ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಗೋಲಿಬಾರ್ ಉಡುಗೊರೆ- ಸ್ಥಳದಲ್ಲೇ ಇಬ್ಬರು ರೈತರ ಸಾವು- ಉದ್ವಿಘ್ನಗೊಂಡ ತೂತುಕುಡಿ!

 

ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿಯಂತ್ರಿಸಲು ಪೊಲೀಸರ ನಡೆಸಿದ ಗೋಲಿಬಾರ್​ನಲ್ಲಿ ಇಬ್ಬರು ರೈತರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಮಿಳುನಾಡಿದ ತುತುಕುಡಿಯಲ್ಲಿ ನಡೆದಿದೆ. ಸರ್ಲೈಟ್ ಎಂಬ ಕಂಪನಿ ವಿರುದ್ಧ ಸ್ಥಳೀಯ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ನಿಯಂತ್ರಿಸಲು ವಿಫಲರಾದ ಪೊಲೀಸರು ಗೋಲಿಬಾರ್ ನಡೆಸುತ್ತಿದ್ದು, ಇಬ್ಬರು ರೈತರು ಬಲಿಯಾಗಿದ್ದಾರೆ.

 

ಅಂದಾಜು 100 ದಿನಗಳಿಂದ 5 ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಜಿಲ್ಲಾಡಳಿತ ಅಥವಾ ಕಂಪನಿ ಮಾಲೀಕರು ಸ್ಪಂದಿಸುವ ಸೌಜನ್ಯ ತೋರಿರಲಿಲ್ಲ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಕೂಡ ನಡೆದಿತ್ತು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಪೊಲೀಸರ ಗೋಲಿಬಾರ್​ಗೆ ಇಬ್ಬರು ಬಲಿಯಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಿದ್ದು, ಸರ್​ಲೈಟ್​​ ಕಂಪನಿಯ ಗಾಡಿಗಳಿಗೆ ಬೆಂಕಿ ಹಚ್ಚಿ ರೈತರು ಹಾಗೂ ಸ್ಥಳೀಯರು ಆಕ್ರೋಶ ಮೆರೆದಿದ್ದಾರೆ. ಇನ್ನು ಪೊಲೀಸರ ಮೇಲೆ ಕಲ್ಲುತೂರಾಟ ಕೂಡ ನಡೆದಿದೆ. ಹಲವು ಪೊಲೀಸ್ ವಾಹನಗಳು ಧ್ವಂಸವಾಗಿದ್ದು, ತುತುಕುಡಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಗಲಭೆ ವೇಳೆ ಮಾಧ್ಯಮದವರ ಮೇಲೂ ದೌರ್ಜನ್ಯಗಳು ನಡೆದಿದ್ದು, ಕ್ಯಾಮರಾಗಳು ಜಖಂಗೊಂಡಿವೆ.