ಥ್ರಿಲ್ಲಿಂಗ್​ ವಿಡಿಯೋ ಮಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ! ಇದು ಟಿಕ್​ಟಾಕ್​ ತಂದ ಆಪತ್ತಿನ ಕತೆ!!

ಇತ್ತೀಚಿಗೆ  ಟಿಕ್​ಟಾಕ್​ ಅನ್ನೋ ಪೆಡಂಭೂತದ ಹಾವಳಿ ಜೋರಾಗಿದೆ.  ಎಲ್ಲಾ ವಯೋಮಾನದವರು ಈ ಟಿಕ್​ಟಾಕ್​ ದಾಸರಾಗುತ್ತಿದ್ದು, ಕೆಲವರಂತೂ  ಟಿಕ್​ಟಾಕ್​ ಮೋಡಿಯಲ್ಲಿ ಆತ್ಮಹತ್ಯೆಗೂ ಶರಣಾಗಿದ್ದಾರೆ. ಆದರೆ ಇಲ್ಲೊಬ್ಬ ಮಾತ್ರ ಹೆಚ್ಚು ಲೈಕ್ಸ್​ ಪಡೆಯಲು ಟಿಕ್​ಟಾಕ್​ನಲ್ಲಿ ಸಾಹಸ ಮಾಡಲು ಹೋಗಿ ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ad

ಹೌದು ಸಾಹಸಮಯ ಟಿಕ್​ ಟಾಕ್​ ವಿಡಿಯೋ ಮಾಡಲು ಹೋದ  ತುಮಕೂರಿನ ಚಿಕ್ಕನಾಯಕನಹಳ್ಳಿ ಕುಮಾರ್ ಹೀಗೆ ಗಾಯಗೊಂಡ ದುರ್ದೈವಿ. ಗೆಳೆಯನ ಸಹಾಯದಿಂದ ಹ್ಯಾಂಡ್​ ಜಂಪ್​ ಮಾಡಲು ಹೋದ ಕುಮಾರ್, ನೆಲಕ್ಕೆ ಬಿದ್ದಿದ್ದು, ಬೀಳುವಾಗ ಆತನ ಕತ್ತು ದೇಹದಡಿ ಸಿಲುಕಿಕೊಂಡಿದೆ. ಇದರಿಂದ ಕತ್ತಿನ ಮೂಳೆ  ಹಾಗೂ ಸ್ಪೈನಲ್​ ಕಾರ್ಡ್​​ ಪುಡಿ ಪುಡಿಯಾಗಿದ್ದು, ಈಗ ಕುಮಾರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಕುಮಾರ್ ಬಡ ಕುಟುಂಬದಿಂದ ಬಂದವನಾಗಿದ್ದು,  ರಸಮಂಜರಿ ಕಾರ್ಯಕ್ರಮಗಳ ಮೂಲಕ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಅದರಿಂದಲೇ ಅವರ ಜೀವನ ಸಾಗಬೇಕಿತ್ತು. ಆದ್ರೆ, ಟಿಕ್​ಟಾಕ್​ನಲ್ಲಿ ಸ್ಟಾರ್ ಆಗಿ ಗೆಳೆಯರ ನಡುವೆ ಹೀರೋ ಆಗಬೇಕು ಅಂತಾ ಹೋದ ಕುಮಾರ್, ಸದ್ಯ ಸ್ಪೈನಲ್ ಕಾರ್ಡ್ ಮುರಿದುಕೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಇಂತ ಘಟನೆಗಳು ದಿನನಿತ್ಯ ಹೆಚ್ಚುತ್ತಲೇ ಇದ್ದು, ಟಿಕ್​ ಟಾಕ್​, ಸಾಮಾಜಿಕ ಸ್ವಾಸ್ಥ್ಯ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಟಿಕ್​ಟಾಕ್​ ಬ್ಯಾನ್​ ಆಗಬೇಕೆಂಬ ಒತ್ತಡವೂ ಕೇಳಿಬರುತ್ತಿದೆ.