ಮಂಡ್ಯದಲ್ಲಿ ಪುತ್ರನಿಗಾಗಿ ಸಿಎಂ ಭರ್ಜರಿ ಪ್ರಚಾರ! ಕುಮಾರಸ್ವಾಮಿಗೆ ಬಲತುಂಬಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!!

ರಾಜ್ಯದಲ್ಲಿ ಸಖತ್​ ಹೈಪ್​ ಕ್ರಿಯೆಟ್​​ ಮಾಡಿರೋ ಮಂಡ್ಯದಲ್ಲಿ  ಕಣದ ಕೊನೆ ಕ್ಷಣ  ಪ್ರಚಾರ ರಂಗೇರಿದ್ದು, ಇಂದಿನಿಂದ  ಪುತ್ರ ನಿಖಿಲ್​​​​​ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಎರಡು ದಿನಗಳ ಕಾಲ ಪ್ರಚಾರ ಆರಂಭಿಸಿದ್ದಾರೆ. ಮಗನನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.ಕೆ ಪುತ್ರನ ಗೆಲುವಿಗೆ ಬೂತ್​ ಮಟ್ಟದಿಂದಲೇ ಮತದಾರರನ್ನು ಓಲೈಸಲು ಮುಂದಾಗಿದ್ದಾರೆ.

ಪುತ್ರ ನಿಖಿಲ್‌ ಗೆಲುವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಕುಮಾರಸ್ವಾಮಿ , ಬಿರು ಬಿಸಿಲನ್ನೂ ಲೆಕ್ಕಿಸದೆ ಕೊನೆ ಕ್ಷಣದಲ್ಲಿ ಬೆವರು ಹರಿಸುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್​ ಘಟಾನುಘಟಿಗಳಾದ ಸಿದ್ದರಾಮಯ್ಯ, ರಾಹುಲ್​ ಗಾಂಧಿಯಿಂದ ಪ್ರಚಾರ ನಡೆಸಿದ್ದಾರೆ. ಇನ್ನೂ ಇಂದು  ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿಯಲ್ಲಿ ನಿಖಿಲ್​​ ಪರ ರೋಡ್‌ ಶೋ ನಡೆಸೋ ಮೂಲಕ ಮತಬೇಟೆ ನಡೆಸಲಿದ್ದಾರೆ.

ಇನ್ನು ನೆರೆ ರಾಜ್ಯವಾದ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕೂಡ ಪ್ರಚಾರಕ್ಕೆ ಎಚ್‌.ಡಿ.ಕೆ ಆಹ್ವಾನಿಸಿದ್ದು, ಚಂದ್ರಬಾಬು ನಾಯ್ಡು ಇಂದು ನಿಖಿಲ್​ ಪರ ಮೇಲುಕೋಟೆ, ಪಾಂಡವಪುರದಲ್ಲಿ ಪ್ರಚಾರ ಕಣಕ್ಕಿಳಿದಿದ್ದಾರೆ.ಬಹಿರಂಗ ಪ್ರಚಾರ ನಾಳೆ ಸಂಜೆ ಅಂತ್ಯಗೊಳ್ಳಲಿದ್ದು, 18 ರಂದು ಮತದಾನ ನಡೆಯಲಿದೆ.

ಹೀಗಾಗಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಮತ ಸೆಳೆಯುವ ಕೊನೆಯ ಕ್ಷಣದ ಸರ್ಕಸ್​​ನ್ನು ಆರಂಭಿಸಿದ್ದಾರೆ.  ಚುನಾವಣೆಗೆ ಇನ್ನೇನು ಮೂರು ದಿನ ಬಾಕಿಯಿದ್ದು, ಮಂಡ್ಯ ಕಣ ರಂಗೇರಿದೆ. ಈಗಾಗಲೇ ನಿಖಿಲ್​ ಪರ ರಾಜಕೀಯ ದಿಗ್ಗಜರು ಸಿಎಂ ಪುತ್ರನ ಗೆಲುವಿಗೆ ಶ್ರಮಿಸುತ್ತಿದ್ದಾರೆ.