ಹನಿನೀರಿಗಾಗಿ ಹಳ್ಳದಲ್ಲಿ ಎರಡು ಕಿಲೋಮೀಟರ್ ನಡಿಬೇಕು- ಇದು ಕಾರವಾರದ ಅಂಬೆಜೂಗ್​​ ಜನರ ನಿತ್ಯದ ಪಾಡು

ಸ್ವಾತಂತ್ರ ಬಂದ್ರೂ ದಶಕಗಳೇ ಕಳೆದಿದ್ದರೂ ಹತ್ತಾರು ಸರ್ಕಾರಗಳು ಬದಲಾಗಿದ್ರೂ ಬಡವರ ಪಾಡು ಮಾತ್ರ ಬದಲಾಗಿಲ್ಲ. ಹೌದು ಇಲ್ಲಿ ಜನರು ಕುಡಿಯುವ ನೀರಿಗಾಗಿ ನೀರಿನಲ್ಲೇ ಉಸಿರು ಬಿಗಿಹಿಡಿದು ಸಂಚರಿಸುವ ಸ್ಥಿತಿ ಇದ್ದು, ಜಿಲ್ಲಾಕೇಂದ್ರವೊಂದ ಈ ದೃಶ್ಯಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

 ಹೌದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕಿನ್ನರ ಬಳಿಯ ಅಂಬೆಜೂಗ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಆದರೂ ಜನಪ್ರತಿನಿಧಿಗಳು ಅತ್ತ ಗಮನ ಹರಿಸಿಲ್ಲ. ಫಲವಾಗಿ ಗ್ರಾಮಸ್ಥರು ತೊಟ್ಟು ನೀರಿಗಾಗಿ ಉಪ್ಪುನೀರಿನ ಹಳ್ಳಿ ದಾಟಿಕೊಂಡು ಸಾಗುವ ಸ್ಥಿತಿ ಇದೆ. ಈ ಗ್ರಾಮದ ಸುತ್ತ ಸಮುದ್ರದ ಉಪ್ಪು ಮಿಶ್ರಿತ ಹಳ್ಳದ ನೀರು ಹರಿಯುತ್ತಿರುವ ಪರಿಣಾಮ ಗ್ರಾಮದಲ್ಲಿರುವ ಬಾವಿಗಳಲ್ಲೂ ಉಪ್ಪು ನೀರೇ ಸಿಗುತ್ತಿದೆ. ಹೀಗಾಗಿ ಅಂಬೆಜೂಗ್ ಗ್ರಾಮಸ್ಥರು ಕುಡಿಯುವ ನೀರು ಬೇಕು ಅಂದ್ರೆ ಹಳ್ಳವನ್ನ ದಾಟಿಕೊಂಡು 2 ಕಿಲೋಮೀಟರ್ ನಡೆದೇ ಸಾಗಬೇಕು. ನೀರುತುಂಬಿದ ಕೊಡ ಹೊತ್ತು ಅದೇ ನೀರಿನಲ್ಲಿ ನಡೆದು ಬರಬೇಕು. ನೀರಿನಲ್ಲಿ ವಿಷಜಂತುಗಳು ಇರೋದರಿಂದ ಜನರು ಪ್ರಾಣಭೀತಿಯಲ್ಲೇ ಜೀವಜಲಕ್ಕಾಗಿ ಹಳ್ಳ ದಾಟಿಕೊಂಡು ಸಾಗುತ್ತಾರೆ. ಗ್ರಾಮದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ನಾಯ್ಕವಾಡಾದ ಸರ್ಕಾರಿ ಬಾವಿಯಿಂದ ಈ ಗ್ರಾಮಸ್ಥರು ನೀರು ತರಬೇಕಿದ್ದು ಗ್ರಾಮವನ್ನ ಸುತ್ತುವರೆದಿರುವ ಹಳ್ಳಕ್ಕೆ ಸೇತುವೆ ವ್ಯವಸ್ಥೆ ಇಲ್ಲದಿರೋದ್ರಿಂದ ಅನಿವಾರ್ಯವಾಗಿ ಎದೆಯ ವರೆಗಿನ ಹಳ್ಳದ ನೀರಿನಲ್ಲಿ ಇಳಿದೇ ಕುಡಿಯುವ ನೀರನ್ನ ತರಲು ದಾಟಿ ಹೋಗಬೇಕು.

ಮಳೆಗಾಲದಲ್ಲೂ ಹಳ್ಳವನ್ನ ದಾಟಿ ನೀರಿಗೆ ಹೋಗಬೇಕು. ಅನಿವಾರ್ಯವಾಗಿ ಜೀವವನ್ನ ಕೈಯಲ್ಲಿ ಹಿಡಿದು ಹಳ್ಳ ದಾಟಿ ನೀರು ತರಬೇಕಾದ ಪರಿಸ್ಥಿತಿ ಇದೆ ಅಂತಾರೇ ಗ್ರಾಮದ ಮಹಿಳೆಯರು. ಇನ್ನು ಅಂಬೆಜೂಗ್ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಕೆಲ ವರ್ಷಗಳ ಹಿಂದೆ ಮರದ ಸೇತುವೆಯೊಂದನ್ನ ನಿರ್ಮಾಣ ಮಾಡಲಾಗಿತ್ತು. ಆದ್ರೆ ಹಳ್ಳದಲ್ಲಿ ಉಪ್ಪು ಮಿಶ್ರಿತ ನೀರು ಹರಿಯುವುದರಿಂದ ಮರದ ಸೇತುವೆ ಹೆಚ್ಚು ವರ್ಷ ಬಾಳಿಕೆ ಬರಲಿಲ್ಲ. ಆದ್ರೆ ಸೇತುವೆ ಶಿಥಿಲಗೊಂಡರೂ ಸಹ ಯಾವೊಬ್ಬ ಜನಪ್ರತಿನಿಧಿಗಳೂ ಸೇತುವೆ ನಿರ್ಮಿಸಿ ಕೊಡಲು ಮುಂದಾಗಿಲ್ಲ. ಸಾಕಷ್ಟು ಬಾರಿ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಕಿನ್ನರ, ಅಂಬೆಜೂಗ್, ಝಡಕಿ ಸೇರಿದಂತೆ ಹಲವಾರು ಗ್ರಾಮಗಳ ಜನರಿಗೆ ನಾಯ್ಕವಾಡಾ ಬಾವಿಯ ನೀರೇ ಆಧಾರವಾಗಿದ್ದು, ಪ್ರತಿನಿತ್ಯ ಹಳ್ಳ ದಾಟಿ ಹೋಗಿ ನೀರು ತರುವುದೇ ಒಂದು ಕೆಲಸವಾಗಿದೆ. ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು ಈಗಲಾದರೂ ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಾರಾ ಕಾದು ನೋಡಬೇಕಿದೆ.