ವರ್ಷಧಾರೆಗೆ ಬೆಚ್ಚಿದ ಕಾಫಿನಾಡು-ಗುಡಿ-ಗೋಪುರಗಳಿಗೆ ಮುಳುಗಡೆ ಭೀತಿ!

ವರ್ಷಧಾರೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಮುಳುಗಿಹೋಗಿದೆ. ಮಲೆನಾಡು ಭಾಗದಲ್ಲಂತೂ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯೋತ್ತಿರೋದ್ರಿಂದ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್. ಪುರ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ಇಂದೂ ರಜೆ ಘೋಷಿಸಲಾಗಿದೆ. ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಹಲವು ಕಡೆಗಳಲ್ಲಿ ಭೂ ಕುಸಿತ ಸಂಭವಿಸಿದೆ. ಚಿಕ್ಕಮಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ದಕ್ಷಿಣ ಕಾಶಿ ಕಳಸ – ಹೊರನಾಡು ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಎರಡೂ ಪುಣ್ಯ ಕ್ಷೇತ್ರ ತಲುಪುವ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಕಾಣದಂತೆ ಮಳೆನೀರು ಹರಿಯುತ್ತಿದೆ. ಬಸ್, ಪ್ರವಾಸಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪ ಹೆಬ್ಬಾಳೆ ಸೇತುವೆ ಇದೆ. ಶೃಂಗೇರಿ ದೇವಾಲಯದ ಬಳಿಯೂ ನೀರಿನ ಪ್ರಮಾಣ ಏರಿಕೆಯಾಗಿದ್ದು, ದೇವಾಲಯವೇ ಮುಳುಗಡೆಯ ಭೀತಿ ಎದುರಿಸುತ್ತಿದೆ.