ಮಂಜುನಾಥನ ಸನ್ನಿಧಿಯಲ್ಲಿ ಮೂರುವರೆ ಕೋಟಿ ಸತ್ಯ! ನಾಮಪತ್ರ ಹಿಂಪಡೆಯಲು 1 ಪೈಸೆ ಪಡೆದಿಲ್ಲ ಎಂದ ಸಂಸದ ಮುದ್ದಹನುಮೇಗೌಡ!!

ನಾಮಪತ್ರ ಹಿಂಪಡೆಯಲು 3.5 ಕೋಟಿ ರೂಪಾಯಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಮನನೊಂದ ತುಮಕೂರಿನ ಸಂಸದ ಮುದ್ದಹನುಮೇಗೌಡ  ಪ್ರಮಾಣ ಮಾಡಿ ಸತ್ಯ ಹೇಳಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ  ಸಂಸದ ಮುದ್ದಹನುಮೇಗೌಡರು   ‘ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಸತ್ಯ ಹೇಳ್ತಿದ್ದೇನೆ. ನಾನು ನಾಮಪತ್ರ ವಾಪಸ್ ಪಡೆಯಲು ಯಾರಿಂದಲೂ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ad

ಲೋಕಸಭಾ ಚುನಾವಣೆಯಲ್ಲಿ, ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ ವಿರುದ್ಧ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯಾಗಿ ಸಂಸದ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸಿದ್ದರು, ನಂತರ  ಮನವೊಲಿಕೆಗೆ ತಗ್ಗಿದ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆದಿದ್ದರು. ಆದ್ರೆ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಹರಿದಾಡಿದ್ದ ವಿಡಿಯೋವೊಂದರಲ್ಲಿ  ನಾಮಪತ್ರ ವಾಪಸ್ ಪಡೆಯಲು ಮುದ್ದಹನುಮೇಗೌಡ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಆಪ್ತ ದರ್ಶನ್ ಹಾಗೂ ಕಾಂಗ್ರೆಸ್​​ ಕಾರ್ಯಕರ್ತ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು.

ಈ ವಿಚಾರವಾಗಿ ಬೇಸಗೊಂಡ ಮುದ್ದಹನುಮಗೌಡರವರು ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಉದ್ದೇಶದಿಂದ ನಾಮಪತ್ರ ಸಲ್ಲಿಸಿದ್ದೆ, ಆದರೆ ಮೈತ್ರಿ ಧರ್ಮದ ಪ್ರಕಾರ ನಾನು ತುಮಕೂರು ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕಾಯಿತು. ಏಕೆಂದರೆ ಎಐಸಿಸಿ ಅಧ್ಯಕ್ಷ ರಾಹುಲ್, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿಸಿಎಂ ಜಿಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಭೆ ನಡೆಸಿ ಮೈತ್ರಿಧರ್ಮ ಪಾಲನೆ ಮಾಡಬೇಕು ಎಂದು ನನಗೆ ಮನವರಿಕೆ ಮಾಡಿದರು .ಇದರಿಂದ ನಾನು ಸಲ್ಲಿಸಿದ ನಾಮಪತ್ರ ಹಿಂಪಡೆದುಕೊಂಡೆ ಎಂದು ಹೇಳಿದರು.ನಂತರ ನಾನು ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯವನ್ನು ಮಾಡಿದ್ದೇನೆ.

ಆದರೆ ಚುನಾವಣೆಯ ನಂತರ ಯಾವುದೋ ಒಂದು ಆಡಿಯೋ ಸಂಭಾಷಣೆ ನಡೆಯುತ್ತೆ ಅದರಲ್ಲಿ ನಾನು ನಾಮಪತ್ರ ವಾಪಸ್ ಪಡೆದುಕೊಳ್ಳಲು ಕೋಟಿ, ಕೋಟಿ ಡೀಲ್​ ನಡೆದಿದೆ ಅಂತಾ ಮೂರನೇ ವ್ಯಕ್ತಿಗಳು ಮಾತನಾಡಿಕೊಂಡರು. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯಿತು. ಹೀಗಾಗಿ ಮನನೊಂದು ಧರ್ಮಸ್ಥಳಕ್ಕೆ ಬಂದಿದ್ದೇನೆ. ನಾನು ಹುಟ್ಟಾ ರಾಜಕಾರಣಿಯಲ್ಲ. ನ್ಯಾಯಾಂಗ ಹಿನ್ನೆಲೆಯಿಂದ ಬಂದವನು. ಹೀಗಾಗಿ ಈ ಆರೋಪಗಳು ಮನನೋಯಿಸುತ್ತವೆ. ಅದಕ್ಕೆ ಸ್ಪಷ್ಟನೆ ನೀಡಲು ದೇವರ ಎದುರು ಸತ್ಯ ಹೇಳಿದ್ದೇನೆ ಎಂದರು.