ಜಯನಗರ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್​ ಇನ್ನಿಲ್ಲ- ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಬಿಜೆಪಿ ನಾಯಕ

ಬಿಜೆಪಿಯ ಸಜ್ಜನ ರಾಜಕಾರಣಿ ಎಂದೇ ಖ್ಯಾತಿಗಳಿಸಿಕೊಂಡಿದ್ದ ಬೆಂಗಳೂರು ಜಯನಗರ ಶಾಸಕ ವಿಜಯಕುಮಾರ್​ ಇನ್ನಿಲ್ಲ. ಹೌದು ನಿನ್ನೆ ಪ್ರಚಾರದ ವೇಳೆ ಹೃದಯಾಘಾತಕ್ಕೊಳಗಾದ ವಿಜಯಕುಮಾರ್​ ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ವಿಜಯಕುಮಾರ್ ಮಧ್ಯರಾತ್ರಿ 1 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.

adಕಳೆದ ಎರಡು ಭಾರಿ ಜಯನಗರ ಶಾಸಕರಾಗಿದ್ದ ವಿಜಯಕುಮಾರ್ ಮೂರನೇ ಭಾರಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಳೆದ ಒಂದು ತಿಂಗಳ ಹಿಂದೆ ಲಘುಹೃದಯಾಘಾತಕ್ಕೆ ಒಳಗಾಗಿದ್ದ ವಿಜಯಕುಮಾರ್​ಗೆ ಸ್ಟಂಟ್​​ ಅಳವಡಿಸಲಾಗಿತ್ತು. ಅನಾರೋಗ್ಯದಿಂದ ಚೇತರಿಸಿಕೊಂಡ ವಿಜಯಕುಮಾರ್, ಮತ್ತೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಆರ್.ಎಸ್.ಎಸ್​.ಹಿನ್ನೆಲೆಯಿಂದ ಬಂದಿದ್ದ ವಿಜಯಕುಮಾರ್​ ಆರಂಭದಿಂದಲೂ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಅವಿವಾಹಿತರಾಗಿಯೇ ಉಳಿದಿದ್ದ ವಿಜಯ್ ಕುಮಾರ್, ಸಜ್ಜನ ರಾಜಕಾರಣಿ ಹಾಗೂ ಶುದ್ಧ ಹಸ್ತರು ಎಂದೇ ಖ್ಯಾತಿ ಗಳಿಸಿಕೊಂಡಿದ್ದರು. ತುಮಕೂರು ಹೊರವಲಯದ ನೆಲಮಂಗಲದಲ್ಲಿ 1958 ರಲ್ಲಿ ಜನಿಸಿದ್ದ ವಿಜಯಕುಮಾರ್​​​ ಬೆಂಗಳೂರಿನ ಆರ್​​.ವಿ.ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿವರೆಗೆ ವ್ಯಾಸಂಗ ಮಾಡಿದ್ದರು. ಬಳಿಕ ಬಿಎಂಎಸ್​ನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದ ವಿಜಯಕುಮಾರ್​​, 1990ರಲ್ಲಿ ವಿಜಯಕುಮಾರ್​​​ ಬಿಜೆಪಿಗೆ ಸೇರ್ಪಡೆಯಾಗಿದ್ದರು. 19 ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೇ 12 ವರ್ಷಗಳ ಕಾಲ ಬೆಂಗಳೂರು ಬಿಜೆಪಿ ಕಾರ್ಯದರ್ಶಿಯಾಗಿದ್ದರು.

ಇಂದು ಸಂಜೆ ಚಾಮರಾಜಪೇಟೆಯ ಹಿಂದೂರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ. ವಿಜಯಕುಮಾರ್ ಕಳೆದುಕೊಂಡ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ. ಇನ್ನು ಈ ದುಃಖದಲ್ಲೂ ವಿಜಯಕುಮಾರ್ ಕುಟುಂಬ ಆದರ್ಶ ಮೆರೆದಿದ್ದು, ವಿಜಯಕುಮಾರ್​ ಕಣ್ಣುಗಳನ್ನು ದಾನ ಮಾಡಿದೆ.