ಸಂಶಯಕ್ಕೆ ಬಲಿಯಾಯ್ತು ಎರಡು ಜೀವ- ಹೆಂಡತಿ ಮಗಳನ್ನು ಕೊಂದು ಶವದ ಜೊತೆ ಎರಡು ದಿನ ಕಳೆದ ಸಾಪ್ಟವೇರ್​ ಭೂಪ!

 

ಪತ್ನಿಯ ಮೇಲೆ ಸಂಶಯ ಹೊಂದಿದ್ದ ಸಾಫ್ಟವೇರ್​ ಪತಿಯೊಬ್ಬ ಪತ್ನಿಯನ್ನು ಹಾಗೂ ಮಗಳನ್ನು ಕೊಲೆಗೈಯ್ದು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರಜ್ವಲ್ ಎಂಬಾತನೇ ಪತ್ನಿ ಹಾಗೂ ಮಗಳನ್ನು ಕೊಲೆಗೈಯ್ದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ. ಇದೀಗ ಪ್ರಜ್ವಲನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಜ್ವಲ್​ ಪತ್ನಿ ಸವಿತಾ ಹಾಗೂ ಪುತ್ರಿ ಸಿಂಚನಾಳನ್ನು ಕೊಲೆ ಮಾಡಿದ್ದು, ಎರಡು ದಿನಗಳ ಕಾಲ ಪತ್ನಿ ಮತ್ತು ಮಗಳ ಹೆಣದ ಜೊತೆ ಕಾಲ ಕಳೆದ ಪ್ರಜ್ವಲ್ ಕೊನೆಯಲ್ಲಿ ನಿನ್ನೆ ರಾತ್ರಿ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಮಗನ ಮನೆಗೆ ತೆರಳಿದ ಪ್ರಜ್ವಲ್ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

ಈ ಹಿಂದೆ ಪ್ರಜ್ವಲ್ ಹಾಗೂ ಸವಿತಾ ಇಬ್ಬರು ಕೂಡ ಸಾಪ್ಟವೇರ್​ ಇಂಜೀನಿಯರಗಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೇ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಸವಿತಾಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಇದರಿಂದ ನೊಂದ ಪ್ರಜ್ವಲ್​ ಆಕೆಯನ್ನು ಕೆಲಸ ಬಿಡಿಸಿ ಮೈಸೂರಿನಲ್ಲಿ ಮನೆ ಮಾಡಿ ಇಟ್ಟಿದ್ದ ತಾನು ಬೆಂಗಳೂರಿನಲ್ಲಿ ಕೆಲಸ ಮುಂದುವರೆಸಿದ್ದ. ಆದರೇ ಸವಿತಾ ಇಲ್ಲೂ ಕೂಡ ಸರಿಹೋಗದೇ ಇರೋದರಿಂದ ಆತ ಮನನೊಂದು ಕುಡಿತಕ್ಕೆ ಶರಣಾಗಿದ್ದು, ಅದೇ ಬೇಸರದಲ್ಲಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಇದೀಗ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.