ಬಿಜೆಪಿಯ ರಾಮದಾಸ್ ವಿರುದ್ಧವೇ ಬಂಡಾಯವೆದ್ರಾ ಗೋ ಮಧುಸೂದನ್​? ಅವರ ಆಕ್ರೋಶಕ್ಕೆ ಕಾರಣ ಏನು?

ಮಾಜಿ ಸಚಿವ ರಾಮದಾಸ್​ ವಿರುದ್ಧ ಸ್ವಪಕ್ಷೀಯರೇ ಈಗ ಬಂಡಾಯ ಎದ್ದಿದ್ದಾರೆ. ಮೇಲ್ಮನೆ ಮಾಜಿ ಸದಸ್ಯ ಗೋ. ಮಧುಸೂದನ್ ಸುದ್ದಿಗೋಷ್ಠಿ ನಡೆಸಿ ರಾಮದಾಸ್​ಗೆ ಟಿಕೆಟ್​ ಕೊಡಬೇಡಿ ಅಂತಾ ಬಹಿರಂಗವಾಗಿಯೇ ಪಕ್ಷದ ನಾಯಕರಿಗೆ ಪತ್ರ ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಪ್ರೇಮಕುಮಾರಿ ನ್ಯಾಯ ಬೇಡಿಕೊಂಡು ಆರೆಸ್ಸೆಸ್​ ಕಚೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಪಕ್ಷದಲ್ಲೇ ಟಿಕೆಟ್​ ವಿರೋಧ ಬಂದಿದೆ. ಹಾಗಾದರೆ ರಾಮದಾಸ್​​ಗೆ ಯಾಕೆ ಟಿಕೆಟ್ ಕೊಡಬಾರದು ಅಂತಾ ಒತ್ತಾಯಿಸಿದರು ಗೊತ್ತಾ…ಈ ಸ್ಟೋರಿ ನೋಡಿ…

ಮಾಜಿ ಸಚಿವ ರಾಮದಾಸ್ ಒಬ್ಬ ಕಳಂಕಿತ ವ್ಯಕ್ತಿ. ಕಳೆದ ಸಾರ್ವತ್ರಿಕ ಚುನಾವಣೆ ಬಳಿಕ ಪ್ರೇಮಕುಮಾರಿ ಜೊತೆಗಿನ ಸಂಬಂಧ ಬಯಲಿದೆ ಬಂದಿತ್ತು. ಈ ಪ್ರಕರಣದಿಂದ ಪಕ್ಷ ಹಾಗೂ ಪಕ್ಷದ ಮುಖಂಡರು ತೀವ್ರ ಮುಜುಗರ ಅನುಭವಿಸಿದ್ದಾರೆ. ಇನ್ನು ಇದೇ ಕಾರಣಕ್ಕೆ ರಾಮದಾಸ್ ಗೆ ಇಡೀ ಕೆ.ಆರ್. ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಂಪೂರ್ಣ ವಿರೋಧವಿದೆ. ಸಾಮಾನ್ಯ ಕಾರ್ಯಕರ್ತ ನಿಂತರೂ ಬಿಜೆಪಿ ಗೆಲ್ಲುವ ಏಕೈಕ ಕ್ಷೇತ್ರವೆಂದರೆ ಕೃಷ್ಣರಾಜ ಮಾತ್ರ. ಕಳಂಕಿತ ವ್ಯಕ್ತಿಗೆ ಟಿಕೆಟ್ ನೀಡಿ ಕ್ಷೇತ್ರ ಕಳೆದುಕೊಳ್ಳಬೇಡಿ. ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ರಾಮದಾಸ್ ರ ಯಾವ ಒತ್ತಡಕ್ಕೂ ಮಣಿಯದೆ ಟಿಕೆಟ್ ನಿರಾಕರಿಸಬೇಕು ಎಂದು ಮಧುಸೂದನ್​ ಆಗ್ರಹಿಸಿದರು.

ad


ನಾನು ಸ್ವಭಾವತ: ಹೋರಾಟಗಾರ. ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಜೈಲು‌ ಸೇರಿದ್ದೆ. ಮೈಸೂರಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ನಾನು ಈವತ್ತು‌ ನನ್ನೊಳಗೆ ಪುಟಿದೆದ್ದಿರುವ ಭಾವೋದ್ವೇಗದೊಂದಿಗೆ ನಾನು ನಿಮ್ಮ ಮುಂದೆ ಬಂದಿದ್ದೇನೆ. ಕೆ.ಆರ್. ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಕಳೆದ ಬಾರಿ ಕ್ಷೇತ್ರ ಕಳೆದುಕೊಂಡದ್ದು ನಮ್ಮದೇ ತಪ್ಪಿನಿಂದ. ಪ್ರೇಮಕುಮಾರಿ ತಮ್ಮ ಮೇಲಾಗಿರುವ ದೌರ್ಜನ್ಯದ ಬಗ್ಗೆ ಹೋರಾಟ ಮಾಡುತ್ತಿದ್ದು, ಈಗ ಜನತಾ‌ ನ್ಯಾಯಾಲಯದ ಮುಂದೆ ಬಂದಿದ್ದಾರೆ.

ರಾಮದಾಸ್ ಮೊದಲ ಬಾರಿ ಸ್ಪರ್ಧೆ ಮಾಡಿದ್ದಾಗ ನಾನು ಕೂಡ ಅವರ ಪರವಾಗಿ ಕೆಲಸ ಮಾಡಿದ್ದೆ. ಹಾಗಾಗಿ ನಮಗೆ ಪಾಪ ಪ್ರಜ್ಞೆ ನನಗೆ ಕಾಡುತ್ತಿದೆ. ಇಂತಹ ಕಾಮಕ, ಧೂರ್ತ, ಭೂ ‌ಬಕಾಸುರ ಅಂತಾ ಖಂಡಿತಾ ನಮಗೆ ಗೊತ್ತಿರಲಿಲ್ಲ. ನೈತಿಕತೆಗೆ ಘಾಸಿಯಾಗಿದೆ. ಒಂದೊಮ್ಮೆ ಇಂತಹವರಿಗೆ ಟಿಕೆಟ್ ನೀಡಿದ್ದೇ ಆದರೆ ಕೇರಳದ‌ ವೇಣುಗೋಪಾಲ್, ಕಾಂಗ್ರೆಸ್ ಮೇಟಿ ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇರಲ್ಲ ಎಂದು ಹೇಳೀದರು.

ರಾಮದಾಸ್​ ವಿರುದ್ಧ ಈಗಾಗಲೇ ಪ್ರೇಮಕುಮಾರಿ ಚುನಾವಣ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ನಿನ್ನೆಯಷ್ಟೇ ಆರೆಸ್ಸೆಸ್​ ಕಚೇರಿಗೂ ತೆರಳಿ ಮನವಿ ಕೊಟ್ಟು ಬಂದಿದ್ದಾರೆ. ಇವೆಲ್ಲವೂ ಮಾಜಿ ಸಚಿವ ರಾಮದಾಸ್​ಗೆ ಬಿಜೆಪಿ ಟಿಕೆಟ್​ ತರಲು ಕಂಟಕಪ್ರಾಯವಾಗಿದೆ.

ಒಟ್ಟಾರೆ ತಾನು ನರೇಂದ್ರ ಮೋದಿ ಶಿಷ್ಯ ಅಂತಾ ಬೀಗುತ್ತಿದ್ದ ರಾಮದಾಸ್​ಗೆ ಈಗ ಅನೇಕ ಸವಾಲುಗಳು ಎದುರಾಗಿವೆ. ಪಕ್ಷದ ಹೊರಗೆ ಪ್ರೇಮಕುಮಾರಿ, ಪಕ್ಷದೊಳಗೆ ಮಧುಸೂದನ್​ ಹೋರಾಟದಿಂದ ರಾಮದಾಸ್​ಗೆ ನಡುಕ ಹುಟ್ಟಿರುವುದಂತು ಸತ್ಯ. ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

ವರದಿ: ರಾಘವೇಂದ್ರ ಬಿಟಿವಿ ಮೈಸೂರು