“ಮಂಡ್ಯ ರಕ್ಷಿಸಿ” ಸಿಎಂ ಕುಮಾರಸ್ವಾಮಿ ಮೊರೆ ಹೋದ ಮಾಜಿ ಸಂಸದ ಶಿವರಾಮೇ ಗೌಡ! ಪತ್ರದಲ್ಲಿ ಮಂಡ್ಯ ದುಸ್ಥಿತಿ ಅನಾವರಣ!!

ಮಂಡ್ಯ ಜಿಲ್ಲೆಯ ಆಡಳಿತ ವ್ಯವಸ್ಥೆ ಸೂತ್ರಹರಿದ ಗಾಳಿಪಟದಂತಾಗಿದೆ. ಕಾನೂನು ವ್ಯವಸ್ಥೆ ಕುಸಿದಿದ್ದು, ಕಾನೂನು ಬಾಹಿರ ಚಟುವಟಿಕೆಗಳು ಎಲ್ಲೇ ಮೀರಿದೆ. ಹೀಗಾಗಿ ತಕ್ಷಣ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ ಜಿಲ್ಲೆಯನ್ನು ರಕ್ಷಿಸಬೇಕೆಂದು ಮಂಡ್ಯದ ಮಾಜಿ ಸಂಸದ ಶಿವರಾಮೇ ಗೌಡರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಂದಾಜು ಮೂರು ಪುಟಗಳ ವಿವರವಾದ ಪತ್ರ ಬರೆದಿರುವ ಶಿವರಾಮೇ ಗೌಡರು, ಜಿಲ್ಲೆಯಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಏನೆಲ್ಲ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದನ್ನು ವಿವರವಾಗಿ ಉಲ್ಲಂಘಿಸಿದ್ದಾರೆ. ತಮ್ಮ ಪೇಸ್​ ಬುಕ್​ನಲ್ಲೂ ಈ ಪತ್ರದ ವಿವರವನ್ನು ಪ್ರಕಟಿಸಿರುವ ಶಿವರಾಮೇ ಗೌಡರು ಜಿಲ್ಲೆಯ ರಕ್ಷಣೆಗಾಗಿ ಸಿಎಂ ಬಳಿ ಮೊರೆ ಹೋಗಿದ್ದಾರೆ.

 

ಶಿವರಾಮೇ ಗೌಡರ ಪತ್ರದ ಸಾರಾಂಶ ಇಲ್ಲಿದೆ. ಮಂಡ್ಯ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ತಾವು ಅಧಿಕಾರ ಸ್ವಿಕರಿಸಿದಂದಿನಿಂದ ಈವರೆಗೆ ಅಹರ್ನಿಷಿಯಾಗಿ  ದುಡಿಯುತ್ತಿದ್ದೀರಿ.  ಜಿಲ್ಲೆಯ ರೈತಾಪಿ ವರ್ಗದ ಏಳ್ಗೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಘೋಷಿಸಿದ 8 ಸಾವಿರ ಕೋಟಿ ರೂ. ಗಳ ಬೃಹತ್ ಅನುದಾನದ ಗುಚ್ಚವನ್ನೆ ನಮಗೆ ದಯಪಾಲಿಸಿದ್ದಿರಿ, ಇದಕ್ಕಾಗಿ ಜಿಲ್ಲೆಯ ಎಲ್ಲ ಸಮಸ್ತ ಜನರ ಪರವಾಗಿ ನಿಮಗೆ ಅಭಿನಂದನೆಗಳು.

ಅಭಿವೃದ್ಧಿಯ ಪಥದತ್ತ ದಾಪುಗಾಲು ಹಾಕುತ್ತಿರುವ ಎರಡು ಮಹಾನಗರಗಳ ಕೊಂಡಿಯಂತೆ ಹಸುರಿನಿಂದ ಕಂಗೊಳಿಸುವ ನಮ್ಮ ಜಿಲ್ಲೆಗೆ ಅದ್ಯಾವ ‘ಬಾಲಗ್ರಹ’ ಬಡಿದಿದೆಯೋ ಆ ಕಾಲಭೈರವನೇ ಬಲ್ಲ. ನೀವು ಯಥೇಚ್ಛವಾಗಿ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಅನುದಾನ ಸಾಕಾರಗೊಳ್ಳುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಪಾತ್ರ ದೊಡ್ಡದು. ಅದನ್ನು ಬದ್ಧತೆಯಿಟ್ಟು ಕೆಲಸ ಮಾಡುವ ಒಬ್ಬ ಅಧಿಕಾರಿಯೂ ದಕ್ಷತೆ, ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಿಲ್ಲ. ಜಿಲ್ಲೆಯ ಎಲ್ಲೆಡೆ ಉದ್ಭವಿಸಿರುವ ಕುಡಿಯುವ ನೀರಿನ ತತ್ವಾರಕ್ಕೆ ಜಿಲ್ಲೆಯ ಜನ-ಜಾನುವಾರು ತತ್ತರಿಸಿಹೋಗಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಜಿಲ್ಲಾಧಿಕಾರಿಗಳೂ ಸೇರಿದಂತೆ ಜಿಲ್ಲಾಡಳಿತ ವಿಫಲವಾಗಿದೆ.

ಜನಸಾಮನ್ಯರ ಹಾಗು ಜನಪ್ರತಿನಿಧಿಗಳ ನಡುವೆ ಆಡಳಿತದ ಕೊಂಡಿಯಂತೆ ಕಾರ್ಯ ನಿರ್ವಹಿಸಬೇಕಾದ ಸರ್ಕಾರಿ ಅಧಿಕಾರಿಗಳು ತಮ್ಮ ಆಯಕಟ್ಟಿನ ಜಾಗಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡು ಜನರ ಸುಲಿಗೆಗೆ ಇಳಿದಿದ್ದಾರೆ. ಮಧ್ಯವರ್ತಿ ಇಲ್ಲದೇ ಯಾವ ಕೆಲಸವೂ ಸುಗಮವಾಗಿ ಆಗದು ಎಂಬ ತೀರ್ಮಾನಕ್ಕೆ ನಮ್ಮ ಜನ ಬಂದು ಬಹಳ ವರ್ಷಗಳೇ ಆಗಿಹೋಗಿದೆ. ಬದ್ಧತೆಯಿಟ್ಟು ಕೆಲಸ ಮಾಡುವ ಅಧಿಕಾರಿ-ಸಿಬ್ಬಂದಿಗಳನ್ನು ಉಳಿಸಿಕೊಂಡು ಉಳಿದೆಲ್ಲರನ್ನೂ ವರ್ಗಾಯಿಸಲೇಬೇಕಿದೆ. ಅದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಮುಖ್ಯಾಧಿಕಾರಿ ಮೊದಲ್ಗೊಂಡು ತಾಲ್ಲೂಕು ಮಟ್ಟದ ಅಧಿಕಾರಿಗಳ ವರವಿಗೆ ಆಗಬೇಕಿದೆ.

ಪೆಟ್ಟಿಗೆ ಅಂಗಡಿಯಲ್ಲೂ ಲಿಕ್ಕರ್ ದಂಧೆ ನಡೆಯುತ್ತಿದೆ. ನಿರುದ್ಯೊಗ ಸಮಸ್ಯೆ ನಮ್ಮ ಜಿಲ್ಲೆಯನ್ನು ಭಾದಿಸುತ್ತಿದೆ, ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಯುವಕರು ಹಾಳಾಗ್ತಿದ್ದಾರೆ. ಈ ಕ್ರಿಕೆಟ್ ಬುಕ್ಕಿಂಗ್ ದಂಧೆ ತಾಲ್ಲೂಕು, ಹೋಬಳಿ, ಗ್ರಾಮಗಳಲೆಲ್ಲಾ ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಲೆಗೆ ಬಿದ್ದ ಅಮಾಯಕರು ಊರು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವರು ಕಳ್ಳತನ, ದರೋಡೆ, ಮರಳು ದಂಧೆ, ಇಸ್ಪಿಟು ದಂಧೆಗಳಿಗೆ ಮಾರುಹೋಗಿದ್ದಾರೆ. ಇವೆಲ್ಲ ಪೋಲೀಸರ ಮೂಗಿನಡಿಯಲ್ಲಿ ಜರುಗುತ್ತಿದ್ದರೂ, ಅವರೂ ಇದರಲ್ಲಿ ಪಾಲುದರರಾಗಿ ಕುಮ್ಮಕ್ಕು ನೀಡುತ್ತಿದ್ದಾರೆ.ಮಂಡ್ಯದಲ್ಲಿ ಒಂದು ಕಲ್ಲು ಹೊಡೆದ್ರೂ ಬಾರಿಗೆ ಬೀಳುತ್ತೆ

ಜಿಲ್ಲೆಯಲ್ಲಿ ಅನೇಕಾನೇಕ ವರ್ಷಗಳಿಂದ ಬೀಡುಬಿಟ್ಟಿರುವ ಭ್ರಷ್ಟರ ಬೆನ್ನು ಮೂಳೆ ಮುರಿಯಬೇಕಿದೆ. ಈ ಕೈಂಕರ್ಯ ಈ ಕೂಡಲೇ ಜನ ಸಮುದಾಯದ ಅಭ್ಯುದಯಕ್ಕಾಗಿ ಆಗಲೇಬೇಕಿದೆ. ಈ ‘ಒಂದು ಮಾದರಿ ಆಡಳಿತ’ವನ್ನು ನೀವು ನೀಡಿದ್ದೆ ಆದಲ್ಲಿ ಮಂಡ್ಯ ಜಿಲ್ಲೆಯ ಇತಿಹಾಸ ಪುರುಷರಾಗಿ, ಮಂಡ್ಯ ಜಿಲ್ಲೆಯ ಸುವರ್ಣ ಯುಗಕ್ಕೆ ನೀವು ಈ ಮೂಲಕ ನಾಂದಿ ಹಾಡುತ್ತಿರೆಂದು ಆಶಿಸುತ್ತೆನೆ. ಇದು ನನ್ನೊಬ್ಬನ ಆಶಯವಷ್ಟೆ ಆಗಿರದೇ ಜಿಲ್ಲೆಯ ಸಮಸ್ತ ನಿಮ್ಮ ಅಭಿಮಾನಿ ವರ್ಗದ ಒಕ್ಕೊರಲಿನ ಬೇಡಿಕೆಯೂ ಆಗಿದೆ ಎಂಬುದನ್ನು ಈ ಮೂಲಕ ತಿಳಿಯಪಡಿಸುತ್ತೆನೆ. ಎಂದು ಮನವಿ ಮಾಡಿ ಸುಮಾರು 3 ಪುಟಗಳುಳ್ಳ ಪತ್ರವನ್ನು ಬರೆದಿದ್ದಾರೆ.