ಟಿಕೇಟ್​​ ಸಿಗದಿದ್ದಕ್ಕೆ ರವಿ ಗಾಣಿಗಾ ಬೆಂಬಲಿಗರ ದಾಂಧಲೆ- 13 ಬೆಂಬಲಿಗರ ಬಂಧನ- ರವಿಗಾಣಿಗಗಾಗಿ ಪೊಲೀಸರ ಶೋಧ!

ಮಂಡ್ಯ ಕಾಂಗ್ರೆಸ್​ ಟಿಕೇಟ್ ಆಕಾಂಕ್ಷಿಯಾಗಿದ್ದ ರವಿ ಗಾಣಿಗ​​ ಬೆಂಬಲಿಗರು ಕಾಂಗ್ರೆಸ್​​ ಕಚೇರಿಯಲ್ಲಿ ನಿನ್ನೆ ನಡೆಸಿದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಗಾಣಿಗ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗಾಗಲೇ 13 ಜನರನ್ನು ಬಂಧಿಸಲಾಗಿದೆ.

ನಿನ್ನೆ ರವಿಗಾಣಿಗಾಗೇ ಕಾಂಗ್ರೆಸ್​ ಎಮ್​ಎಲ್​​ಎ ಟಿಕೇಟ್​ ಕೊಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆತನ ಬೆಂಬಲಿಗರಾದ ವಿಜಯಕುಮಾರ್ ಸೇರಿದಂತೆ ಹಲವರು ಕಾಂಗ್ರೆಸ್​ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ಕೋರಿದ್ದರು. ಆದರೇ ಪ್ರತಿಭಟನೆ ಶಾಂತಿಯುತವಾಗಿ ನಡೆಸದೇ ಕಾಂಗ್ರೆಸ್​ ಕಚೇರಿಯಲ್ಲಿ ಕುರ್ಚಿ ಮುರಿದು, ಪುಸ್ತಕಗಳನ್ನು ಹರಿದು ಹಾಕಿ ದಾಂಧಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಸರ್ಕಾರಿ ಆದೇಶ ಉಲ್ಲಂಘನೆಯಲ್ಲಿ ದೊಂಬಿ ಸೇರಿದಂತೆ ಹಲವು ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ಠಾಣೆ ಪೊಲೀಸರು, ದಾಂಧಲೆ ನಡೆಸಿದ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಇದಲ್ಲದೇ ವಿಶ್ಯುವಲ್ಸ್​ ಆಧರಿಸಿ ರವಿ ಗಾಣಿಗ ಸೇರಿ ಹಲವರ ವಿರುದ್ಧವೂ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಬಿ.ಟಿ.ವಿ ನ್ಯೂಸ್​ಗೆ ಹೇಳಿದ್ದಾರೆ.

ಬಿಟಿವಿನ್ಯೂಸ್​​ ಜೊತೆ ಮಾತನಾಡಿದ ರಾಧಿಕಾ, 13 ಜನರನ್ನು ಈಗಾಗಲೇ ಬಂಧಿಸಿದ್ದೇವೆ. ಇನ್ನುಳಿದವರ ಬಗ್ಗೆ ತನಿಖೆ ನಡೆಸಿದ್ದೇವೆ. ಹಲವರಿಗಾಗಿ ಶೋಧ ನಡೆದಿದೆ. ಎಲ್ಲ ವಿಡಿಯೋ ಸಾಕ್ಷ್ಯ ನಮ್ಮ ಬಳಿ ಇದೆ. ಬಂಧಿತರ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ವಿರುದ್ಧ 188 ಸೇರಿದಂತೆ, 143,448,427 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೇ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ದೊಂಬಿ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ ಎಂದರು. ಒಟ್ಟಿನಲ್ಲಿ ಟಿಕೇಟ್​ ವಂಚಿತರಾಗಿರುವ ರವಿ ಗಾಣಿಗ್​ ಆಕ್ರೋಶ ವ್ಯಕ್ತಪಡಿಸಲು ಹೋಗಿ ಸಂಕಷ್ಟಕ್ಕಿಡಾಗಿರೋದಂತು ನಿಜ. ಇದೀಗ ರವಿ ಗಾಣಿಗಾಗಿಯೂ ಶೋಧ ನಡೆಸಿದ್ದು, ಸಧ್ಯದಲ್ಲೇ ರವಿ ಬಂಧನಕ್ಕೊಳಗಾಗಲಿದ್ದಾರೆ.