ತೀವ್ರಗೊಂಡ ಪ್ರತ್ಯೇಕ ಧರ್ಮವಿವಾದ- ನನಗೆ ಸ್ವಾಮೀಜಿಗಳಿಂದ ಜೀವಬೆದರಿಕೆ ಇದೆ ಎಂದ ದಿಂಗಲೇಶ್ವರ ಸ್ವಾಮೀಜಿ

ಲಿಂಗಾಯತ​- ವೀರಶೈವ ಪ್ರತ್ಯೇಕ ಧರ್ಮ ವಿವಾದ ತೀವ್ರಗೊಂಡಿದೆ. ಲಿಂಗಾಯತ​ -ವೀರಶೈವ ಹೋರಾಟದಲ್ಲಿ ಪಾಲ್ಗೊಂಡ ದಿಂಗಲೇಶ್ವರ
ಶ್ರೀಗಳಿಗೆ ಜೀವಬೆದರಿಕೆ ಬಂದಿದ್ದು, ಅದಕ್ಕೆ ಇಬ್ಬರು ಮಠಾಧೀಶರೇ ಕಾರಣ ಎಂದು ದಿಂಗಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿಂಗಲೇಶ್ವರ ಶ್ರೀಗಳು, ನನಗೆ ಕೊಲೆ ಬೆದರಿಕೆಯ ಕರೆಗಳು ಹಾಗೂ ಪತ್ರಗಳು ಬರುತ್ತಿವೆ. ನನ್ನ ವಿರುದ್ದ ಇಬ್ಬರು ಮಠಾಧೀಶರು ಷಡ್ಯಂತ್ರ ನಡೆಸುತ್ತಿದ್ದಾರೆ. ನನ್ನ ಮೇಲೆ ಕೇಸ್ ದಾಖಲಾಗಲೂ ಆ ಮಠಾಧೀಶರೇ ಕಾರಣ ಅಂತಾ ಗದಗಿನ ತೋಂಟದಾರ್ಯ ಹಾಗೂ ನಾಗನೂರು ರುದ್ರಾಕ್ಷಿಮಠದ ಸ್ವಾಮೀಜಿ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಕಾವಿಧಾರಿಗಳೇ ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆ. ನಾನು ಸತ್ಯ ಹೇಳುವುದು ಅವರಿಗೆ ಇಷ್ಟವಿಲ್ಲ ಅಂತಾ ದಿಂಗಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಇನ್ನು ಸಚಿವ ವಿನಯ್ ಕುಲಕರ್ಣಿ ದಿಂಗಲೇಶ್ವರ ಸ್ವಾಮೀಜಿಗೆ ಸಮಾಜದ ಬಗ್ಗೆ ಕಾಳಜಿಯಿಲ್ಲ ಎನ್ನುವ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಸ್ವಾಮೀಜಿ, ವಿನಯ್ ಕುಲಕರ್ಣಿ ವಿರುದ್ಧ ಕಿಡಿಕಾರಿದ್ರು ಬಸವರಾಜ ಹೊರಟ್ಟಿ ನೀಡಿರುವ ಆಮಂತ್ರಣವನ್ನು ನಾವು ಸ್ವೀಕರಿಸಿದ್ದೇವೆ. ಸಧ್ಯದಲ್ಲೇ ಸಭೆ ನಡೆಸಲಿದ್ದು, ನಾವು ಚರ್ಚೆಗೆ ತಯಾರಾಗಿದ್ದೇವೆ ಎಂದರು. ಡಿಸೆಂಬರ್ 30-31 ಚರ್ಚೆಗೆ ನಾವು ತಯಾರಾಗಿದ್ದೆವು. ಆದರೇ ಪೊಲೀಸರು ಅನುಮತಿ ನೀಡಲಿಲ್ಲ. ಹೀಗಾಗಿ ಸಭೆ ನಡೆದಿಲ್ಲ ಎಂದರು. ಒಟ್ಟಿನಲ್ಲಿ ಲಿಂಗಾಯತ- ವೀರಶೈವ ನಡುವಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ವಾಮೀಜಿಗಳ ನಡುವೆ ಅಂತಃಕಲಹ ಆರಂಭವಾದಂತಾಗಿದೆ.