ವಿಕಲಚೇತನನ ಪಾಲಿಗೆ ಯಮನಾದ ಇರುವೆ

ಯಮ‌ ನಾನಾ ರೂಪದಲ್ಲಿ ಬರ್ತಾನೆ ಅಂತಾರೆ. ಇಷ್ಟಕ್ಕೂ ಇಲ್ಲಿ ಯಮ ಬಂದಿದ್ದು ಇರುವೆ ರೂಪದಲ್ಲಿ. ಹೌದು ಇದು ವಿಚಿತ್ರವಾದರೂ ಸತ್ಯ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈತ್ಕೋಲ ನಿವಾಸಿ ವಿಕಲಚೇತನ ೧೯ ವರ್ಷದ ಶಿವು ಇರುವೆ ದಾಳಿಗೊಳಗಾಗಿ ಸಾವನ್ನಪ್ಪಿದ ದುರ್ದೈವಿ.
ಹುಟ್ಟಿನಿಂದಲೂ ದಿವ್ಯಾಂಗನಾಗಿರುವ ಶಿವು ಕುಟುಂಬದ ಅತಿ ಬಡತನದಿಂದ ಬಳಲುತ್ತಿದೆ. ಹೀಗಾಗಿ ಶಿವು ಕುಟುಂಬ ಬೈತ್ಕೋಲನಲ್ಲಿ ಪುಟ್ಟ ಗುಡಿಸಿಲಿನಲ್ಲಿ ವಾಸವಾಗಿದೆ. ಶಿವು ತಾಯಿ ಕೂಲಿ ಮಾಡಿ ಮಗನನ್ನು ಸಾಕುತ್ತಿದ್ದಾರೆ.
ಮೊನ್ನೆ ತುಳಸಿ ಹಬ್ಬ ಆಚರಿಸಲು ಶಿವುತಾಯಿ ಕಬ್ಬು ತಂದಿದ್ದು ಮನೆಯಲ್ಲಿಟ್ಟು ಕೆಲಸಕ್ಕೆ ತೆರಳಿದ್ದರು. ಈ ವೇಳೆ ಶಿವು ಒಬ್ಬನೇ ಮನೆಯಲ್ಲಿದ್ದ. ಆಗ ಕಬ್ಬಿನ ಜಲ್ಲೆಗೆ ಸಾವಿರಾರು ಕಟ್ಟಿರುವೆಗಳು( ಕಪ್ಪಾದ ಇರುವೆಗಳು) ಮುತ್ತಿಗೆ ಹಾಕಿ‌ ತಿಂದಿದೆ. ಬಳಿಕ ಅಲ್ಲಿಯೇ ಮಲಗಿದ್ದ ಶಿವುಗೆ ಕಚ್ಚಿವೆ. ಏಕಾಏಕಿ ಸಾವಿರಾರು ಇರುವೆಗಳು‌ ಮುತ್ತಿಗೆ ಹಾಕಿರೋದರಿಂದ ಕಂಗಾಲಾದ ಶಿವು ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಕಂಗಾಲಾಗಿ ಕಿರುಚಿಕೊಂಡಿದ್ದಾನೆ. ಇತನ ಕಿರುಚಾಟ ಕೇಳಿ ಅಕ್ಕ-ಪಕ್ಕದ ಮನೆಯವರು ಓಡಿಬಂದು ಆತನನ್ನು ಇರುವೆಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಶಿವು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇನ್ನು‌ ಮಗ ಸಾವನ್ನಪ್ಪಿದ್ದರೂ ಶಿವು ತಾಯಿಗೆ ಮಗನ ಅಂತ್ಯಸಂಸ್ಕಾರ ಮಾಡಲಾಗದಷ್ಟು ಬಡತನವಿತ್ತು. ಹೀಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ್ ಈ ಕುಟುಂಬಕ್ಕೆ ನೆರವಾಗಿದ್ದು ಶಿವು ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿವು ದಿವ್ಯಾಂಗನಾಗಿದ್ದರಿಂದ ಇರುವೆಗಳು ದಾಳಿ ಮಾಡಿದ ವೇಳೆ ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಬಲಿಯಾಗಿದ್ದಾನೆ. ಅತ್ಯಂತ ದುಸ್ಥಿತಿಯಲ್ಲಿದ್ದ ಗುಡಿಸಿಲಿನಲ್ಲಿ ವಾಸ ಹಾಗೂ ಬಡತನದಿಂದಾಗಿಯೇ ಈ ಮನ ಕಲಕುವ ಘಟನೆ ನಡೆದಿದ್ದು ಮಾತ್ರ‌ಮನಕಲಕುವ ಸಂಗತಿ.