ಆ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿದವರ್ಯಾರು ಗೊತ್ತಾ?

ಇದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸುದ್ದಿ. ಬಡಪಾಯಿ ಮಹಿಳೆಯ ಮೇಲೆ ಖುದ್ದು ಆಕೆಯ ಸಹೋದರ ಹಾಗೂ ಖಾಸಾ ತಾಯಿಯ ತಮ್ಮ ಅಂದ್ರೆ ಮಹಿಳೆಯ ಮಾವನೇ ನಿರಂತರವಾಗಿ ಅತ್ಯಾಚಾರವೆಸಗಿ ಬೀದಿಗೆ ತಳ್ಳಿದ್ದು, ನಾಗರಿಕ ಸಮಾಜವೆ ತಲೆತಗ್ಗಿಸುವ ಘಟನೆ ಇದಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಬೈರಾಪುರದಲ್ಲಿ ನಡೆದಿರೋ ಈ ಘಟನೆಯಿಂದ ಸಧ್ಯ ಬಡಪಾಯಿ ಹೆಣ್ಣು ಜೀವವೊಂದು ಅಕ್ಷರಶಃ ಬೀದಿಪಾಲಾಗಿದ್ದು, ಮಹಿಳೆ ನ್ಯಾಯಕ್ಕಾಗಿ ಅಲೆಯುವಂತಾಗಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಬೈರಾಪುರ ಗ್ರಾಮದ ಬಡಕುಟುಂಬದ ಗೀತಾ ಅನ್ನುವ ಮಹಿಳೆಗೆ ಬಾಲ್ಯದಲ್ಲಿಯೇ ಮದುವೆಯಾಗಿತ್ತು. ಆದ್ರೆ ಈಕೆಯ ಗಂಡ ಈಕೆಗೆ ಒಂದು ಮಗುವನ್ನು ಕರುಣಿಸಿ ಕಳೆದ ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದಾನೆ. ಹೀಗಾಗಿ ಅಕ್ಷರಶಃ ಅನಾಥವಾದ ಗೀತಾ ತನ್ನ ತಾಯಿಯ ಮನೆಯಲ್ಲೇ ನೆಲೆಸಿದ್ದಳು. ಆದ್ರೆ ತನ್ನ ತವರಲ್ಲಿ ಈಕೆಯ ತಾಯಿಯ ತಮ್ಮ ಬಸವರಾಜ್ ಶಿಗ್ಲಿ ಹಾಗೂ ಸಹೋದರ ಸಂಬಂಧಿ ರಮೇಶ ವಾಸರದ್ ಎಂಬುವವರು ಕಳೆದ ಮೂರುತಿಂಗಳಿಂದ ನಿರಂತರವಾಗಿ ಈಕೆಗೆ ಹಲವು ಆಮಿಷಗಳನ್ನ ತೋರಿಸಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ನೊಂದ ಮಹಿಳೆಗೆ ಆಧಾರ್ ಕಾರ್ಡ್ ಮಾಡಿಸಿ ಕೊಡುವುದಾಗಿ ನಂಬಿಸಿದ ಬಸವರಾಜ ಶಿಗ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ತಾನು ಬಿಜೆಪಿ ಮುಖಂಡ ಎಂದು ಆಕೆಗೆ ನಂಬಿಸಿದ್ದ ಎನ್ನಲಾಗಿದೆ. ಅಲ್ಲದೆ ಆಕೆಗೆ ಈ ಸಂಗತಿಯನ್ನ ಯಾರಿಗಾದ್ರೂ ಹೇಳಿದ್ರೆ ನಿನ್ನನ್ನ ಸುಮ್ಮನೆ ಬಿಡುವುದಿಲ್ಲ ನಂಗೆ ಶಾಸಕರೂ ಗೊತ್ತು ಮಿನಿಸ್ಟರೂ ಗೊತ್ತು ಅಂತಾ ಧಮಕಿ ಹಾಕಿದ್ದಾನೆ ಎನ್ನಲಾಗಿದೆ.
ಇದೀಗ ತನ್ನ ಕುಟುಂಬಸ್ಥರು ಹಾಗೂ ಸಂಬಂಧಿಕರ ಮೋಸದಿಂದ ನೊಂದಿರುವ ಸಂತ್ರಸ್ತೆ ಕಾಮುಕರ ಕಾಟ ತಪ್ಪಿಸಿಕೊಳ್ಳಲು ಹೆತ್ತೂರನ್ನೇ ಬಿಟ್ಟು ಅಲೆದಾಡುತ್ತಿದ್ದಾಳೆ. ಅಲ್ಲದೇ ನ್ಯಾಯಕೊಡಿಸುವಂತೆ ಬಿಟಿವಿನ್ಯೂಸ್​​ಗೆ ಮೊರೆ ಹೋಗಿದ್ದಾಳೆ.