ಸಿಎಂ ತವರಲ್ಲೇ ಪ್ರೋಟೊಕಾಲ್​ ಉಲ್ಲಂಘನೆ- ಶಾಸಕರನ್ನು ಬಿಟ್ಟು ಕಾರ್ಯಕ್ರಮ ಮಾಡ್ತಿದ್ದಾರೆ ಸಿಎಂಪುತ್ರ!!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಪ್ರೋಟೋಕಾಲ್​ ಉಲ್ಲಂಘನೆಯಾಗ್ತಿದೆ. ಸ್ವತಃ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗ್ತಿರೋ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರೋಟೋಕಾಲ್​ ಉಲ್ಲಂಘನೆಯಾಗ್ತಿದ್ದರೇ ಇದಕ್ಕೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಒತ್ತಾಸೆ ನೀಡ್ತಿದ್ದಾರೆ ಅನ್ನೋ ಆರೋಪ ಕೇಳಿಬರ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಶಾಸಕ ಜಿ.ಟಿ. ದೇವೇಗೌಡರು ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಪುತ್ರ ಡಾ. ಯತೀಂದ್ರ ಚಾಲನೆ ನೀಡಿದ್ದಾರೆ. ಕುಪ್ಪಲೂರು, ಗುರೂರು ಶೀಟ್​ ಮನೆ, ಕಳಲವಾಡಿ, ಲಿಂಗಾಂಬುದಿ ಪಾಳ್ಯ, ರಮಾಬಾಯಿ ನಗರದಲ್ಲಿ ಸಿಎಂ ಪುತ್ರ ಯತೀಂದ್ರ ಅವರಿಂದ ಶಿಷ್ಟಾಚಾರ ಉಲ್ಲಂಘನೆಗೆಯಾಗಿದ್ದು, ಇದಕ್ಕೆ ಕೆಂಪಯ್ಯ ಹಾಗೂ ಪ್ರೇರಣೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೇ ಅಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವೊಬ್ಬ ಅಧಿಕಾರಿಯೂ ಶಾಸಕ ಜಿ.ಟಿ. ದೇವೇಗೌಡರ ಮಾತು ಕೇಳದಂತೆ ಸಿಎಂ ಪುತ್ರ ಒತ್ತಡ ತರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 44 ಪಿಡಿಓಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಿದ್ದರೆ, ಕ್ಷೇತ್ರಕ್ಕೆ ಒಳಪಡುವ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯ ಆರು ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನ ಎತ್ತಂಗಡಿ ಮಾಡಿಸಿದ್ದಾರೆ. ಇನ್ನು ಇಲವಾಲ ಠಾಣೆಯ ಐದು ಮಂದಿ ಎಸ್​ಐಗಳು, ಜಯಪುರ ಠಾಣೆಯ ಐದು ಇನ್ಸ್​​ಪೆಕ್ಟರ್​​ಗಳನ್ನ ಮನಸೋಇಚ್ಛೆ ವರ್ಗಾಯಿಸಿ ಕ್ಷೇತ್ರವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪಿತೂರಿ ಮಾಡಿದ್ದಾರೆ.

ಈ ಹಿಂದೆ ಸಿಎಂ ಪುತ್ರ ಯತೀಂದ್ರ ಹೀಗೆ ಶಿಷ್ಟಾಚಾರ ಉಲ್ಲಂಘಿಸಿದ್ದರ ಬಗ್ಗೆ ಸ್ಥಳೀಯ ಶಾಸಕರು ದೂರು ನೀಡುತ್ತಿದ್ದಂತೆ ಆಗ ಡಿಸಿಯಾಗಿದ್ದ ಶಿಖಾ ತಕ್ಷಣ ಸ್ಪಂದಿಸಿದ್ದರು. ಎಲ್ಲಾ ತಹಸೀಲ್ದಾರ್​ಗಳಿಗೂ ಸುತ್ತೋಲೆ ಹೊರಡಿಸಿ ಸ್ಥಳೀಯ ಶಾಸಕರಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಅಂತಾ ಕಟ್ಟಾಜ್ಞೆ ಹೊರಡಿಸಿದ್ದರು. ಇದೇ ಕಾರಣಕ್ಕೆ ಆಗ ಸಿಎಂ ಆಪ್ತ ಮರೀಗೌಡ, ಇಲ್ಲಸಲ್ಲದ ನೆಪ ಮಾಡಿ ಡಿಸಿ ಶಿಖಾಗೆ ಧಮ್ಕಿ ಹಾಕಿದ್ದರು. ಆ ಬಳಿಕ ಇದೇ ಕೆಂಪಯ್ಯ ಮಸಲತ್ತು ಮಾಡಿ ಶಿಖಾ ಅವರನ್ನ ಮೈಸೂರಿನಿಂದ ಎತ್ತಂಗಡಿ ಮಾಡಿಸಿದ್ದರು. ಈ ಕಾರಣದಿಂದಲೇ ಈಗಿನ ಡಿಸಿ ರಂದೀಪ್​ ಕೂಡ ಮೌನ ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಸಿಎಂ ಆಪ್ತ ಅಧಿಕಾರಿ ರಾಮಯ್ಯ ಅವರನ್ನು ವಸೂಲಿ ಅಧಿಕಾರಿ, ಇನ್ನು ಕೆಂಪಯ್ಯ ಇವರಿಂದ ಕಲೆಕ್ಷನ್​ ಮಾಡೋ ಗಿರಾಕಿ ಅಂತಾ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ವ್ಯವಸ್ಥೆ ಹಾಳಾಗಲು ಇವರಿಬ್ಬರೇ ಕಾರಣ ಅಂತಾ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲಿಸಬೇಕೆ ಬೇಡವೇ ಎಂಬುದು ಮತದಾರರಿಗೆ ಬಿಟ್ಟ ನಿರ್ಧಾರವಾದರೂ ಮತದಾರರ ಮೇಲೆ ವಿಪರೀತ ಪ್ರಭಾವ ಬೀರಲು ಹೊರಟಿರುವ ಕೆಂಪಯ್ಯ, ರಾಮಯ್ಯ ಹುನ್ನಾರದ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.