ಕಾಂಗ್ರೆಸ್​ ಅಭ್ಯರ್ಥಿಯ ಎದೆಯಲ್ಲಿ ನಡುಕ ಮೂಡಿಸಿದ ಹೈಕೋರ್ಟ್​ ಆದೇಶ!

ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿರುವಂತೆ ಹೈಕೋರ್ಟ್‌ ಆದೇಶವೊಂದು ಕಾಂಗ್ರೆಸ್​ ಅಭ್ಯರ್ಥಿಯೊಬ್ಬರ ನಿದ್ದೆಗೆಡಿಸಿದೆ. ಹೌದು ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಜಿ.ಮಂಜುನಾಥ ಅಲಿಯಾಸ್​ ಕೊತ್ತನೂರು ಮಂಜು ತಪ್ಪಿತಸ್ಥ ಎಂದು ನ್ಯಾಯಾಲಯ ಆದೇಶಿಸಿದ್ದು, ಮಂಜುನಾಥ ಸಂಕಷ್ಟಕ್ಕಿಡಾಗಿದ್ದಾರೆ.

ಕೋಲಾರ ಜಿಲ್ಲೆ, ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಿ.ಮಂಜುನಾಥ್ ಅಲಿಯಾಸ್ ಕೊತ್ತನೂರು ಮಂಜು ತಪ್ಪು ಜಾತಿ ಪ್ರಮಾಣ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ. ಮಂಜುನಾಥ 2013ರ ಚುನಾವಣೆಯಲ್ಲಿ ತಗವು ಬುಡಗ ಜಂಗಮ (ಎಸ್‌ಟಿ) ಸಮುದಾಯಕ್ಕೆ ಸೇರಿದವರು ಎಂದು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಮಂಜು ಸ್ಪರ್ದೆ ಮಾಡಿ ಗೆಲುವು ಪಡೆದಿದ್ದರು.

ಆದರೇ ಚುನಾವಣೆಯಲ್ಲಿ ಪರಾಭವಗೊಂಡ ಜೆಡಿಎಸ್‌ ಅಭ್ಯರ್ಥಿ ಎಂ. ಮುನಿಅಂಜಪ್ಪ ಎಂಬುವವರು ಕೊತ್ತನೂರು ಮಂಜು ವಿರುದ್ದ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್​ ಮೊರೆ ಹೋಗಿದ್ದರು. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಅಲ್ಲದೇ ಇದಕ್ಕೆ ಪೂರಕವಾಗಿ ಮಂಜು ಅವರ ಶಾಲಾ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸಲ್ಲಿಸಿದ್ದರು. ಐದು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ಹೈಕೋರ್ಟ್​​ನಲ್ಲಿ ನಡೆದಿತ್ತು. ಇದೀಗ ನ್ಯಾಯಾಲಯ ಆದೇಶ ನೀಡಿದೆ.
ನ್ಯಾ. ಎ. ಎಸ್. ಬೋಪಣ್ಣ, “ಕೊತ್ತನೂರು ಮಂಜು ಬುಡಗ ಜಂಗಮ ಸಮುದಾಯಕ್ಕೆ ಸೇರಿಲ್ಲ. ಬದಲಿದೆ ಬೈರಾಗಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೀಸಲು ಕ್ಷೇತ್ರ ಮುಳಬಾಗಿಲಿನಿಂದ ಸ್ಪರ್ಧೆ ಮಾಡುವಂತಿಲ್ಲ ಎಂದು ತೀರ್ಪು ನೀಡಿದ್ದಾರೆ,’’ ಎಂದು ಆದೇಶಿಸಿದೆ.

ಇದೀಗ ಮಂಜುನಾಥ ನಕಲಿ ಜಾತಿ ಪ್ರಮಾಣ ಪತ್ರ ರದ್ದು ಮಾಡಿರೋದರಿಂದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದ ಚಿತ್ರಣವೇ ಬದಲಾದಂತಾಗಿದೆ. ಇದರಿಂದ ಕಾಂಗ್ರೆಸ್​​ ಗೆ ಒಂದು ಗೆಲ್ಲುವ ಕ್ಷೇತ್ರ ಕಳೆದುಕೊಂಡಂತಾಗಿದೆ.