ರಾಜ್ಯದಲ್ಲಿ ಸದ್ದು ಮಾಡ್ತಿದೆ ಜಾರಕಿಹೊಳಿ ಬ್ರದರ್ಸ್​ ವಾರ್! ಬಹಿರಂಗವಾಗಿ ವಾಕ್ಸಮರ ನಡೆಸಿದ ಸತೀಶ್​-ರಮೇಶ್​!!

ಒಂದೆಡೆ ಲೋಕಸಭಾ ಚುನಾವಣೆ ಮುಗಿದು ರಾಜಕೀಯ ಕಣ ತಣ್ಣಗಾಗಿ ಎಲ್ಲರೂ ವಿಶ್ರಾಂತಿಯತ್ತ ಮುಖಮಾಡಿದ್ದರೇ, ಇತ್ತ ಬೆಳಗಾವಿ ರಾಜಕೀಯ ಮತ್ತೆ ದೋಸ್ತಿ ಸರ್ಕಾರದ ಎದೆಯಲ್ಲಿ ನಡುಕಮೂಡಿಸುವ ಮುನ್ಸೂಚನೆ ನೀಡಿದೆ. ರಮೇಶ್ ಜಾರಕಿಹೊಳಿ ಮತ್ತು ಸಹೋದರ ಸತೀಶ್ ಜಾರಕಿಹೊಳಿ ಸಹೋದರರ ನಡುವೆ ಬಹಿರಂಗವಾಗಿ ವಾಕ್ಸಮರ ಆರಂಭವಾಗಿದೆ.

ad

ರಮೇಶ್ ಜಾರಕಿಹೊಳಿ ನಿನ್ನೆ ಗೋಕಾಕನಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಸಧ್ಯದಲ್ಲೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದಿನ ತೀರ್ಮಾನವನ್ನು ಅವಾಗಲೇ ಪ್ರಕಟಿಸುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಸಹೋದರನನ್ನು ಟೀಕಿಸಿದ್ದು, ರಮೇಶ್ ಬೆಳಗ್ಗೆ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ರಮೇಶ್ ಏನೋ ಒಂದು ವಸ್ತು ಕಳೆದುಕೊಂಡಿದ್ದಾನೆ. ವಸ್ತು ಕಳೆದುಕೊಂಡಿದ್ದಕ್ಕೆ ರಮೇಶ್ ಜಾರಕಿಹೊಳಿ ಹೀಗೆ ಆಡ್ತಿದಾರೆ ಎಂದಿದ್ದಾರೆ.

 

ಇನ್ನು ಸತೀಶ್​ ಜಾರಕಿಹೊಳಿ ಈ ಹೇಳಿಕೆಗೆ ರಮೇಶ್ ಜಾರಕಿಹೊಳಿ ಕೂಡ ಸರಿಯಾಗಿ ತಿರುಗೇಟು ನೀಡಿದ್ದು, ಭಿನ್ನಮತ ಶುರುವಾಗಲು ಸತೀಶ್ ಕಾರಣ ಅಂತಾ ಸಹೋದರನ ವಿರುದ್ಧ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ. ನನ್ನ ಪಾಡಿಗೆ ನಾನು ಸಚಿವನಾಗಿ ಆರಾಮಾಗಿದ್ದೆ. ತಮ್ಮ ರಾಜಕೀಯ ಲಾಭಕ್ಕಾಗಿ ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್ ಜಾರಕಿಹೊಳಿ ಅಂತಾ ಕಿಡಿಕಾರಿದ್ದಾರೆ. ಅಲ್ಲದೇ ಮಧ್ಯಂತರ ಚುನಾವಣೆಯಲ್ಲಿ ಗೋಕಾಕ್​​ನಿಂದ ಸ್ಪರ್ಧಿಸಿ, ಮುಂದಿನ ಚುನಾವಣೆಯಲ್ಲಿ ಸತೀಶ್​ಗೆ ಎದುರಾಳಿಯಾಗಿ ಯಮಕನಮರಡಿಯಿಂದಲೇ ಸ್ಪರ್ಧೆ ಮಾಡೋದಾಗಿಯೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಈಗ ಜಾರಕಿಹೊಳಿ ಬ್ರದರ್ಸ ಕಿತ್ತಾಟ ಜೋರಾಗಿದ್ದು, ರಮೇಶ್ ಜಾರಕಿಹೊಳಿ ತುರ್ತಾಗಿ ಬೆಳಗಾವಿಯಿಂದ ಬೆಂಗಳೂರಿನತ್ತ ಮುಖಮಾಡಿದ್ದಾರೆ. ಸಂಜೆ ತಮ್ಮ ಆಪ್ತರ ಜೊತೆ ಚರ್ಚಿಸಿದ ಬಳಿಕ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಬೆಳವಣಿಗೆ ದೋಸ್ತಿ ಸರ್ಕಾರದ ಎದೆಯಲ್ಲಿ ಮತ್ತೆ ನಡುಕ ಹುಟ್ಟಿಸಿದೆ.