ಸಿಎಂ ಕುಮಾರಸ್ವಾಮಿಯ ನಿದ್ದೆಯಿಲ್ಲದ ರಾತ್ರಿಯ ಕತೆಯಿದು !! ಹಾಸಿಗೆಯಲ್ಲಿ ಮುಳ್ಳಾದವರು ಯಾರು ?

ಮುಖ್ಯಮಂತ್ರಿ ಹುದ್ದೆ……. ಎಷ್ಟೇ ರಾಜಕೀಯ ಒತ್ತಡವಿದ್ದರೂ ಮುಖ್ಯಮಂತ್ರಿ ಹುದ್ದೆಯಲ್ಲಿ ಸಂತೋಷವಾಗಿಲ್ಲ ಎಂದು ಕೊರಗುತ್ತಿರುವ ದೇಶದ ಏಕೈಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ. ಅಧಿಕಾರ ಸ್ವೀಕರಿಸಿ ಒಂದುವರೆ ತಿಂಗಳಾದರೂ ಒಂದೇ ಒಂದು ದಿನ ಕುಮಾರಸ್ವಾಮಿ ನಗುಮುಖದ ಮುಖ ನೋಡಲಾಗಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಅನ್ನೋದು ನೆಮ್ಮದಿಯ ನಿದ್ದೆಗಳಲ್ಲಿದ ಮುಳ್ಳಿನ ಹಾಸಿಗೆಯಾಗಿ ಪರಿವರ್ತನೆಯಾಗಿರುವುದಾದರೂ ಹೇಗೆ ? ಕುಮಾರಸ್ವಾಮಿ ನೋವಿಗೆ ಕಾರಣರಾರ್ಯಾರು… ?ಮೇ 23, 2018…. ಕಳೆದ ಹನ್ನೊಂದು ವರ್ಷಗಳಿಂದ ಈ ಒಂದು ಸಂಭ್ರಮಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು ಮತ್ತು ದೇಶದ ಅಗ್ರಗಣ್ಯ ರಾಜಕಾರಣಿಗಳನ್ನು ಕಂಡಾಗ ಕುಮಾರಸ್ವಾಮಿಯವರು ದೇಶದ ಪ್ರಭಾವಿ ರಾಜಕಾರಣಿಯಾಗಿ ಬೆಳೆಯುತ್ತಾರೆ ಎಂಬ ನಿರೀಕ್ಷೆಗಳು ಗರಿಗೆದರಿದ್ದವು. ದೇಶದಲ್ಲಿ ಪರ್ಯಾಯ ರಾಜಕಾರಣಕ್ಕೆ ಕುಮಾರಸ್ವಾಮಿಯ ಮುಖ್ಯಮಂತ್ರಿ ಹುದ್ದೆ ಅಡಿಗಲ್ಲಾಗುತ್ತದೆ ಎಂದು ಭಾವಿಸಲಾಗಿತ್ತು. ದೇಶದಾದ್ಯಂತ ಎದ್ದು ಈ ಪರ್ಯಾಯ ರಾಜಕಾರಣದ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಎಸ್ ಎಂಬ ಜಾತ್ಯಾತೀತ ಮೈತ್ರಿಯಲ್ಲಿ ವಿಷವಿದೆ ಎಂದು ಖುದ್ದು ಎಚ್ ಡಿ ಕುಮಾರಸ್ವಾಮಿ ಸಾಭೀತು ಮಾಡುತ್ತಲೇ ಹೋದರು.

ad

ರಾಜ್ಯ ವಿಧಾನಸಭೆಯ ಫಲಿತಾಂಶ ಹೊರಬರುತ್ತಿದ್ದಂತೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಸಂಪರ್ಕಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಸರಕಾರ ರಚನೆಗೆ ಕುಮಾರಸ್ವಾಮಿ ಮುಂದಾಗಬೇಕು ಎಂದು ಕೋರಿದ್ದರು. ಈ ಸಂಧರ್ಭದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಷರತ್ತುರಹಿತ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಆದರೆ ಈ ಮಾತನ್ನು ಕಾಂಗ್ರೆಸ್ ಎರಡೇ ದಿನಕ್ಕೆ ಮರೆತುಬಿಡ್ತು. ಎರಡು ಪಕ್ಷಗಳ ಅಧಿಕಾರದಲ್ಲಿ ಸಮನ್ವಯತೆ ಸಾಧಿಸಲು ಸಮನ್ವಯ ಸಮಿತಿಯನ್ನು ರಚಿಸಲಾಯಿತು. ನಿಕಟಪೂರ್ವಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿಸುವ ಮೂಲಕ ಸೂಪರ್ ಸಿಎಂ ಅನ್ನು ನೇಮಕ ಮಾಡಲಾಯ್ತು. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಿದ್ದರಾಮಯ್ಯ ಅನುಮತಿ ಬೇಕಾಗಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಇಂಟೆಲಿಜೆನ್ಸ್ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಅಪರ ಕಾರ್ಯದರ್ಶಿಯ ಬದಲಾವಣೆ ಮಾಡುವುದು ವಾಡಿಕೆ. ಆದರೆ ಅಂತಹ ಮೂಲಭೂತ ಅಧಿಕಾರಕ್ಕೂ ಸಿದ್ದರಾಮಯ್ಯ ಅಡ್ಡಿಯಾದರು. ನೂತನ ಮುಖ್ಯಮಂತ್ರಿಯಾಗಿ ಹೊಸ ಬಜೆಟ್ಟನ್ನೂ ಮಂಡಿಸಬಾರದು ಎಂದು ಸಿದ್ದರಾಮಯ್ಯ ಪಟ್ಟುಹಿಡಿದರು. ಅಲ್ಲಿಂದೀಚೆಗೆ ಕುಮಾರಸ್ವಾಮಿಗೆ ನೆಮ್ಮದಿಯ ನಿದ್ದೆಯಿಲ್ಲದ ರಾಜಕೀಯ ಬದುಕು ಪ್ರಾರಂಭವಾಯ್ತು.

ಮುಖ್ಯಮಂತ್ರಿಯಾಗಿ ನಾನು ಸಂತೋಷದಿಂದ ಇಲ್ಲ. ವಿಷಕಂಠನಂತೆ ನೋವು ನುಂಗುತ್ತಿದ್ದೇನೆ. ನಾನು ಸಿಎಂ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ.ಈ ಸಿಎಂ ಕುರ್ಚಿ ಅನ್ನೋದು ಮುಳ್ಳಿನ ಹಾಸಿಗೆಯಂತಾಗಿದೆ. ಮನಸ್ಸು ಮಾಡಿದರೆ ಎರಡು ಗಂಟೆಯಲ್ಲೇ ಅಧಿಕಾರದಿಂದ ಕೆಳಗಿಳಿಯಬಲ್ಲೆ  ಎಂದು ನಿನ್ನೆ ಜೆಡಿಎಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಜೆಡಿಎಸ್‌ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಅಭಿನಂದನೆಯನ್ನು ನಯವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ನಿಮಗೆ ಸಂತೋಷವಾಗಿರಬಹುದು. ಆದರೆ, ನಾನು ಸಂತೋಷದಿಂದ ಇಲ್ಲ ಎನ್ನುತ್ತಲೇ ಕೆಲಹೊತ್ತು ಗದ್ಗದಿತರಾದರು. ಈ ವೇಳೆ ಎಚ್‌ಡಿಕೆ ಪರ ಜೈಕಾರ ಹಾಕಿದ ಕಾರ್ಯಕರ್ತರು ಬೇಜಾರು ಮಾಡಿಕೊಳ್ಳಬೇಡಣ್ಣ. ನಾವು ನಿಮ್ಮ ಜೊತೆಗಿದ್ದೀವಿ ಎಂದು ಧೈರ್ಯ ತುಂಬಿದರು. ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೂ ತಮ್ಮ ಭಾಷಣದಲ್ಲಿ ಪುತ್ರ ಕುಮಾರಸ್ವಾಮಿಯವರಿಗೆ ಧೈರ್ಯ ತುಂಬಿದರು. ಕಾಂಗ್ರೆಸ್‌ಜೆಡಿಎಸ್‌ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಎರಡು ತಿಂಗಳಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ಹೇಳಿಕೆ ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗಳಿಗೆ ಎಡೆಮಾಡಿಕೊಟ್ಟಿದೆ. ರೈತರ ಸಾಲಮನ್ನ ಮತ್ತು ಬಜೆಟ್ ಮಂಡನೆಯೇ ಎಚ್ ಡಿ ಕುಮಾರಸ್ವಾಮಿ ಈ ನೋವಿಗೆ ಮೂಲ ಕಾರಣ. ಅಂದು ಬಜೆಟ್ ಗಾಗಿ ಪೂರ್ವಭಾವಿ ಸಭೆ ನಡೆಸುತ್ತಿದ್ದಾಗ ಇದೇ ರೀತಿಯ ಮಾತನ್ನು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಲೋಕಸಭೆಯವರೆಗೆ ಮಾತ್ರ ಕುಮಾರಸ್ವಾಮಿ ಸರಕಾರವಿರುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ನೋವು ತೋಡಿಕೊಂಡಿದ್ದರು.2006-07 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇದ್ದ ವರ್ಚಸ್ಸೇ ಬೇರೆ. ಕುಮಾರಸ್ವಾಮಿ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ ಎಂಬಷ್ಟರ ಮಟ್ಟಿಗೆ ಆ ದಿನಗಳಲ್ಲಿ ಪ್ರಸಿದ್ದಿಯನ್ನು ಪಡೆದಿದ್ದರು. ಅದಕ್ಕೆ ಕಾರಣವಾಗಿದ್ದು ಗ್ರಾಮ ವಾತ್ಸವ್ಯ ಮತ್ತು ಬಜೆಟ್ ಕಾರ್ಯಕ್ರಮಗಳು. ಇದೇ ರೀತಿ ಈ ಬಾರಿಯೂ ಕುಮಾರಣ್ಣ ಎಂಬ ಮೇನಿಯಾವನ್ನು ಮುಂದುವರೆಸಬೇಕು ಎಂದುಕೊಂಡೇ ಎಚ್ ಡಿ ಕುಮಾರಸ್ವಾಮಿ ಬಜೆಟ್ ಮಂಡಿಸಲು ಮುಂದಾದ್ರು. ಆದರೆ ಈ ಬಜೆಟ್ ಮತ್ತು ಸಾಲಮನ್ನವೇ ಕುಮಾರಸ್ವಾಮಿಗೆ ಮುಳುವಾಯ್ತು.

ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯು ಕುಮಾರಸ್ವಾಮಿ ಬಜೆಟನ್ನು ಭಾರೀ ವಿರೋಧ ಮಾಡುತ್ತೆ ಎಂಬುದು ನಿರೀಕ್ಷಿತವಾಗಿತ್ತು. ಬಿಜೆಪಿಯೂ ಬಜೆಟ್ ನಲ್ಲಿ ಇರುವ ಪ್ರತೀ ವಿಚಾರದಲ್ಲೂ ವಿರೋಧ ವ್ಯಕ್ತಪಡಿಸಲು ಸಿದ್ದತೆ ಮಾಡಿಕೊಂಡಿತ್ತು. ಆದರೆ ಬಿಜೆಪಿಗೆ ಅಘಾತ ಕಾದಿತ್ತು. ಬಿಜೆಪಿಗಿಂತಲೂ ಬಜೆಟನ್ನು ವಿರೋಧಿಸಿದ್ದು ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು. ಹೌದು. ಈ ರೀತಿ ತಮ್ಮ ಸರಕಾರದ ಬಜೆಟ್ ವಿರುದ್ದ ಆಡಳಿತ ಪಕ್ಷದ ಶಾಸಕರನ್ನೇ ಮಾನಸಿಕವಾಗಿ ಎತ್ತಿಕಟ್ಟಿದ್ದು ಸಿದ್ದರಾಮಯ್ಯ ಮಾತುಗಳು !

ಹೌದು. ಈ ರೀತಿಯ ಬಜೆಟ್ ಅಧಿವೇಶವನ್ನು ಬಹುಶಃ ಕುಮಾರಸ್ವಾಮಿ ಮಾತ್ರವಲ್ಲ, ಈ ಸದನವೇ ಕಂಡಿಲ್ಲ. ಮುಖ್ಯಮಂತ್ರಿ ಮಂಡಿಸಿದ ಬಜೆಟನ್ನು ಸ್ವಪಕ್ಷಿಯರೇ ವಿರೋಧ ಮಾಡಿ ಸದನದಲ್ಲಿ ಭಾಷಣ ಮಾಡಿರೋದು ಇದೇ ಮೊದಲು. ಅನ್ನಭಾಗ್ಯಕ್ಕೆ ಕತ್ತರಿ, ಸಾಲಮನ್ನಾದ ಷರತ್ತು, ಉತ್ತರ ಕರ್ನಾಟಕ, ದಕ್ಷಿಣ ಕನ್ನಡಕ್ಕೆ ಪ್ರಾಧಾನ್ಯತೆ ನೀಡದೇ ಇರೋದು… ಹೀಗೆ ಸಾಲು ಸಾಲು ಕಾರಣ ನೀಡಿ ಸ್ವಪಕ್ಷೀಯರು ವಿಪಕ್ಷದ ಜೊತೆ ಸೇರಿ ಸಿಎಂ ಕುಮಾರಸ್ವಾಮಿಯನ್ನು ಉಭಯ ಸದನದಲ್ಲಿ ಜಗ್ಗಾಡಿದ್ರು.ಈ ರೀತಿ ಶಾಸಕರನ್ನು ಮಾನಸಿಕವಾಗಿ ಬಜೆಟ್ ವಿರುದ್ದ ಮೇನಿಯಾಕ್ಕೆ ಒಳಗಾಗಿಸಿದ್ದು ಸಿದ್ದರಾಮಯ್ಯ ಮಾತುಗಳು. ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಬಜೆಟ್ ಬಗ್ಗೆ ಶಾಸಕರ ಅಸಮಾದಾನವನ್ನು ಸಿದ್ದರಾಮಯ್ಯ ಖುದ್ದು ಬಗೆಹರಿಸಬೇಕಿತ್ತು. ಆದರೆ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಪತ್ರ ಬರೆದು ಬಜೆಟ್ ಬಗ್ಗೆ ಸ್ವತಹ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದು, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಸಾದೆಂಬಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನೂ ಎಳೆದುತಂದು, ತೈಲ ಬೆಲೆ ಏರಿಕೆಯ ವಿರುದ್ದ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿರುವುದನ್ನು ನೆನಪಿಸಿದ್ದಾರೆ. ಇವೆಲ್ಲದರ ಕಾರಣದಿಂದ ಕುಮಾರಸ್ವಾಮಿ ವಿರುದ್ಧ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರೇ ತಿರುಗಿಬೀಳುವಂತಾಗಿದೆ. ಇದು ಅನಿವಾರ್ಯವಾಗಿ ಕುಮಾರಸ್ವಾಮಿಯವರನ್ನು ವಿಷಕಂಠನಾಗಿ ಮಾಡಿದೆ.