುಳಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಕಾಂಗ್ರೆಸ್ ಸರಕಾರ ಈ ಯೋಜನೆಯಿಂದ ಹಿಂದೆ ಸರಿದಿತ್ತು.

ಯಾವಾಗ ನರೇಂದ್ರ ಮೋದಿ ಮುಖ್ಯಮಂತ್ರಿಯಾದರೊ ತಕ್ಷಣ ಈ ಯೋಜನೆಗೆ ಚಾಲನೆ ನೀಡಿದರು. ಜಗತ್ತಿನ ಯಾವುದೇ ಮೂಲೆಯಿಂದ ಪ್ರವಾಸಿಗರು ಬಂದರೂ ರಿವರ್ ಫ್ರಂಟ್ ನೋಡಿ ಗುಜರಾತನ್ನು ಕೊಂಡಾಡಲೇಬೇಕು. ಆದರೆ ನದಿ ಬದಿಯಲ್ಲಿದ್ದ ಗುಡಿಸಲನ್ನು ರಿವರ್ ಫ್ರಂಟ್ ನ ಇಕ್ಕೆಲಗಳಿಗೆ ಸ್ಥಳಾಂತರಿಸಲಾಗಿದೆ. ಗುಡಿಸಲುಗಳು ಮೇಲ್ನೋಟಕ್ಕೆ ಕಾಣದಂತೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಚ ಭಾರತ ಯೋಜನೆ ಗುಜರಾತ್ ನಲ್ಲಿ ಸಂಪೂರ್ಣ ವಿಫಲವಾಗಿದೆ. ಅಹಮದಾಬಾದ್ ನಂತಹ ದೊಡ್ಡ ನಗರದ ಹೆಚ್ಚಿನ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಜೋಪಡಿ ಹಾಕಿದ ಕುಟುಂಬ ಸಿಗುತ್ತದೆ. ಅಲ್ಲೇ ಫುಟ್ ಪಾತ್ ಬದಿಯಲ್ಲಿ ಶೌಚ, ಅಲ್ಲೇ ಸ್ನಾನ, ಅಲ್ಲೇ ಮುಸುರೆ ತಿಕ್ಕುವಿಕೆ.

ಹಾಗೆ ನೋಡಿದರೆ ಅಹಮದಾಬಾದ್  ಸ್ಲಂ ಗಳಿಗೇ ಹೆಸರುವಾಸಿ. ಒಂದು ಅಧ್ಯಯನದ ಪ್ರಕಾರ ನಾಲ್ಕು ಲಕ್ಷ ಸ್ಲಂವಾಸಿಗಳು ಇದ್ದರು. ಇದನ್ನು ಕೊನೆಗಾಣಿಸಲು ರಾಜ್ಯ ಸರಕಾರ ಏನೂ ಮಾಡಿಲ್ಲ ಎಂದಲ್ಲ. ನಾರಾಯಣಪುರ ಸೇರಿದಂತೆ ನಗರದ ಹಲವೆಡೆ ಫ್ಲ್ಯಾಟ್ ಮಾಧರಿಯ ಮನೆಗಳನ್ನು ನಿರ್ಮಿಸಿ ಸ್ಲಂ ವಾಸಿಗಳನ್ನು ಸ್ಥಳಾಂತರಿಸಿದೆ. ಆದರೆ ದೇಶದ ಒಟ್ಟಾರೆ ಅಭಿವೃದ್ದಿ ನಾಗಲೋಟಕ್ಕೆ ಅದು ಸಾಲುತ್ತಿಲ್ಲ. ನಗರದ ಪ್ರಮುಖ ಭಾಗಗಳಲ್ಲಿ ಇನ್ನೂ ಜೋಪಡಿಯ ಕಾಲನಿಗಳಿದ್ದು ಇಡೀ ಗುಜರಾತನ್ನು ಪ್ರಶ್ನೆ ಮಾಡುತ್ತಿದೆ.

ಆಶ್ಚರ್ಯಕರ ಸಂಗತಿಯೆಂದರೆ ವಿಧಾನಸೌಧದಿಂದ ಕೇವಲ ಎರಡುವರೆ ಕಿಮಿ ದೂರದಲ್ಲಿ ಕೊಳೆಗೇರಿ ಇರುವಂತದ್ದು ! ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗ ವಾಸಿಸುತ್ತಿದ್ದ ಸರಕಾರಿ ಬಂಗಲೆ ಮತ್ತು ವಿಧಾನಸಭಾ ಎಂದು ಕರೆಯುವ ವಿಧಾನಸೌಧದಿಂದ ಕೇವಲ ಎರಡುವರೆ ಕಿಮಿ ದೂರದಲ್ಲಿ ಸ್ಲಂ ಇದೆ. ಸುಮಾರು 30 ಮನೆಗಳಿರುವ ಈ ಜೋಪಡಿಗಳ ಕಾಲನಿ ಹಲವು ಸರಕಾರಗಳ ಅವಧಿಯಲ್ಲೂ ಇವೆ. ರೇಷನ್ ಕಾರ್ಡ್, ಓಟರ್ ಕಾರ್ಡ್ ಹೊಂದಿರುವ ಬಹುತೇಕರು ಈ ಜೋಪಡಿ ಕಾಲನಿಯಲ್ಲಿದ್ದಾರೆ. ಅಹಮದಾಬಾದ್ ಮನ್ಸಿಪಲ್ ಕಾರ್ಪೋರೇಷನ್ ಇವರಿಗೆ ನೀರಿನ ಸೌಲಭ್ಯ ನೀಡಿದೆ. ಆದರೆ ಯಾವುದೇ ಸರಕಾರಗಳು ಈವರೆಗೂ ಇವರನ್ನು ಗುಡಿಸಲು ಮುಕ್ತರನ್ನಾಗಿಸಿ ಮನೆ ನೀಡಲು, ಮೂಲಭೂತ ಸೌಕರ್ಯಗಳುಳ್ಳ ಕಾಲನಿಯಾಗಿ ಪರಿವರ್ತಿಸಲು ಮನಸ್ಸು ಮಾಡಿಲ್ಲ. ವಿಧಾನಸೌಧದ ಅನತಿ ದೂರದಲ್ಲೇ ಕೊಳೆಗೇರಿ ಇರೋ ಒಂದೇ ರಾಜ್ಯ ಗುಜರಾತ್ ಅನ್ನಿಸುತ್ತದೆ.

ವಿದ್ಯುತ್ ಮತ್ತು ಕುಡಿವ ನೀರಿಗೆ ಗುಜರಾತ್ ಸರಕಾರ ವಿಶೇಷ ಆಧ್ಯತೆ ನೀಡುತ್ತದೆ. ಯಾವುದೇ ಮನೆಗಳಲ್ಲೂ ನೀರಿನ ಸಮಸ್ಯೆ ಆಗಿದ್ದೇ ಇಲ್ಲ ಅನ್ನುವ ರೀತಿ ಸರಕಾರ ಕಾರ್ಯಾಚರಿಸಿದೆ. ಸೌರಾಷ್ಟ್ರ ಭಾಗದಲ್ಲಿ ಬೇಸಗೆಯಲ್ಲಿ ಆಗುವ ಸಹಜ ಕುಡಿವ ನೀರಿನ ಬರ ಸರಕಾರವನ್ನು ಕಂಗೆಡಿಸಿದ್ದರೂ ಅದನ್ನು ನವೀರಾಗಿ ನಿರ್ವಹಿಸಿದೆ ಎನ್ನುತ್ತಾರೆ ಸ್ಥಳೀಯರು. ರೈತರಿಗೆ ಇದು ಅನ್ವಯಿಸೋದಿಲ್ಲ. ಪವರ್ ಕಟ್ ಕೂಡಾ ಇಲ್ಲದಂತೆ ಸರಕಾರ ಎಚ್ಚರಿಕೆ ವಹಿಸಿದೆ. ಬಹುಶಃ ವಿದ್ಯುತ್ ಖೋತಾ ಎಂಬುದನ್ನು ಇಲ್ಲಿನ ಜನ ಕೇಳಿಯೇ ಇಲ್ಲವೇನೋ ! ಆದರೆ ವಿದ್ಯುತ್ ಸಂಪರ್ಕವೇ ಇಲ್ಲದ ನೂರಾರು ಮನೆಗಳು ಹಳ್ಳಿಗಳಲ್ಲಿ ಮಾತ್ರವಲ್ಲ ನಗರದ ಜೊಪಡಿ ಕಾಲನಿಗಳಲ್ಲೂ ಇವೆ. ಆ ಕುಟುಂಬಗಳಿಗೆ ಗುಜರಾತ್ ನಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಇದ್ದರೆಷ್ಟು ಬಿಟ್ಟರೆಷ್ಟು ?

ರಾತ್ರಿ 10 ಗಂಟೆ ಕಳೆದ ಬಳಿಕ ಅಹಮದಾಬಾದ್ ರಸ್ತೆಯಲ್ಲಿ ಅಡ್ಡಾಡಿದರೆ ಇಡೀ ಗುಜರಾತ್ ನ ವಸತಿ ರಹಿತರ ಚಿತ್ರಣ ಸಿಗಬಹುದು. ಪುಟ್ ಪಾತನ್ನೇ ಮನೆಯನ್ನಾಗಿಸಿಕೊಂಡವರು ಹೆಜ್ಜೆ ಹಾಕಲು ಅವಕಾಶ ಸಿಗದಂತೆ ಕಾಣಸಿಗುತ್ತಾರೆ. ಬಾಲಕಾರ್ಮಿಕರು, ಬಿಕ್ಷುಕ ಮಕ್ಕಳ ವಿಚಾರದಲ್ಲಂತೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂಬುದು ಗುಜರಾತ್ ನಲ್ಲಿ ಅಸ್ತಿತ್ವದಲ್ಲೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಕೆಟ್ಟದಾಗಿದೆ.

ಕಳೆದ ಹತ್ತು ವರ್ಷಗಳಿಂದ ಪ್ರಯತ್ನಪಟ್ಟರೂ ಇಲ್ಲಿಯವರೆಗೆ ಮೆಟ್ರೋ ರೈಲು ಯೋಜನೆಯನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೂ, ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಟ್ಟಿದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ಗುಜರಾತಿನ ರಾಜ್ಯ ಹೆದ್ದಾರಿಗಳು ಕೂಡಾ ಅತ್ಯುನ್ನತವಾಗಿದೆ. ಗುಂಡಿಗಳು ಇಲ್ಲದ, ಅಗಲವಾದ ಸ್ಟೇಟ್ ಹೈವೆಯನ್ನು ಹೊಂದಿದೆ. ವಿಚಿತ್ರ ಮತ್ತು ವಿಪರ್ಯಾಸ ಎಂದರೆ ಸ್ಟೇಟ್ ಹೈವೆಯಲ್ಲೂ ಟೋಲ್ ಗೇಟ್ ನಿರ್ಮಿಸಿರೋದು. ಕಾರು, ಬೈಕು, ರಿಕ್ಷಾ ಹೊರತುಪಡಿಸಿ ಎಲ್ಲಾ ವಾಹನಗಳನ್ನು ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣಿಸಲು ಬಳಸುವ ರಾಜ್ಯ ಹೆದ್ದಾರಿಗೂ ಟೋಲ್ ಪಾವತಿಸಬೇಕು !

ಗುಜರಾತ್ ನಲ್ಲಿ ಜನ ಅಭಿವೃದ್ದಿಯ ಗುಂಗಿನಲ್ಲಿದ್ದಾರೆ. ಏನು ಅಭಿವೃದ್ದಿ ಎಂದು ಕೇಳಿದ್ರೆ ಉತ್ತರವಿಲ್ಲದಿದ್ದರೂ ಅಭಿವೃದ್ದಿಯಾಗಿದೆ ಮತ್ತೂ ಆಗುತ್ತಿದೆ ಎನ್ನುತ್ತಾರೆ. ಇದನ್ನೇ ಗುಜರಾತಿ ಭಾಷೆಯಲ್ಲಿ ವಿಕಾಸ್ ಕಾ ಗಾಂಡೋಛೆ ಅನ್ನುವುದು.

 

ಲೇಖಕರು: ನವೀನ್ ಸೂರಿಂಜೆ.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here