ಬಾರದ ಲೋಕಕ್ಕೆ ಹೋದ ಮಗಳ ನೆನಪಿಗಾಗಿ ಬಡ ವಿದ್ಯಾರ್ಥಿನಿಯರ ಶೈಕ್ಷಣಿಕ ವೆಚ್ಚ ಭರಿಸುತ್ತಿರುವ ಕಲಬುರಗಿಯ ಈ ಮಾದರಿ ವ್ಯಕ್ತಿ

ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ…. ಹೆಣ್ಣುಮಕ್ಕಳ ಶಿಕ್ಷಣಗೊಸ್ಕರ ಸರ್ಕಾರಗಳು ಹತ್ತಾರು ಯೋಜನೆಗಳು ಜಾರಿಗೆ ತರುತ್ತಿವೆ. ಆದರು ಅವು ಸಮರ್ಪಕವಾಗಿ ತಲುಪುತ್ತಿಲ್ಲ ಅನ್ನೊ ಕೂಗು ಗ್ರಾಮೀಣ ಭಾಗದಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಅದಕ್ಕಾಗಿ ಅದೆಷ್ಟೊ ಬಡ ಮತ್ತು ಪ್ರತಿಭಾನ್ವಿತ ಹೆಣ್ಮಕ್ಕಳು ಶಾಲೆಯನ್ನ ತೊರೆದು ಹೆತ್ತವ್ರ ಜೊತೆ ದುಡಿಯೋಕೆ ಹೋಗ್ತಾರೆ. ಆದರೆ ಕಲಬುರಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಬ್ಬ ಕ್ಲಕ್೯ ಇದಾರೆ. ಅವರು ತಮಗೆ ಬರುವ ಆದಾಯದಲ್ಲಿ 45 ಕ್ಕೂ ಅಧಿಕ ವಿದ್ಯಾರ್ಥಿನಿಯರ ಕಾಲೇಜು ಶುಲ್ಕ, ಪರೀಕ್ಷಾ ಶುಲ್ಕ ಭರಿಸುವುದರ ಜೊತೆಗೆ ಅವರಿಗೆ ಕಲಿಯಲು ಬೇಕಾಗುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನ ತಮ್ಮ ಸ್ವಂತ ಖರ್ಚಿನಲ್ಲಿಯೇ ಒದಗಿಸಿ ಮಾನವೀಯತೆ ಮೆರೆಯುವುದರ ಜೊತೆಗೆ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೌದು‌ ಈ‌‌ ದೃಶ್ಯಗಳಲ್ಲಿ ಕಾಣ್ತಾಯಿರೋ ಇವರ ಹೆಸರು ಬಸವರಾಜ್ ಮಂಟಗಿ.

 

ಮೂಲತಃ ಆಳಂದ‌ನವರಾದ ಬಸವರಾಜ್, ಕಲಬುರಗಿ ನಗರದ ಮಕ್ತಂಪುರ ಬಡಾವಣೆಯ ಎಮ್ ಪಿ ಎಚ್ ಎಸ್ ಪಿಯು ಕಾಲೇಜಿನಲ್ಲಿ ದ್ವೀತಿಯ ದರ್ಜೆ ಸಹಾಯಕನಾಗಿ ಕೆಲಸ‌ ಮಾಡುತ್ತಿದ್ದಾರೆ.. ಇವರಿಗೆ ಇಬ್ಬರು ಹೆಣ್ಣಮಕ್ಕಳು… ಮೊದಲನೆ ಮಗಳು ಧಾನೇಶ್ವರಿ ಎಸ್‌ಬಿಆರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವಾಗ ಅನಾರೋಗ್ಯರಿಂದ ಸಾವನ್ನಪ್ಪಿದ್ದಳು. ಮಗಳಿಗೆ ಬಸವರಾಜ್, ಪ್ರತಿವರ್ಷ ಲಕ್ಷಾಂತರ ರೂಪಾಯಿ ಕಾಲೇಜು ಶುಲ್ಕ ಭರಿಸುತ್ತಿದ್ದರು. ಆದರೆ ಮಗಳೆ ತನ್ನನ್ನ ಬಿಟ್ಟು ಹೋದಮೇಲೆ ಆ ಹಣ ಏನು ಮಾಡಲಿ ಅಂತಾ, ಮಗಳ ನೆನಪಿಗಾಗಿ ಸಧ್ಯ ತಾವು ಕೆಲಸ ಮಾಡುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಶೈಕ್ಷಣಿಕ ವೆಚ್ಚಕ್ಕೆ ಮೀಸಲಿಡಲು ನಿರ್ಧರಿಸಿಯೇ ಬಿಟ್ಟರು.‌ಅದಕ್ಕಾಗಿ 15 ದಿನಗಳ ಹಿಂದಷ್ಟೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರ ಕಾಲೇಜು ಶುಲ್ಕ, ಅವರ ಸಮಸವಸ್ತ್ರ ಖರ್ಚು, ಟೈ, ಬೆಲ್ಟ್, ಪುಸ್ತಕ ಸೇರಿದಂತೆ ಇನ್ನಿತರ ಖರ್ಚಿಗಾಗಿ ಕಾಲೇಜಿನ ಪ್ರೀನ್ಸಿಪಾಲ್‌ರಾದ ಶಿವಶರಣಪ್ಪ ಕೈಯಲ್ಲಿ ಹದಿನೈದು ಸಾವಿರ ರೂಪಾಯಿ ಹಣವನ್ನ ಮುಂಗಡವಾಗಿ ನೀಡಿದ್ದಾರೆ.. ಈ ವರ್ಷದಿಂದ ಕಾಲೇಜಿಗೆ ಅಡಮಿಷನ್ ಪಡೆದ 45 ಕ್ಕೂ ಅಧಿಕ ವಿದ್ಯಾರ್ಥಿನಿಯರ ಶೈಕ್ಷಣಿಕ ವೆಚ್ಚವನ್ನ ಸಂಪೂರ್ಣವಾಗಿ ತಾವೇ ವ್ಯಯಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಒಂದು ಕೆಲಸ ತಾನು ಸೇವೆಯಲ್ಲಿರುವತನಕ‌ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.


ಸಧ್ಯ ಇವರ ಈ ಒಂದು ಮಾನವೀಯತೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ಕಾಲೇಜು ಆಡಳಿತ ವರ್ಗವಲ್ಲದೇ ಕೇಂದ್ರದ ಮಾಜಿ ಸಚಿವರಾದ ಹಾಗೂ ಕಾಂಗ್ರೆಸ್ ಮುಖಂಡ ಶಶಿ ತರೂರ್ ತಮ್ಮ ಟ್ಬೀಟರ್ ಖಾತೆಯಲ್ಲಿ ಬಸವರಾಜ್‌ ಮಂಟಗಿ ಬಗ್ಗೆ ಪ್ರಶಂಸೆಯ‌ ನುಡಿಗಳನ್ನಾಡಿದ್ದಾರೆ….