ಹಗ್ಗ ಜಗ್ಗಾಟಕ್ಕೆ ತೆರೆ – 20:8 ಸೀಟು ಹಂಚಿಕೆ : ಮೈತ್ರಿ ಸರ್ಕಾರದ ಸಂಭಾವ್ಯ ಪಟ್ಟಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ವಿಚಾರ ಗುರುವಾರ ರಾತ್ರಿ ಇತ್ಯರ್ಥವಾಗಿದೆ. ಜೆಡಿಎಸ್​​​ಗೆ ಕೊನೆಗೂ 8 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವ ಮೂಲಕ ಉಭಯ ಪಕ್ಷಗಳಲ್ಲಿ ಸಮ್ಮತ ಮೂಡಿದೆ. ಮೈಸೂರು-ಕೊಡಗು ಮತ್ತು ತುಮಕೂರು ಕ್ಷೇತ್ರಗಳಿಗೆ ಮೈತ್ರಿ ಪಕ್ರದಲ್ಲಿ ಹಗ್ಗ ಜಗ್ಗಾಟ ನಡೆದಿದ್ದು ಇದೀಗ ಎಲ್ಲವೂ ಅಂತಿಮಗೊಂಡಿದೆ. ಕೊಡಗು ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್​​ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೇ ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್​​ಗೆ ನೀಡಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರು ಕಾಂಗ್ರೆಸ್‌ ನಾಯಕರ ಜೊತೆ ಮತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಇದರಂತೆಯೇ ಉಭಯ ಪಕ್ಷಗಳ ನಡುವಿನ ಮಾತುಕತೆಯಲ್ಲಿ ಜೆಡಿಎಸ್​​ಗೆ 8 ಸ್ಥಾನಗಳನ್ನು ಬಿಟ್ಟಕೊಡಲಾಗಿದೆ.


ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ಉತ್ತರ ಕನ್ನಡ, ವಿಜಯಪುರ ಜತೆಗೆ ಉಡುಪಿ-ಚಿಕ್ಕಮಗಳೂರು ಮತ್ತು ತುಮಕೂರು ಕ್ಷೇತ್ರಗಳು ಜೆಡಿಎಸ್‌ಗೆ ಸಿಕ್ಕಿವೆ. ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್ ಕೇಳಿರಲಿಲ್ಲ. ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಕಾರಣಕ್ಕೆ ಐವರು ಕಾಂಗ್ರೆಸ್ ಶಾಸಕರಿದ್ದರೂ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಲಾಗಿದೆ. ಇನ್ನುಳಿದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಕಣಕ್ಕಿಳಿಯಲಿದೆ.