ಪ್ರಚಾರದ ವೇಳೆ ಯಶ್​​ಗೆ ಪ್ರತಿಭಟನೆಯ ಶಾಕ್​​​! ದೊಡ್ಡಗೌಡ್ರ ಕುಟುಂಬದ ಬಗ್ಗೆ ಮಾತಾಡಿದ್ರೆ ಹುಶಾರ್​​ ಎಂದ ಜನ!

ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿಗೆ ಭರ್ಜರಿ ತರಾಟೆಗೆ  ತೆಗೆದುಕೊಂಡಿದ್ದ ರಾಕಿಂಗ್​​ ಸ್ಟಾರ್ ಯಶ್​ಗೆ ಇಂದು ಮಂಡ್ಯದ ಜನರು ಸಖತ್ತಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸ್ವತಂತ್ರ  ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಮಂಡ್ಯದ ಚಂದೂಪುರದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ರಾಕಿಭಾಯ್​ ಯಶ್​​ಗೆ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಪ್ರಚಾರ ನಡೆಸುವ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿರುವ  ಜೆಡಿಎಸ್​ ಕಾರ್ಯಕರ್ತರು ನಟ ಯಶ್​ ಪ್ರಚಾರಕ್ಕೆ ಅಡ್ಡಿಪಡಿಸಿ ವಾರ್ನಿಂಗ್ ಮಾಡಿದ್ದಾರೆ.

ದೇವೇಗೌಡರ ವಿರುದ್ಧ ಮಾತಾಡಿದ್ರೆ ಹುಷಾರ್, ಗೌಡರ ಕುಟುಂಬದ ಬಗ್ಗೆ ಮಾತಾಡಬಾರದು ಅಂತ ಯಶ್​ ಪ್ರಚಾರ ಮಾಡುತ್ತಿದ್ದ ವಾಹನಕ್ಕೆ ಅಡ್ಡ ಬಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸುಮಲತಾ ಬೆಂಬಲಿಗರು ಕೂಡ ಮಧ್ಯ ಪ್ರವೇಶಿಸಿದ್ದರಿಂದ ಎರಡು ಗುಂಪುಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಎರಡು ಗುಂಪುಗಳನ್ನು ಪೊಲೀಸರು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆದರೂ ಕೂಡ ಎರಡು ಗುಂಪಿನ ಕಾರ್ಯಕರ್ತರು ಪರ-ವಿರೋಧಗಳ ಘೋಷಣೆಗಳನ್ನು ಮುಂದುವರಿಸಿದರು.

ಇನ್ನು ವಿರೋಧ ಜೋರಾಗುತ್ತಿದ್ದಂತೆ ಯಶ್​ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಿನ್ನೆ  ಕುಮಾರಸ್ವಾಮಿ ಹಾಗೂ ನಿಖಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ಯಶ್​​, ನಾನು ಏನು ಕೆಲಸ ಮಾಡಿದ್ದೇನೆ ಎಂಬುದು ರೈತರಿಗೆ ಗೊತ್ತಿದೆ. ಯಾರು ಎಷ್ಟೇ ಸುಮಲತಾರನ್ನು ಚುನಾವಣೆಗೆ ನಿಲ್ಲಿಸಿದರೂ, ಅಂಬಿಯಣ್ಣನಿಗೆ ಇರೋದು ಒಬ್ಬರೇ ಹೆಂಡ್ತಿ. ಅವರು ಸುಮಲತಾ ಅಂಬರೀಶ್​ ಎಂದು ಟಾಂಗ್​ ನೀಡಿದ್ದರು. ಈ ಮಾತುಗಳ ಹಿನ್ನೆಲೆಯಲ್ಲಿ ಇಂದು ಯಶ್​ ಜನರ ವಿರೋಧ ಎದುರಿಸಬೇಕಾಯಿತು.