ಮಾಜಿ ಪ್ರಧಾನಿ ಹಾಗೂ ಹಾಲಿ ಕೇಂದ್ರ ಸಚಿವರಿಗೂ ತಟ್ಟಿದ ವಾಹನ ಪರಿಶೀಲನೆಯ ಬಿಸಿ!!

ಲೋಕಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಚುನಾವಣಾ ಅಖಾಡ ಕಾವೇರುತ್ತಿದೆ. ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಚುನಾವಣಾ ಆಯೋಗ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಜ್ಯ ಹಾಗೂ ಹೊರರಾಜ್ಯದಿಂದ ಬರುತ್ತಿರುವ ವಾಹನಗಳ ಪರಿಶೀಲನೆ ನಡೆದಿದೆ. ಇನ್ನು ಈ ಪರಿಶೀಲನೆಯ ಬಿಸಿ ಇಂದು ಮಾಜಿ ಪ್ರಧಾನಿ ಹಾಗೂ ಹಾಲಿ ಕೇಂದ್ರ ಸಚಿವರಿಗೂ ತಟ್ಟಿದೆ.

ತುಮಕೂರಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದ ದೇವೆಗೌಡರಿಗೆ ಚುನಾವಣಾ ಅಧಿಕಾರಿಗಳು ಪರಿಶೀಲನೆಯ ಬಿಸಿ ಮುಟ್ಟಿಸಿದ್ದಾರೆ.  ತುಮಕೂರಿನ ಕ್ಷೇತ್ರದಲ್ಲಿ ಪ್ರಚಾರಕ್ಕೆಂದು ಹೋಗುತ್ತಿದ್ದ ವೇಳೆ ಕುಣಿಗಲ್ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ದೇವೇಗೌಡರ ಕಾರನ್ನು ಪರಿಶೀಲಿಸಿದ್ದಾರೆ, ಚುನಾವಣಾ ಅಧಿಕಾರಿಗಳು ಕಾರನ್ನು ತಪಾಸಣೆ ನಡೆಸಲು ದೇವೇಗೌಡರು ಕೂಡ ಅವರೋದಿಗೆ ಸಹಕಾರ ನೀಡಿದರು.

ಇನ್ನು  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ  ಡಿ.ವಿ.ಸದಾನಂದಗೌಡರ ಕಾರು ಕೂಡ ಪರಿಶೀಲನೆಗೆ ಒಳಗಾಯಿತು. ಇಂದು ಬೆಳಿಗ್ಗೆ ಮಾಗಡಿ ರಸ್ತೆಯ ದೊಡ್ಡ ಗೊಲ್ಲರಹಟ್ಟಿಯ ಬಳಿ ಚುನಾವಣಾ ಪ್ರಚಾರಕ್ಕೆಂದು ಹೋಗುವ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ಸದಾನಂದ ಗೌಡರು ತೆರಳುತ್ತಿದ್ದ ಕಾರನ್ನು ನಿಲ್ಲಿಸಿ  ತಪಾಸಣೆ ನಡೆಸಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕದ ಮುಖ್ಯ ಮಂತ್ರಿ ಸಿ.ಎಂ ಕುಮಾರ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯ ನಾಯಕರ ಕಾರು, ವಿಮಾನಗಳನ್ನು ಕೂಡ ಪರಿಶೀಲಿಸಲಾಗಿತ್ತು.