ಪಟೇಲರ ಪ್ರತಿಷ್ಠೆ – ದಲಿತರ ಇತಿಹಾಸದ ಮದ್ಯೆ ಮೋದಿ ವಿರೋಧಿ ಪಾಟೀದಾರ್ ಚಳುವಳಿ !

ಗುಜರಾತ್ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡುವ ಸಲುವಾಗಿ ಬಿಟಿವಿ ತಂಡ ಗುಜರಾತ್ ಪ್ರವಾಸದಲ್ಲಿದೆ. ಗುಜರಾತ್ ನಲ್ಲಿ ಸದ್ಯ ನಡೆಯುತ್ತಿರೋ ಜಾತಿ ರಾಜಕಾರಣದ ಪ್ರಮುಖ ಚಳುವಳಿಯಾಗಿರುವ ಪಾಟೀದಾರ್ ಚಳುವಳಿ ಬಗ್ಗೆ ಬಿಟಿವಿಯ ಹಿರಿಯ ರಾಜಕೀಯ ವರದಿಗಾರ ನವೀನ್ ಸೂರಿಂಜೆ ಬರೆಯುತ್ತಾರೆ :

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನೇರ ಸ್ಪರ್ಧೆಯನ್ನು ಮಾಡುತ್ತಿದ್ದರೂ ದೇಶದ ಗಮನ ಸೆಳೆದಿರೋದು ಪಟೇಲ್ ಸಮುದಾಯದ ರಾಜಕೀಯ ನಡೆ.    ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹಾರ್ಧಿಕ್ ಪಟೇಲ್ ಸಾಮಾಜಿಕ ಜಾಲತಾಣದ ಮೂಲಕ ಆರಂಭಿಸಿದ ಚಳುವಳಿ ಇಂದು ದೇಶ ಆಳುವ ಪಕ್ಷಕ್ಕೆ ನಡುಕ ಬರಿಸುವ ರೀತಿಯಲ್ಲಿ ಬೆಳೆದಿದೆ ಎಂದರೆ ತಮಾಷೆಯ ಮಾತಲ್ಲ. ತಂಗಿಗೆ ಸ್ಕಾಲರ್ ಶಿಪ್ ಸಿಕ್ಕಿಲ್ಲ ಎಂದು ಪ್ರಾರಂಭವಾದ ಚಳುವಳಿಯ ಜೊತೆಗೆ ಇಂದು ಪಾಟೀದಾರ್ ಯುವ ಸಮುದಾಯ ಭಾವನಾತ್ಮಕವಾಗಿ ನಿಂತಿದೆ.
ಯಾವಾಗ ಬಿಜೆಪಿ ಸರಕಾರ ಮೀಸಲಾತಿ ಹೋರಾಟ ನಡೆಸುತ್ತಿರುವ ಪಾಟೀದಾರ್ ಯುವ ಸಮುದಾಯದ ಮೇಲೆ ಪೊಲೀಸ್ ಬಲ ಪ್ರಯೋಗ ಮಾಡಿತೋ ಅಲ್ಲಿಂದ ಬಿಜೆಪಿ ವರ್ಸಸ್ ಪಟೇಲ್ ವಾತಾವರಣ ಪ್ರಾರಂಭವಾಯಿತು. ಅದು ಮುಂದುವರಿದು ಹಾರ್ಧಿಕ್ ಪಟೇಲ್ ಜೈಲು ಸೇರಿದ್ದೂ, ಗಡಿಪಾರು ರೀತಿಯ ಕ್ರಮಗಳಿಗೆ ಒಳಗಾಗಿದ್ದು ಗುಜರಾತ್ ನಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಯಿತು.

ಹಾಗಂತ ಇಡೀ ಪಾಟೀದಾರ್ ಸಮುದಾಯ ಈ ಪಟೇಲ್ ಹೋರಾಟದ ಜೊತೆಗಿದೆ ಎಂದರೆ ತಪ್ಪಾಗುತ್ತದೆ. “ನಾವು ಈ ಗ್ರಾಮದ ಒಂದು ಪ್ರತಿಷ್ಠಿತ ಮನೆತನ. ನಮಗೇನೂ ಮೀಸಲಾತಿ ಬೇಕಿಲ್ಲ. ನಾವು ಕೆಳಜಾತಿಯವರು ಅಲ್ಲ. ಮೀಸಲಾತಿಗಾಗಿ ಹೋರಾಟ ಮಾಡುವ ಮೂಲಕ ನಮ್ಮ ಮನೆತನದ ಮರ್ಯಾದೆ ತೆಗೆಯುತ್ತಿದ್ದಾರೆ” ಎಂಬುದು ಸುರೇಂದ್ರನಗರ ಜಿಲ್ಲೆಯ ಧೃಗಾಂದ್ರಾ ತಾಲೂಕಿನ ಬೈಸಾಬ್ಗಾದ್ ನ ಹಳ್ಳಿಯೊಂದರ ಹಿರಿಯ ಪರಶು ಪಾಟೇಲ್ ಮಾತು. ಈ ನಿಲುವು ಪರಶು ಪಾಟೇಲ್ ಒಬ್ಬರದ್ದು ಮಾತ್ರ ಅಲ್ಲವೆನಿಸುವುದು ಹಾರ್ಧಿಕ್ ಪಟೇಲ್ ಜೊತೆ ನಿಂತಿರುವ ವರ್ಗವನ್ನು ನೋಡಿದಾಗ. ಹಾರ್ಧಿಕ್ ಪಟೇಲ್ ಜೊತೆಗೆ ಸಮುದಾಯದ ಸಾಂಪ್ರದಾಯಿಕ ಹಿರಿಯರು ಕಾಣಸಿಗುವುದಿಲ್ಲ. ಕೇವಲ ಯುವ ಸಮುದಾಯ ಮಾತ್ರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುತ್ತದೆ.

ಸೂರತ್ ಭಾಗದಲ್ಲಿರುವ ಲೇವಾ ಪಾಟೀದಾರ್ ಮತ್ತು ಸುರೇಂದ್ರ ನಗರ, ಮೆಹಸಾನ್ ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಕಡುವಾ ಪಾಟೀದಾರ್ ಮೀಸಲಾತಿ ಹೋರಾಟದ ಬಗ್ಗೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಹೊಂದಿದೆ. ಲೇವಾ ಪಾಟಿದಾರ್ ಗಳು ಉಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ, ಕಡುವಾ ಪಾಟೀದಾರ್ ಗಳು ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಡುವ ಪಾಟೀದಾರ್ ಗಳು ಇನ್ನೂ ಫ್ಯೂಡಲ್ ಮನಸ್ಥಿತಿಯನ್ನು ಹೊಂದಿದೆ. ಹಳ್ಳಿಗಳ ಯಜಮಾನಿಕೆಯ ಪ್ರತಿಷ್ಠೆಯೇ ಅವರಿಗೆ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಕಡುವಾ ಪಾಟೀದಾರ್ ಹಿರಿಯರು ಮೀಸಲಾತಿ ಹೋರಾಟವನ್ನು ಬಹುತೇಕ ಒಪ್ಪುವುದಿಲ್ಲ. ಲೇವಾ ಪಾಟೀದಾರ್ ಗಳು ರಾಷ್ಟ್ರದ್ಯಂತ ಹರಡಿದ್ದಾರೆ. ಈ ಸಮುದಾಯ ಉಧ್ಯಮದಲ್ಲಿ ಸಕ್ರೀಯವಾಗಿರುವುದರಿಂದ ಅವರಿಗೆ ಬದುಕಿನ ಎದುರು ಪೊಳ್ಳು ಪ್ರತಿಷ್ಠೆಗಳು ನಗಣ್ಯ. “ನಮಗೆ ಸರಕಾರಿ ಕೆಲಸದಲ್ಲಿ ಮೀಸಲಾತಿ ಬೇಕೋ ಬೇಡವೋ ಎಂಬುದು ಬೇರೆ ವಿಚಾರ. ನಮ್ಮಲ್ಲೂ ಬಡವರಿದ್ದಾರೆ. ಕನಿಷ್ಠ ಶಿಕ್ಷಣದಲ್ಲಿ ನೀಡುವ ಮೀಸಲಾತಿಯಾದರೂ ಸಿಗಬೇಕು. ರಾಜಕೀಯ ಅಧಿಕಾರಕ್ಕೂ ನಮಗೆ ಮೀಸಲಾತಿ ಬೇಕು ” ಎನ್ನುವುದು ಪಾಟೀದಾರ್ ಚಳುವಳಿಯಲ್ಲಿ ಗುರುತಿಸಿಕೊಂಡಿರುವ ಯುವಕ ಸಂತೋಷ್ ಪಟೇಲ್ ಹೇಳುತ್ತಾರೆ.

 

ನಾವು ಮೀಸಲಾತಿ ಹೋರಾಟ ಮಾಡುತ್ತಾರೆ ಎಂದು ಬೆಂಬಲ ಕೊಟ್ಟೆವು. ನಮ್ಮ ಗ್ರಾಮ ಮಟ್ಟದ ಪಟೇಲ್ ಸಂಘಟನೆಗಳು ಎಲ್ಲೇ ಸಮಾವೇಶ ನಡೆದರೂ ಸೇರುತ್ತಿದ್ದೆವು. ಆದರೆ ನಮ್ಮ ಜೊತೆ ಕನಿಷ್ಟ ಮಾತುಕತೆಯನ್ನೂ ನಡೆಸದೇ ಹಾರ್ಧಿಕ್ ಪಟೇಲ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡರು. ನಮಗೂ ಪಾರ್ಟಿ ಪೊಲಿಟಿಕ್ಸ್ ಗೂ ಸಂಬಂಧ ಇಲ್ಲ ಎನ್ನುವ ಪಾಟೀದಾರ್ ಯುವ ಮುಖಂಡರೂ ಸಿಗುತ್ತಾರೆ.

ಪಟೇಲ್ ಚಳುವಳಿಯನ್ನು ಮುರಿಯಲು ಬಿಜೆಪಿ ಮಾಡಿರೋ ಸರ್ಕಸ್ ಒಂದೆರಡಲ್ಲ. ಗಡಿಪಾರುಗಳು, ಜೈಲುಗಳು, ಲಾಠಿಚಾರ್ಜ್ ಗಳು ಪಾಟೀದಾರ್ ಚಳುವಳಿಯನ್ನು ಮತ್ತಷ್ಟೂ ಗಟ್ಟಿಗೊಳಿಸಿದಾಗ ಬಿಜೆಪಿ ಕಂಡುಕೊಂಡ ಹಾದಿ ಸಾಮಾಜಿಕ ಜಾಲತಾಣ. ಸಾಮಾಜಿಕ ಜಾಲತಾಣದ ಮೂಲಕ ಹುಟ್ಟಿಕೊಂಡ ಚಳುವಳಿಯನ್ನು ಅದರ ಮೂಲಕವೇ ಮುಗಿಸಬೇಕು ಎಂಬ ನಿರ್ಧಾರಕ್ಕೆ ಬಂದು ಹಾರ್ಧಿಕ್ ಪಟೇಲ್ ಸೆಕ್ಸ್ ಸೀಡಿ ಹರಿಯಬಿಡಲಾಯ್ತು. ಅದೂ ಕೆಲಸ ಮಾಡದೇ ಇದ್ದಾಗ ಈಗ ರಾಹುಲ್ ಮತ್ತು ಹಾರ್ಧಿಕ್ ಬಗ್ಗೆ ಅವಹೇಳನಕಾರಿ ಪೋಸ್ಟರ್ಸ್ ಮಾಡಿ ಹರಿಬಿಡಲಾಗುತ್ತಿದೆ.

 

 

 

ಕಳೆದ ಲೋಕಸಭಾ ಚುನಾವಣೆಯಲ್ಲಿ 18 ರಿಂದ 25 ವರ್ಷ ವಯಸ್ಸಿನ ಸಮುದಾಯ ಮೋದಿ ಅಲೆಗೆ ಪೂರಕವಾಗಿ ವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕಾಂಗ್ರೆಸ್ ನಿಂದ ಬೇಸತ್ತಿದ್ದ ಯುವ ಸಮುದಾಯ ಮೋದಿ ಮೋದಿ ಎಂದು ಕೂಗಿತ್ತು. ಇದೀಗ ಅದೇ ಯುವ ಸಮುದಾಯ ಗುಜರಾತ್ ನಲ್ಲಿ ಬಿಜೆಪಿ ವಿರುದ್ದ ನಿಂತುಕೊಂಡಿದೆ. ಕಳೆದ 22 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಆಡಳಿತವಿದೆ. 18 ರಿಂದ 25 ವರ್ಷ ವಯಸ್ಸಿನ ಯುವ ಸಮುದಾಯ ಬಿಜೆಪಿ ಆಡಳಿತವನ್ನು ಹೊರತುಪಡಿಸಿದ ಸರಕಾರವನ್ನೇ ಕಂಡಿಲ್ಲ ! ಇದು ಸಹಜವಾಗಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುತ್ತದೆ.

ಇದೇ ಕಾರಣಕ್ಕೆ ಸೂರತ್ ಮತ್ತು ಬರೋಚ್ ಭಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳಿಗೆ ಜನಗಳೇ ಸೇರುತ್ತಿಲ್ಲ. ಖಾಲಿ ಕುರ್ಚಿಗಳ ವಿಡಿಯೋ ವೈರಲ್ ಆಗಿತ್ತು. ಗುರುವಾರ ಸೂರತ್ ನಲ್ಲಿ ಪಾಟೀದಾರ್ ಸಮಾವೇಶವಿತ್ತು. ಅದೇ ರಸ್ತೆಯಲ್ಲಿ ಬಿಜೆಪಿಗರ ಬೈಕ್ ರ‌್ಯಾಲಿ ಸಾಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಪಟೇಲ್ ಯುವಕರು ಬಿಜೆಪಿಗರು ಧರಿಸಿದ್ದ ಟೊಪ್ಪಿ, ಹಿಡಿದುಕೊಂಡಿದ್ದ ಬಿಜೆಪಿ ದ್ವಜಗಳನ್ನು ಕಿತ್ತೆಸೆದರು. ಇದು ಬಿಜೆಪಿ ಬಗೆಗೆ ಸೂರತ್ ಭಾಗದಲ್ಲಿ ಯುವ ಪಾಟೀದಾರ್ ಗಳು ಹೊಂದಿರೋ ಅಸಹನೆಯನ್ನು ತೋರಿಸುತ್ತದೆ.

ಹಾಗಂತ ಪಾಟೀದಾರ್ ಚಳುವಳಿ ಬಿಜೆಪಿಯನ್ನು ಸೋಲಿಸುತ್ತದೆ ಮತ್ತು ಕಾಂಗ್ರೆಸ್ಸನ್ನು ಗೆಲ್ಲಿಸುತ್ತದೆ ಎನ್ನುವಂತೆ ಇಲ್ಲ. 12.3 ಶೇಕಡಾ ಜನಸಂಖ್ಯೆ ಹೊಂದಿರುವ ಪಾಟೀದಾರ್ ಸಮುದಾಯದಷ್ಟೇ ಹಿಂದುಳಿದ ವರ್ಗ, ದಲಿತ, ಮುಸ್ಲಿಂ, ಆದಿವಾಸಿ ಮತದಾರರ ನಿರ್ಧಾರವೂ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಕಾಂಗ್ರೆಸ್ (KAP ) ಕ್ಷತ್ರೀಯಾ – ಆದಿವಾಸಿ- ಪಾಟೀದಾರ್ ಸಂಘಟನೆಯನ್ನು ಸ್ಥಾಪಿಸಿದೆ. ಹಾರ್ಧಿಕ್ ಪಟೇಲರ ಪಾಟೀದಾರ್ ಚಳುವಳಿಯೂ ಇದರ ಭಾಗವಾಗಿದೆ. ಇದು ಆದಿವಾಸಿಗಳ ತಕರಾರಿಗೆ ಕಾರಣವಾಗಿದೆ. ಇದೇ ಜಮೀನ್ದಾರಿ ಪಟೇಲ್ ಸಮುದಾಯ ಇತಿಹಾಸದಲ್ಲಿ ಆದಿವಾಸಿಗಳನ್ನು, ದಲಿತರನ್ನು ನಡೆಸಿಕೊಂಡ ರೀತಿಯನ್ನು ಇನ್ನೂ ಮರೆತಿಲ್ಲ. ಆ ಇತಿಹಾಸದ ಪ್ರಶ್ನೆ ಪದೇ ಪದೇ ಭುಗಿಲೇಳುತ್ತಿದೆ. ಏನೇ ಆದರೂ ದೇಶದಲ್ಲಿ ಪ್ರಶ್ನಾತೀತ ನಾಯಕತ್ವವನ್ನು ಬೆಳೆಸಲು ಹೊರಟಿರುವ ನರೇಂದ್ರ ಮೋದಿ, ಅಮಿತ್ ಷಾ ಜೋಡಿಗೆ ಹಾರ್ಧಿಕ್ ಪಾಟೇಲ್ ರ ಪಾಟೀದಾರ್ ಚಳುವಳಿ ಬಿಸಿ ಮುಟ್ಟಿಸಿರುವುದಂತೂ ನಿಜ.

 

ಲೇಖಕರು : ನವೀನ್ ಸೂರಿಂಜೆ – ಬಿಟಿವಿ ವರದಿಗಾರರು,  ಗುಜರಾತ್ ನಿಂದ.

 

1 ಕಾಮೆಂಟ್

  1. ನಾನು ಕುಟುಕು ಕಾರ್ಯಚರಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಆಸಕ್ತಿದಾಯಕನಾಗಿದ್ದು ಅವಕಾಶದ ಕೊರತೆಯಿಂದ ದೂರ ಒಳಿದ್ದಿದೆನೆ. ಹಲವು ಬಾರಿ ಆರ್ ಟಿ ಆಯ್ ಕಾಯಿದೆ ಅಡ್ಡಿಯಲ್ಲಿ ಮಾಹಿತಿ ಸಂಗ್ರಹಣೆ ಮಾಡಿ ಭ್ರಷ್ಟ ಅಧಿಕಾರಿ ಜನಪ್ರತಿನಿಧಿಗಳಿಗೆ ಟಾಂಗ್ ನೀಡಿರುವುದುಂಟು. ನಿಮ್ಮ ಸಂಸ್ಥೆಯಲ್ಲಿ ಕುಟುಕು ಕಾರ್ಯಚರಣೆ ವಿಭಾಗಕ್ಕೆ ನನ್ನನ್ನು ಆಯ್ಕೆ ಮಾಡಬಹುದು ಎಂಬ ಆಸಯ ಇದೆ. ಎಲ್ಲ ವಿಷಯವನ್ನು ವಿಸ್ತರಿಸಿ ಬರೆಯಲು ಸಾಧ್ಯವಿಲ್ಲದ ಕಾರಣ ನಾವು ನನ್ನನ್ನು ಕರೆಸಿ ಸಂಬಧಿಸಿದ ಮಾಹಿತಿಯನ್ನು ಪಡೆಯಬಹುದು.

ಪ್ರತ್ಯುತ್ತರ ನೀಡಿ

Please enter your comment!
Please enter your name here