“ಸೀಟು ಹಂಚಿಕೆ ರಾಹುಲ್ ಗಾಂಧಿಯ ಮುಂದೆ ಇತ್ಯರ್ಥವಾಗಲಿ: ನೀವೂ ಅಲ್ಲೇ ಬನ್ನಿ”- ಗೌಡರು ಗರಂ

ಸೀಟು ಹಂಚಿಕೆ ಮಾತುಕತೆ ನಡೆಯುವ ಮುನ್ನವೇ ಇವರೇ ಅಭ್ಯರ್ಥಿ ಎಂದು ಒಬ್ಬರು ಘೋಷಿಸುತ್ತಾರೆ. ಹಾಸನ, ಮಂಡ್ಯ ಬಿಟ್ಟುಕೊಡುವುದಿಲ್ಲ ಎಂದು ಮತ್ತೂಬ್ಬರು ಹೇಳುತ್ತಾರೆ. ನಾಯಕರು ಬಿಟ್ಟು ಜಿಲ್ಲಾ ಮುಖಂಡರು ಮಾತನಾಡುತ್ತಾ ಹೋದರೆ ಹೇಗೆ? ಎಂದು ದೇವಗೌಡರು , ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗೆ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಚರ್ಚಿಸುವ ಸಲುವಾಗಿ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ್ದ ಗುಂಡೂರಾ ಮಂದೆ, ಕಾಂಗ್ರೆಸ್‌ ನಾಯಕರ ಇತ್ತೀಚೆಗಿನ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಎರಡೂ ಪಕ್ಷಗಳ ಉದ್ದೇಶ ಬಿಜೆಪಿ ಸೋಲಿ ಸುವುದು. ಜೆಡಿಎಸ್‌ಗೆ 12 ಸೀಟು ಬಿಟ್ಟುಕೊಡಬೇಕು ಎಂಬುದು ನಮ್ಮ ಬೇಡಿಕೆ. ಕಾಂಗ್ರೆಸ್‌ ಗೆದ್ದಿರುವ ಕ್ಷೇತ್ರ, ಜೆಡಿಎಸ್‌ ಗೆದ್ದಿರುವ ಕ್ಷೇತ್ರ ಎಂಬ ಆಧಾರದ ಮೇಲೆ ಸೀಟು ಹಂಚಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದರು. ಸೀಟು ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿವರ ಜತೆಯೇ ಚರ್ಚಿಸುತ್ತೇನೆ. ನೀವೂ ಬನ್ನಿ ಅಲ್ಲೇ ಇತ್ಯರ್ಥವಾಗಲಿ ಎಂದು ದೇವೇಗೌಡರು ತಿಳಿಸಿದರು ಎಂದು ಹೇಳಲಾಗಿದೆ.

ದೇವೇಗೌಡರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸೀಟು ಹಂಚಿಕೆ ಹಾಗೂ ಮೈತ್ರಿ ಬಗ್ಗೆ ಮಾತನಾಡಿದ್ದೇವೆ. ಮತ್ತೂಂದು ಸುತ್ತಿನ ಸಭೆ ನಡೆಯಬೇಕಿದೆ ಎಂದು ಹೇಳಿದರು. ದೇವೇಗೌಡರ ಜತೆ ನಡೆಸಿದ ಮಾತುಕತೆ ವಿವರ ಹೈಕಮಾಂಡ್‌ಗೆ ನೀಡಲಿದ್ದೇನೆ ಎಂದು ಹೇಳಿ ದಿನೇಶ್‌ ಗುಂಡೂರಾವ್‌ ನಿರ್ಗಮಿಸಿದರು.