ರಾಹುಲ್ ಬೆನ್ನಲ್ಲೆ ರಾಜ್ಯಕ್ಕೆ ಬರ್ತಿದ್ದಾರೆ ಶಾ- ಇದು ಚುನಾವಣೆಯ ಹಿನ್ನೆಲೆಯಲ್ಲಿ ನಡಿತಿರೋ ಪ್ರವಾಸ ಪಾಲಿಟಿಕ್ಸ್!!

ದೇಶ ಮಟ್ಟದಲ್ಲಿ ಕರ್ನಾಟಕದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ದ ನೇತೃತ್ವದ ಕಾಂಗ್ರೆಸ್​ ಗೆಲುವಿಗಾಗಿ ಚುನಾವಣಾ ರಣತಂತ್ರಕ್ಕೆ ಮುಂಧಾಗಿದೆ.

ಇದರ ಫಲವಾಗಿಯೇ ಇದೀಗ ರಾಹುಲ್ ಗಾಂಧಿ ರಾಜ್ಯ ಪ್ರವಾಸಕ್ಕೆ ಪರ್ಯಾಯವಾಗಿ ಅಮಿತ್​ ಶಾ ರಾಜ್ಯ ಪ್ರವೇಶ ಏರ್ಪಡಿಸಿದ್ದು, ಮತದಾರರನ್ನು ಸೆಳೆಯಲು ಸರ್ಕಸ್ ಆರಂಭಿಸಿದೆ. ಹೌದು ಇನ್ನೇನು ಎರಡು ದಿನಗಳಲ್ಲಿ ಕಾಂಗ್ರೆಸ್​​ನ ಯುವರಾಜ ಹಾಗೂ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ರಾಜ್ಯ ಪ್ರವಾಸಕ್ಕೆ ಬರಲಿದ್ದು, ರಾಜ್ಯದ ಬಳ್ಳಾರಿ-ಹೊಸಪೇಟೆ ಸೇರಿ ಹಲವೆಡೆ ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ. ಈ ಭೇಟಿ ಬೆನ್ನಲ್ಲೇ ಬಿಜೆಪಿಯ ಮಾಸ್ಟರ್​ ಮೈಂಡ್​​ ಅಮಿತ್ ಶಾ ಕೂಡ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ಫೆಬ್ರವರಿ 18 ಕ್ಕೆ ರಾಜ್ಯಕ್ಕೆ ಬರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 18 ರಂದು ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಲಿರುವ ಅಮಿತ್ ಶಾ 19 ರಂದು ದಕ್ಷಿಣ ಕನ್ನಡ ಹಾಗೂ 20 ರಂದು ಉಡುಪಿ-ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಲಿದ್ದಾರೆ.

ಉಡುಪಿ ಭೇಟಿ ವೇಳೆ ಅಮಿತ್ ಶಾ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಇತ್ತೀಚಿಗೆ ಕೊಲೆಯಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್​ ಮೇಸ್ತಾ , ಮಂಗಳೂರಿನ ದೀಪಕ್ ರಾವ್​ ನಿವಾಸಕ್ಕೂ ಶಾ ಭೇಟಿ ನೀಡಲಿದ್ದಾರೆ. ಅಲ್ಲದೇ ಶಿರಸಿಯ ಶ್ರೀಮಾರಿಕಾಂಬಾ ದೇವಾಲಯಕ್ಕೂ ಶಾ ಭೇಟಿ ನೀಡಲಿರೋದು ಕರಾವಳಿಯ ಬಿಜೆಪಿಗರಲ್ಲಿ ಸಂಭ್ರಮ ತಂದಿದೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಶಾ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದು, ರಾಜಕೀಯ ಲೆಕ್ಕಾಚಾರ ಚುರುಕುಗೊಂಡಿದೆ.