ದೊಡ್ಡಗೌಡರ ಲೆಕ್ಕಾಚಾರ..?? ಹಾಸನದಲ್ಲಿ ತಲೆಕೆಳಗಾದ ಗಣಿತ..??

 

ಲೋಕಸಮರದಲ್ಲಿ ದೊಡ್ಮನೆಯ ಮತ್ತೊಂದು ಕುಡಿಯ ರಾಜಕೀಯ ಪ್ರವೇಶವಾಗುತ್ತಾ..? ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ದೊಡ್ಡಗೌಡರ ಮುದ್ದಿನ ಮೊಮ್ಮಗ ಡಾ! ಸೂರಜ್ ರೇವಣ್ಣ ?. ಅಣ್ಣ ಸೂರಜ್​ಗಾಗಿ ಕ್ಷೇತ್ರವನ್ನು ತ್ಯಾಗ ಮಾಡ್ತಾರಾ ಪ್ರಜ್ವಲ್ ರೇವಣ್ಣ.? ಹಾಸನ ಲೋಕಸಭಾ ಕ್ಷೇತ್ರದಿಂದ ಸೂರಜ್ ರೇವಣ್ಣ ಸ್ಪರ್ಧೆ ಮಾಡಿಸೋ ಪ್ಲಾನ್ ಮಾಡಿದಾದ್ರೂ ಯಾಕೆ ದೊಡ್ಡಗೌಡ್ರು..?

ದೇವೇಗೌಡ್ರು ಏನೇ ಮಾಡಿದ್ರೂ ಅದರಲ್ಲಿ ಏನೋ ಒಂದು ಮರ್ಮ ಖಂಡಿತಾ ಇರುತ್ತೆ. ಯಾರೂ ಊಹೆ ಮಾಡಲಾರದಂತಹ ರಣತಂತ್ರವಿರುತ್ತೆ. ಸದ್ಯ ಮೊಮ್ಮಗ ಸೂರಜ್ ವಿಷಯದಲ್ಲೂ ದೇವೇಗೌಡರ ರಹಸ್ಯ ತಂತ್ರದ ಬಗ್ಗೆ ಚರ್ಚೆ ಪ್ರಾರಂಭವಾಗಿಬಿಟ್ಟಿದೆ.

ಹಾಸನದಲ್ಲಿ ಸರ್ಕಾರದ ವತಿಯಿಂದ ರೈತರ ಸಾಲಮನ್ನಾ ಋಣಮುಕ್ತ ಪತ್ರ ವಿತರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಜೊತೆಗೆ ಹಲವು ಸಚಿವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಗಣ್ಯರಿಗಂತಲೇ ವೇದಿಕೆಯ ಮುಂದಿನ ಸಾಲನ್ನು ಮೀಸಲಿರಿಸಲಾಗಿತ್ತು.  ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಅನ್ನುವಷ್ಟರಲ್ಲಿ ಸಚಿವ ರೇವಣ್ಣ ವೇದಿಕೆಗೆ ಆಗಮಿಸಿದ್ರು. ಜೊತೆಗೆ ತಮ್ಮ ಹಿರಿಯ ಪುತ್ರ ಸೂರಜ್​ ಅವರನ್ನೂ ವೇದಿಕೆಯ ಮೇಲೆ ಕರೆತಂದಿದ್ರು. ಹೀಗೆ ಪುತ್ರ ಸೂರಜ್​ರನ್ನು ವೇದಿಕೆಯ ಮೇಲೆ ಕರೆತಂದ ಸಚಿವ ರೇವಣ್ಣ, ತಮ್ಮ ಪುತ್ರ ಸೂರಜ್‍ಗೆ ವೇದಿಕೆಯ ಮುಂದಿನ ಸಾಲಿನಲ್ಲಿಯೇ ಆಸನದ ವ್ಯವಸ್ಥೆ ಮಾಡಿಕೊಟ್ಟರು. ಇದು ಎಲ್ಲರ ಹುಬ್ಬೇರುವಂತೆ ಮಾಡಿಬಿಟ್ಟಿತ್ತು.

ಹೀಗೆ ಒಂದು ಕಡೆ ಸೂರಜ್ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಂದಿನ ಸಾಲಿನಲ್ಲೇ ಕುಳಿತು ಗಮನ ಸೆಳೆಯುತ್ತಿದ್ರೆ, ಅತ್ತ ಪ್ರಜ್ವಲ್​ ರೇವಣ್ಣ ಅವರ ಸುಳಿವೇ ಇರಲಿಲ್ಲ. ದೊಡ್ಡಗೌಡರ ಇಡೀ ಖಾಂದಾನ್ ಈ ಕಾರ್ಯಕ್ರಮದಲ್ಲಿದ್ರೂ ಪ್ರಜ್ವಲ್ ರೇವಣ್ಣ ಸುದ್ದಿಯೇ ಇಲ್ಲದಂತೆ ನಾಪತ್ತೆಯಾಗಿಬಿಟ್ಟಿದ್ರು.

 

ದೇವೇಗೌಡರು ಎರಡು ತಿಂಗಳ ಹಿಂದಷ್ಟೇ ದೊಡ್ಡಗೌಡ್ರು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಗೆ ನಿಲ್ತಾರೆ ಅಂತಾ ಸುಳಿವು ಕೊಟ್ಟಿದ್ರು. ಜೊತೆಗೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಅಂತಲೂ ಹೇಳಿದ್ರು. ಆದ್ರೆ ಈಗ್ಯಾಕೋ ಕೇಸ್​ ಪೂರ್ತಿ ಉಲ್ಟಾ ಹೊಡೆದಂತಾಗಿಬಿಟ್ಟಿದೆ. ಹಾಸನ ಲೋಕಸಭಾ ವಿಚಾರದಲ್ಲಿ ದೊಡ್ಡಗೌಡ್ರು ಬೇರೆ ಯಾವುದೋ ಪ್ಲಾನ್ ಮಾಡಿಕೊಂಡಂತೆ ಕಾಣಿಸ್ತಿದೆ. ಜಿಲ್ಲಾ ಜೆಡಿಎಸ್​​ನಲ್ಲಿ ಇತ್ತೀಚೆಗೆ ನಡೆಯುತ್ತಿರೋ ವಿದ್ಯಾಮಾನಗಳನ್ನು ನೋಡಿದ್ರೆ ಪ್ರಜ್ವಲ್ ರೇವಣ್ಣ ಬದಲು ಅವರ ಹಿರಿಯ ಸಹೋದರ ಸೂರಜ್ ರೇವಣ್ಣ ಜೆಡಿಎಸ್​ ಅಭ್ಯರ್ಥಿಯಾಗೊ ಸಾಧ್ಯತೆ ದಟ್ಟವಾಗಿದೆ.