ಈಗ ಹಣ ಕೊಡಿ ಆಮೇಲೆ ವೋಟು ನೀಡಿ ! ಇದೊಂದು ವಿಭಿನ್ನ ಮನವಿ. .  

ಚುನಾವಣೆ ಅಂದ್ರೆ ಅಲ್ಲಿ ಹಣದ ಹೊಳೆ ಹರಿಯುತ್ತೆ. ಆರ್ಥಿಕವಾಗಿ ಬಲಾಢ್ಯ ಇರೋ ಅಭ್ಯರ್ಥಿಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ಯ. ಒಂದು ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಬೇಕಾದ್ರೆ ಅದಕ್ಕೆ ಕೋಟಿ ಕೋಟಿ ಖರ್ಚು ಮಾಡಬೇಕು. ಈ ನಡುವೆ ಶ್ರೀಮಂತ ವ್ಯಾಪಾರಿಗಳ ವಿರುದ್ಧ ಜನಸಾಮಾನ್ಯರ ಸಮರ ಎಂದು ಚುನಾವಣಾ ಅಖಾಡಕ್ಕೆ ಇಳಿದಿರೋ ಈ  ಪಕ್ಷದ ಅಭ್ಯರ್ಥಿಗಳು ಓಟ್ ಕೊಡಿ ಜೊತೆಗೆ ನೋಟೂ ಕೊಡಿ ಎಂದು ಚುನಾವಣಾ ವೆಚ್ಚಕ್ಕೆ ಜನಸಾಮಾನ್ಯರ ಮೊರೆ ಹೋಗಿದ್ದಾರೆ.

ad


 

ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಸಿರಿವಂತ ಅಭ್ಯರ್ಥಿಗೆ ಮಣೆ ಹಾಕೋದು ಸಾಮಾನ್ಯ. ಇನ್ನು ಚುನಾವಣೆ ಅಂದ್ರೆ ಅಲ್ಲಿ ಓಟು ಪಟ್ಕೋಬೇಕಾದರೆ ಹಣ ಹೆಂಡ ಸೀರೆ ಹಂಚಿಕೆಯೂ ಸಾಮಾನ್ಯ. ಇಂದು ಚುನಾವಣೆ ಸ್ಪರ್ಧೆ ಹಾಗೂ ಗೆಲುವು ಕೇವಲ ಹಣ ಉಳ್ಳ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಮನೋಭಾವ ಜನ್ರಲ್ಲಿದೆ. ಓಟಿಗಾಗಿ ನೋಟು ಹಂಚೋ ರಾಜಕಾರಣಿಗಳ ನಡುವೆ ಓಟಿನ ಜೊತೆಗೆ ಚುನಾವಣಾ ಖರ್ಚಿಗೆ ನೋಟು ಕೊಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಿಪಿಐಎಂ ಪಕ್ಷದ ಇಬ್ಬರು ಅಭ್ಯರ್ಥಿಗಳು ಮತದಾರರ ಮೊರೆ ಹೋಗಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಸುನಿಲ್ ಕುಮಾರ್ ಬಜಾಲ್ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಚುನಾವಣಾ ಖರ್ಚು ವೆಚ್ಚಕ್ಕೆ ದೇಣಿಗೆ ನೀಡುವಂತೆ ಜನಸಾಮಾನ್ಯರಲ್ಲಿ ಕೇಳಿಕೊಂಡಿದ್ದಾರೆ. ನಾವು ಜನರ ಪರವಾಗಿ ಹೋರಾಟ ನಡೆಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಹಣ ಬಲ ಹೊಂದಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಲು ಚುನಾವಣಾ ಖರ್ಚು ವೆಚ್ಚಕ್ಕೆ ಜನಸಾಮಾನ್ಯರೇ ಕೈಲಾದ ದೇಣಿಗೆ ನೀಡಬೇಕೆಂದು ಇವರು ಮನವಿ ಮಾಡಿಕೊಂಡಿದ್ದಾರೆ.

ಈ ಇಬ್ಬರು ಕಮ್ಯುನಿಷ್ಟ್ ಅಭ್ಯರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಡಿಯೋ ಮೂಲಕವೂ ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ದೇಣಿಗೆ ನೀಡೂ ಕುರಿತಾದ ವಿಡಿಯೋ ಹಾಗೂ ಮನವಿ ಪತ್ರದಲ್ಲಿ ಅಕೌಂಟ್ ವಿವರ ಕೂಡಾ ಸಲ್ಲಿಸಿದ್ದಾರೆ. ಶ್ರೀಮಂತರ ವಿರುದ್ಧ ಜನಸಾಮಾನ್ಯರ ಸಮರಕ್ಕೆ ಸಾಥ್ ಕೊಡಬೇಕೆಂಬ ಒಕ್ಕಣೆಯನ್ನೂ ಇವರ ಮನವಿಯಲ್ಲಿ ಸೇರಿಸಲಾಗಿದೆ. ಅದ್ರಲ್ಲೂ ಬಂಡವಾಳಶಾಹಿಗಳಿಂದ ಬೃಹತ್ ಶ್ರೀಮಂತ ಕುಳಗಳಿಂದ ಜೊತೆಗೆ ಯಾವುದೇ ಮಾಫಿಯಾ ಕುಳಗಳಿಂದ ಚುನಾವಣೆಗೆ ಹಣವನ್ನು ದೇಣಿಗೆಯಾಗಿ ನಾವು ಸ್ವೀಕಾರ ಮಾಡುವುದಿಲ್ಲ ಅನ್ತಿದ್ದಾರೆ ಇವರು. ಬದಲಾಗಿ ಜನಸಾಮಾನ್ಯರು ಕೊಡೋ ಸಣ್ಣ ಮೊತ್ತವನ್ನು ಸ್ವೀಕಾರ ಮಾಡ್ತೀವಿ ಎಂಬುವುದು ಇವರ ನಿಲುವು. ಇಬ್ಬರೂ ಅಭ್ಯರ್ಥಿಗಳ ಮನವಿಗೆ ಜನಸಾಮಾನ್ಯರೂ ಸ್ಪಂದಿಸಿದ್ದು ಒಂದಿಷ್ಟು ಜನರು ದೇಣಿಗೆಯನ್ನೂ ನೀಡಿದ್ದಾರಂತೆ.

 

ಒಟ್ಟಿನಲ್ಲಿ ಮತಕ್ಕಾಗಿ ರಾಜಕಾರಣಿಗಳು ಹಣ ಹೆಂಡ ಹಂಚೋ ಇಂದಿನ ದಿನದಲ್ಲಿ ಜನಸಾಮಾನ್ಯರ ಬಳಿಯೇ ಓಟಿನ ಜೊತೆಗೆ ನೋಟನ್ನು ಕೇಳುವ ಅಭ್ಯರ್ಥಿಗಳು ಅಪರೂಪ. ಆದ್ರೆ ಜನ ಇದಕ್ಕೆ ಹೇಗೆ ಸ್ಪಂದಿಸ್ತಾರೆ ಎಂಬುವುದು ಅಷ್ಟೇ ಪ್ರಮುಖವಾಗುತ್ತೆ. ಅದೇನೇ ಇದ್ದರೂ ಚುನಾವಣೆಯಲ್ಲಿ ಹಣ ಹೆಂಡಕ್ಕೆ ಜನಸಾಮಾನ್ಯರು ಬಲಿಯಾಗುವುದು ನಿಲ್ಲುವ ವರೆಗೂ ಹಣ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸೋದು ಮಾತ್ರ ತಪ್ಪೋದಿಲ್ಲ.