’99’ ಚಿತ್ರದ ಮೂಲಕ ಮೋಡಿಮಾಡಲು ಸಜ್ಜಾದ ಗೋಲ್ಡನ್ ಸ್ಟಾರ್..

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ’99’ ವಿಭಿನ್ನವಾದ ಪ್ರೇಮ ಕತೆಯನ್ನು ಹೊತ್ತು ಚಿತ್ರಮಂದಿರಗಳಿಗೆ ಅಪ್ಪಳಿಸಲು ಹೊಸ್ತಿಲಲ್ಲಿ ನಿಂತಿದೆ ಹಾಗೂ ಚಿತ್ರಕ್ಕೆ ರಿಲೀಸ್​ ದಿನಾಂಕ ನಿಗದಿಯಾಗಿದೆ.

 

ಇದು ತಮಿಳಿನ “96′ ಚಿತ್ರದ ರೀಮೇಕ್‌ ಆಗಿದ್ದು, ಅಲ್ಲಿನ 96 ಅನ್ನು ಇಲ್ಲಿ 99 ಮಾಡಲಾಗಿದೆ. ವಿಜಯ್‌ ಸೇತುಪತಿ ಹಾಗೂ ತ್ರಿಶಾ ನಟಿಸಿರುವ ತಮಿಳು ಚಿತ್ರ “96′ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಹೊಸ ಬಗೆಯ ಕಥೆಯೊಂದಿಗೆ ಈ ಚಿತ್ರ ಗಮನ ಸೆಳೆಯುವ ಮೂಲಕ ಪ್ರೇಕ್ಷಕರನ್ನು ರಂಜಿಸಿತ್ತು. ಸಿನಿಮಾ ಹಿಟ್‌ಲಿಸ್ಟ್‌ ಸೇರುತ್ತಿದ್ದಂತೆ ಕನ್ನಡದ ರೀಮೇಕ್‌ ರೈಟ್ಸ್‌ ಅನ್ನು ನಿರ್ಮಾಪಕ ರಾಮು ಪಡೆದಿದ್ದಾರೆ.

ಈಗ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್​ ಮಾಡುವ ನಿರ್ದೇಶಕ ಪ್ರೀತಮ್​ ಗುಬ್ಬಿ ಈವರೆಗೆ 9 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಿಮೇಕ್​ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗಣೇಶ್ ನಟನೆಯ ಉಳಿದ ಚಿತ್ರಗಳಿಗಿಂತ ’99’ ಚಿತ್ರದ ಗಣೇಶ್ ಪಾತ್ರ ತುಂಬಾ ವಿಭಿನ್ನವಾಗಿದೆ” ಎಂದಿದ್ದಾರೆ ಪ್ರೀತಮ್ ಗುಬ್ಬಿ.

ಏ. 26ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಷ್ಟರೊಳಗೆ ಟ್ರೇಲರ್ ಲಾಂಚ್ ಮಾಡಿ ಸಿನಿಮಾದ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವ ತವಕ ಚಿತ್ರತಂಡದ್ದು. ಹೌದು, ಏ. 16ರಂದು ‘99’ ಚಿತ್ರದ ಮೊದಲ ಟ್ರೇಲರ್ ಬಿಡುಗಡೆ ಆಗಲಿದೆ.

ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಗಣೇಶ್ ನಿಭಾಯಿಸುತ್ತಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್​ಗಳಿರುವುದು ವಿಶೇಷ. ಅಲ್ಲದೆ, ನಿರ್ವಪಕ ರಾಮು ಅವರ ಬ್ಯಾನರ್​ನಲ್ಲಿ ಗಣೇಶ್​ಗೆ ಇದು ಮೊದಲ ಚಿತ್ರ. ಇನ್ನು, ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದು, ನಾಯಕ-ನಾಯಕಿಯ ಬಾಲ್ಯದ ಪಾತ್ರಗಳನ್ನು ಸಮೀಕ್ಷಾ ಮತ್ತು ಹೇಮಂತ್ ನಿಭಾಯಿಸಿದ್ದಾರೆ. ಇದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ 100ನೇ ಸಿನಿಮಾ ಎಂಬ ಕಾರಣಕ್ಕೂ ‘99’ ನಿರೀಕ್ಷೆ ಮೂಡಿಸಿದೆ.