ಪಾನ್ ಕಾರ್ಡ್ ದುರ್ಬಳಕೆ- ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂಬ್ಳೆ ಪತ್ನಿ ಚೇತನಾ ಕುಂಬ್ಳೆ!

ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪೆನಿಯೊಂದರ ವಿರುದ್ಧ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪತ್ನಿ ದೂರು ನೀಡಿದ್ದಾರೆ.

ad

ಅವರ ಪಾನ್​​ಕಾರ್ಡ್ ಬಳಸಿ 32 ಲಕ್ಷ ಹಣ ಲಪಾಟಿಸಿದ್ದಾರೆ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫ್ರಾಂಕ್ ಮುಲ್ಲರ್ ಬ್ರ್ಯಾಂಡ್​’ನ ವಾಚ್ ಬಗ್ಗೆ ಆಸಕ್ತಿ ಹೊಂದಿದ್ದ ಚೇತನಾ, ಈ ಹಿಂದೆ ಯುಬಿ ಸಿಟಿಯ ‘ಜಿಮ್ಸನ್ ವಾಚ್​ ಮಳಿಗೆಗೆ ಹೋಗಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಸತ್ಯ ವಾಗೀಶ್ವರನ್ ಎಂಬಾತನ ಪರಿಚಯವಾಗಿತ್ತು. ಈ ವೇಳೆ ಸತ್ಯ ವಾಗೀಶ್ವರ್ ಬಳಿ ವಾಚ್​ ಬಗ್ಗೆ ಕೇಳಿದಾಗ, ‘ತಮ್ಮ ಮಳಿಗೆಯಲ್ಲಿ ನೀವು ಕೇಳಿರೋ ಬ್ರ್ಯಾಂಡ್​ನ ವಾಚ್ ಇಲ್ಲ. ಬೇಕಿದ್ದರೆ ಮುಂಬೈನ ‘ದಿ ಟೈಮ್‌ ಕೀಪರ್ಸ್ ವಾಚ್ ಬಾಟಿಕ್’ ಮಳಿಗೆಯಲ್ಲಿ ಸಿಗುತ್ತೆ. ಬೇಕೆಂದರೆ ತರಿಸಿಕೊಡುತ್ತೇನೆ’ ಎಂದು ಹೇಳಿದ್ದರಂತೆ. ಇದಕ್ಕೆ ಚೇತನಾ ಒಪ್ಪಿದ್ದರು. ಬಳಿಕ ಕೆಲ ದಿನಗಳಲ್ಲೇ ವಾಗೀಶ್ವರನ್ ವಾಚ್ ತರಿಸಿದ್ದ.

ವಾಚ್ ಇಷ್ಟಪಟ್ಟಿದ್ದ ಚೇತನಾ, 8 ಲಕ್ಷ ಚೆಕ್ ಕೊಟ್ಟು ವಾಚ್ ಖರೀದಿ ಮಾಡಿದ್ದರು. ಈ ವೇಳೆ ಪಾನ್‌ ಕಾರ್ಡ್‌ ಮಾಹಿತಿ ನೀಡಿದ್ದರು. ಇತ್ತೀಚೆಗೆ ತೆರಿಗೆ ಮಾಹಿತಿಯನ್ನು ನೋಡಿದಾಗ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ. ತೆರಿಗೆ ಇಲಾಖೆ ನೀಡಿದ್ದ ಫಾರಂ ನಂ. 26ಎಎಸ್ ಪರಿಶೀಲನೆ ಮಾಡಿದಾಗ ಚೇತನಾ ಅವರಿಗೆ ಶಾಕ್ ಕಾದಿತ್ತು. ₹32.96 ಲಕ್ಷ ಮೌಲ್ಯದ ಎರಡು ವಾಚ್‌ಗಳನ್ನು ಖರೀದಿಸಿರೋದಾಗಿ ಫಾರಂನಲ್ಲಿ ನಮೂದಿಸಲಾಗಿದೆ. ಅದಕ್ಕೆ ಮುಂಬೈನ ಕಂಪೆನಿ ₹32,956 ಟಿಸಿಎಸ್ (ತೆರಿಗೆ ಸಂಗ್ರಹ) ತೋರಿಸಲಾಗಿದೆ. ನಂಬಿಕೆ ಇಟ್ಟು ಪಾನ್‌ಕಾರ್ಡ್ ಮಾಹಿತಿ ಕೊಟ್ಟಿದ್ದ ಚೇತನಾ ಇದೀಗ ಮೋಸ ಹೋಗಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (420) ಪ್ರಕರಣ ದಾಖಲಿಸಿ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.