ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯಲ್ಲಿ ರೈತರ ಸಾಲಮನ್ನಾ !! ಬಿಜೆಪಿ ಪ್ರಣಾಳಿಕೆ ಬಿಡುಗಡೆ !!

ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷ ರೂ.ಗಳ ಸಾಲ ಮನ್ನಾ ಹಾಗು ಸಹಕಾರಿ ಸಂಘಗಳಲ್ಲಿನ ಸಾಲಮನ್ನಾ ವನ್ನು 50 ಸಾವಿರದಿಂದ 1 ಲಕ್ಷಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಪ್ರಸಕ್ತ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಬಳಿಕ ಸುರೇಶ್ ಕುಮಾರ್ ನೇತೃತ್ವದ ಸಮಿತಿ ರಚಿಸಿರುವ ಪ್ರಣಾಳಿಕೆಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಿಡುಗಡೆಗೊಳಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್,ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಯಡಿಯೂರಪ್ಪ, ಸಹಕಾರಿ ಸಂಘದಲ್ಲಿನ ರೈತರ 50 ಸಾವಿರ ರೂ.ಗಳವರೆಗಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುವಂತೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ಕಡೆ ನೋಡದೇ ರಾಷ್ಟ್ರೀಕೃತ ಬ್ಯಾಂಕ್ ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡುಸುತ್ತೇನೆ. ಜೊತೆಗೆ ಸಹಕಾರಿ ಸಂಘದ ಸಾಲ ಮನ್ನಾವನ್ನು 50 ಸಾವಿರದಿಂರ 1 ಲಕ್ಷಕ್ಕೆ‌ ಹೆಚ್ಚಳ ಮಾಡುತ್ತೇನೆ, ಜೊತೆಗೆ ಮೂರು‌ ತಿಂಗಳ ಒಳಗೆ ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು.

ರಾಜ್ಯ ಪ್ರವಾಸದ ವೇಳೆ ಕಂಡುಬಂದ 224 ಕ್ಷೇತ್ರಗಳ ಸಮಸ್ಯೆ ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ,ಅದನ್ನು ಗೌರವದಿಂದ ನಾಡಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇವೆ. ಮುಂದಿನ 5 ವರ್ಷ ರಾಜ್ಯದ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ,ಜನರ ಆಶೋತ್ತರ ತಿಳಿದು ಪ್ರಣಾಳಿಕೆ ಸಿದ್ದಪಡಿಸಲಾಗಿದೆ.ಮೋದಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಾರ್ಗಸೂಚಿ ಇದಾಗಿದೆ ಎಂದು ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು. ಈಡೇರಿಸಲಾಗದ ಭರವಸೆಯ ಪಟ್ಟಿ ಇದಲ್ಲ, ನಮ್ಮನ್ನು ಅಧಿಕಾರಕ್ಕೆ ತರುವುದು ಖಚಿತ ಹಾಗಾಗಿ ಹಣಕಾಸು ವಿವರ. ಕರ್ನಾಟಕದ ಯುವ ಜನತೆ ಭವಿಷ್ಯ, ಸರ್ವರಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ, ಮಕ್ಕಳ ಶಿಕ್ಷಣಕ್ಕೆ ಕಾಯಕಲ್ಪ, ಆರೋಗ್ಯ ಕರ್ನಾಟಕ, ಮೂಲಸೌಕರ್ಯ ವಿಸ್ತರಣೆ, ಆರ್ಥಿಕ ಔದ್ಯೋಗಿಕ ವಿಸ್ತರಣೆ, ನವ ಭಾರತಕ್ಕಾಗಿ ನವ ಬೆಂಗಳೂರು ಸೇರಿದಂತೆ ಹತ್ತು ಹಲವು ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ ಸರ್ಕಾರದ ಬದಲಿಸಿ ಬಿಜೆಪಿ ಗೆಲ್ಲಿಸಿ ಉದ್ದೇಶದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ ಎಂದರು.