ಖಾಕಿತೊಟ್ಟ ಪೊಲೀಸರು ಕಾರ್ಮಿಕರಂತೆ ಕೆಲಸ ಮಾಡಿದ್ಯಾಕೆ ಗೊತ್ತಾ? ನೀವೆ ನೋಡಿ!!

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

 

ಪೊಲೀಸರೆಂದರೆ ಕಾನೂನು ಪಾಲನೆ, ಭಯದ ವಾತಾವರಣ, ಖಡಕ್ ಎಚ್ಚರಿಕೆ ಸೇರಿದಂತೆ ಹಿಂಸೆಯ ಮುಖವೇ ಕಾಣುವ ಹಲವು ಸಂದರ್ಭದಲ್ಲಿ ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು ಖಡಕ್​ ಖಾಕಿ ತೊಟ್ಟ ಅಧಿಕಾರಿಗಳೇ ಇಲ್ಲಿ ಜನರ ಸಹಾಯಕ್ಕೆ ಧಾವಿಸಿದ್ದು, ಕಾರ್ಮಿಕರಂತೆ ಕೆಲಸ ಮಾಡಿ ಜನರ ಆತಂಕ ನಿವಾರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪ ಬೇಗೂರು ಹಾಗೂ ತಮ್ಮಟದಹಳ್ಳಿ ಮಾರ್ಗ ಮಧ್ಯೆ ದೊಡ್ಡ ಸೇತುವೆ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟಿತ್ತು.

ಈ ವೇಳೆ ಸ್ವತಃ ಅಜ್ಜಂಪುರ ಪಿಎಸ್ ಐ ರಮೇಶ್, ಯಗಟಿ ಪಿಎಸ್ ಐ ವಿಶ್ವನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಬಿರುಕು ಬಿಟ್ಟ ಸೇತುವೆಗೆ ಪುಡಿ ಕಲ್ಲುಗಳನ್ನ ತುಂಬಿ, ಸಿಮೆಂಟಿನಿಂದ ಸಾರಿಸಿ ನಂತರ ಪುಡಿ ಮಣ್ಣನ್ನ ಹಾಕಿ ಬಿರುಕನ್ನ ಮುಚ್ಚಿ ಓಡಾಡಲು ಅವಕಾಶವಾಗುವಂತೆ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಅಜ್ಜಂಪುರ ಸಮೀಪದ ಅಂತರಗಟ್ಟೆ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಹೀಗಾಗಿ ಈ ವೇಳೆ ಸೇತುವೆ ಬಿರುಕು ಬಿಟ್ಟಿದ್ದರಿಂದ ಸಾಂಪ್ರದಾಯಿಕವಾಗಿ ಎತ್ತಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿ ಹರಕೆ ತೀರಿಸುವ ಶಾಸ್ತ್ರಕ್ಕೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಯಾಕಂದ್ರೆ ರೈತರು ಅತಿವೇಗದಲ್ಲಿ ಎತ್ತಿನ ಗಾಡಿಯನ್ನ ಓಡಿಸಿಕೊಂಡು ಬರುವಾಗ ಬಿರುಕಿನೊಳಗೆ ರಾಸಿನ ಕಾಲಿ ಸಿಕ್ಕಿಕೊಂಡು ಅಪಘಾತವಾಗೋ ಸಾಧ್ಯತೆ ಹೆಚ್ಚು. ಆದ್ರೆ, ಪೊಲೀಸರ ಸಮಯ ಪ್ರಜ್ಞೆಯಿಂದ ಅಪಘಾತವಾಗೋದನ್ನ ತಡೆದಂತಾಗಿದೆ. ಇನ್ನು ಪೊಲೀಸರ ಈ ಮಾನವೀಯತೆ ಹಾಗೂ ಸಮಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.