ಪ್ರೇಮಿಗಳ ದಿನಕ್ಕೆ ಸರ್ಕಾರಿ ರಜೆ- ಕತ್ತೆ ನಮ್ಮ ರಾಷ್ಟ್ರೀಯ ಪ್ರಾಣಿ- ಇದು ವಾಟಾಳ ನಾಗರಾಜ ಪ್ರಣಾಳಿಕೆ ಹೈಲೈಟ್ಸ್​!

ಪ್ರೇಮಿಗಳ ದಿನಕ್ಕೆ ಸರ್ಕಾರಿ ರಜೆ ಸಿಗಬೇಕು..? ಕತ್ತೆಯನ್ನ ರಾಷ್ಟ್ರಪ್ರಾಣಿ ಎಂದು ಘೋಷಿಸಬೇಕು..? ಬಡ ಕುಟುಂಬದವರಿಗೆ ಫ್ರೀ ಹೇರ್ ಕಟ್ ಮಾಡಬೇಕು..? ಆಟೋ ರಿಕ್ಷಾದವರಿಗೆ ರೈನಕೋಟ್ ನೀಡಬೇಕು..? ಇದ್ಯಾರ್ ಬೇಡಿಕೆ ಅಂದ್ರಾ? ಇದು ಬೇಡಿಕೆಯಲ್ಲ ಬದಲಾಗಿ ಸದಾ ಹೋರಾಟಗಳಿಂದಲೇ ಮನಸೆಳೆಯುವ ಕನ್ನಡದ ನಾಯಕ ವಾಟಾಳ ನಾಗರಾಜ ಅವರ ಪ್ರಣಾಳಿಕೆ.

ಹೌದು ಇಂದು ಚಾಮರಾಜನಗರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ವಿಭಿನ್ನವಾಗಿ ತಮ್ಮ ಪುತ್ರಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಿಸಿದ ವಾಟಾಳ ಗಮನ ಸೆಳೆದರು. ಕತ್ತೆ ಧರ್ಮದೇವತೆಯೆಂದು ಪೂಜಿಸುವ ವಾಟಾಳ್, ಕತ್ತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಕತ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ‌ ಸ್ಥಾಪನೆ ಮಾಡ್ಬೇಕು. ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಹೇರ್ ಕಟ್ಟಿಂಗ್, ಶೇವಿಂಗ್ ವ್ಯವಸ್ಥೆ ಮಾಡಬೇಕು, ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ನೀಡಬೇಕು. ಪ್ರಮುಖ ವ್ಯಕ್ತಿಗಳ ಪ್ರತಿಮೆಗಳನ್ನ ಸ್ಥಾಪಿಸಬೇಕು. ನಗರದಲ್ಲಿ ಕನಿಷ್ಠ ೨೦ ಸಾವಿರ ಶೌಚಾಲಯ ನಿರ್ಮಿಸಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕು. ಉಚಿತ ಔಷಧಿ ವ್ಯವಸ್ಥೆ ಕಲ್ಯಾಣ ಮಂಟಪ ಸ್ಥಾಪನೆಯಾಗ್ಬೇಕು ಎಂದ್ರು.

ಅಲ್ಲದೇ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ, ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂದಿಗೆ ಕರ್ನಾಟಕದ ಬಗ್ಗೆ ಅರಿವಿಲ್ಲ. ಇವರೆಲ್ಲಾ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಪ್ರಚಾರ ಮಾಡದೇ ಅವರವರ ಭಾಷೆಯಲ್ಲಿ‌ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಂತವರಿಂದ ಶಾಸನ ಸಭೆಯ ಗಾಂಭೀರ್ಯ ಕಡಿಮೆಯಾಗೋದು. ರಾಜ್ಯಕ್ಕೆ ಬಂದ ಪ್ರಧಾನಿ ಯಾಕೆ ಚಾಮರಾಜನಗರಕ್ಕೆ ಬಂದಿಲ್ಲ, ಚಾಮರಾಜನಗರದಲ್ಲಿ‌ ಫೈಟ್ ಇರೋದು ನನಗೆ ಮತ್ತು ಪ್ರಧಾನಿ‌ ಮೋದಿಗೆ ಮೋದಿ‌ ಅಲ್ಲಿಗೆ ಬರಬೇಕಾಗಿತ್ತು, ಆದ್ರೇ ಅವರು ಬರದೇ ಇದ್ದದ್ದು ಅಕ್ಷಮ್ಯ ಅಪರಾಧ, ಮೋದಿ ರಾಜ್ಯದ ಜನರ ಕ್ಷಮೆ ಕೇಳ್ಲೇಬೇಕು. ಇಲ್ಲವಾದ್ರೇ ಅವರ ವಿರುದ್ದ ಕೋರ್ಟಿನಲ್ಲಿ ಕೇಸ್ ಹಾಕ್ತೀನಿ ಅಂತ ಮೋದಿ ವಿರುದ್ಧ ಗರಂ ಆದ್ರು.