ಲವ್ ಗುರುವಾದ ದೇವೇಗೌಡ !! ಜಿಟಿ ಜಿಟಿ ಮಳೆಗೆ ಜಿಟಿಡಿ ಬೆಚ್ಚನೆ ಲವ್ ಪಾಠ !

 

ಪ್ರೀತಿ, ವಿಶ್ವಾಸ ಬದುಕನ್ನು ಅರಿತವನನ್ನು ಮದುವೆಯಾಗಿ. ಲವ್ ಗೆ ಬಿದ್ದು ಬದುಕನ್ನೇ ಕಳೆದುಕೊಳ್ಳಬೇಡಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.ಕಾಲೇಜು ಕಲಾ ಮಂಟಪದಲ್ಲಿಂದು ಕಾಲೇಜು ಶಿಕ್ಷಣ ಇಲಾಖೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮೈಸೂರು ಸಾಂಸ್ಕೃತಿಕ,ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕೆಂದು ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಸಂಸ್ಥೆಯನ್ನು ವಿರೋಧದ ನಡುವೆಯೂ ಆರಂಭಿಸಿದರು. ಸರ್ವಪಲ್ಲಿ ರಾಧಾಕೃಷ್ಣರನ್ನು ಸ್ಮರಿಸಿದಂತೆ ಸಾವಿತ್ರಿಬಾಯಿ ಫುಲೆಯವರನ್ನೂ ಸ್ಮರಿಸುವ ಕೆಲಸವಾಗಬೇಕು ಎಂದರು.

ಮಹಾತ್ಮಾಗಾಂಧಿಯವರು ಹಳ್ಳಿಗಳಿಂದಲೇ ದೇಶದ ಅಭಿವೃದ್ಧಿ ಎಂದಿದ್ದರು. ಹಳ್ಳಿಗೆ ಒಂದು ಶಾಲೆ, ಗ್ರಾಮಪಂಚಾಯತ್, ರೈತರಿಗಾಗಿ ಸಹಕಾರಿ ಸಂಘವಿದ್ದು, ಅವು ಚೆನ್ನಾಗಿ ನಡೆದರೆ ರಾಮರಾಜ್ಯವಾಗಲಿದೆ ಎಂಬ ಕನಸು ಕಂಡಿದ್ದರು. ಸಮಾಜದಲ್ಲಿ ಶಿಕ್ಷಕ, ವೈದ್ಯ, ರೈತನ ಅವಶ್ಯಕತೆಯಿದೆ. ಶಿಕ್ಷಣವನ್ನು ಕಲಿಯಲೇಬೇಕೆಂಬ ಗುರಿಯನ್ನಿಟ್ಟುಕೊಂಡರೆ ಸಾಧನೆ ಸುಲಭ. ಮೊದಲೆಲ್ಲ ಹೆಣ್ಣುಮಕ್ಕಳು ಹೈಸ್ಕೂಲ್ ಮೆಟ್ಟಿಲು ಹತ್ತುತ್ತಿರರಿಲ್ಲ. ಈಗ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ನಿಮಗೆ ನಿಮ್ಮ ಕನಸು, ನೀವು ಸಮಾಜಕ್ಕೆ ಕೊಡುಗೆ, ನಿಮ್ಮದೇ ಆದ ಜವಾಬ್ದಾರಿಗಳು ಸಾಕಷ್ಟಿವೆ. ದೇಶದ ಪ್ರಧಾನಿಯಾದವರೂ ಕೂಡ ತಮಗೆ ಮೊದಲು ಶಿಕ್ಷಣ ನೀಡಿದ ಗುರುವನ್ನು ಸ್ಮರಿಸುತ್ತಾರೆ. ಹೆಣ್ಣೊಬ್ಬಳು ಕಲಿತರೇ ಇಡೀ ಮನೆಯ ಶಿಕ್ಷಣ ಪಡೆದಂತೆ ಎಂದರು. ಸೋಲೇ ಗೆಲುವಿನ ಮೆಟ್ಟಿಲು ಎಂದರಲ್ಲದೇ ತನ್ನ ರಾಜಕೀಯ ಜೀವನದಲ್ಲಿ ಸ್ಪರ್ಧಿಸಿ ಸೋತು, ಗೆದ್ದ ಉದಾಹರಣೆಯನ್ನು ನೀಡಿದರು.

ಅಣ್ಣಾವ್ರ ಬಂಗಾರದ ಮನುಷ್ಯ ಚಲನಚಿತ್ರವನ್ನು ನೋಡಿ ಬರಡು ಭೂಮಿಯಲ್ಲಿ ಆಲೂಗಡ್ಡೆ ಬೆಳೆದು ಸಾರ್ಥಕತೆ ಕಂಡ ಅನುಭವವನ್ನು ಹಂಚಿಕೊಂಡರು. ಮೊದಲು ತಂದೆ ತೋರಿಸಿದ ಹುಡುಗನನ್ನು ಮದುವೆ ಮಾಡಿಕೊಳ್ಳುತ್ತಿದ್ದರು. ಈಗ ಹುಡುಗ ಹುಡುಗಿಯರಲ್ಲಿಯೇ ಇಂಟರ್ ವ್ಯೂ ನಡೆಯತ್ತೆ. ತಂದೆ ತಾಯಿ ಮುದ್ದಿನಿಂದ ಸಾಕಿರುತ್ತಾರೆ. ಅವರ ಕಣ್ಣಲ್ಲಿ ನೀರು ತರಿಸಬೇಡಿ. ಸ್ನೇಹ, ಪ್ರೀತಿ, ವಿಶ್ವಾಸ ಇರಬೇಕು ನಿಜ. ಆದರೆ ಪ್ರೀತಿ, ವಿಶ್ವಾಸ, ಬದುಕು ಎಂದರೇನೆಂದು ತಿಳಿದವನನ್ನು ವಿವಾಹವಾಗಿ. ಆಗ ಬದುಕು ಸುಂದರವಾಗಿರಲಿದೆ. ಡೈವೋರ್ಸ್ ಹೆಚ್ಚುತ್ತಿದೆ. ಲವ್ ಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ. ಗುರಿಯಿಟ್ಟು ಸಾಧನೆ ಮಾಡಿದಲ್ಲಿ ಏನೇ ಬಂದರೂ ಎದುರಿಸುವ ಶಕ್ತಿ ನಿಮಗೆ ಬರಲಿದೆ. ಸೋಲನ್ನು ಹತಾಶೆಯಿಂದ ಸ್ವೀಕರಿಸದೇ ನಗುನಗುತ್ತಲೇ ಸ್ವೀಕರಿಸಿ ಯಶಸ್ಸನ್ನು ಕಾಣಿರಿ ಎಂದರು.ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಶ್ರೀಷಕುಮಾರ್ ಎಚ್.ವೈ ಮತ್ತಿತರರು ಉಪಸ್ಥಿತರಿದ್ದರು.