ಒಂಟಿಯಾಗಿ ವಾಸಿಸುವ ಮಹಿಳೆಯರೇ ಹುಶಾರ್!! ಒಂಟಿಯಾಗಿ ಓಡಾಡುವವರಿಗೂ ಅಪಾಯ ತಪ್ಪಿದ್ದಲ್ಲ!!

ಆ ಏರಿಯಾದಲ್ಲಿ ಮಹಿಳೆಯರು ಹಗಲು ಹೊತ್ತಿನಲ್ಲಿಯೇ ಓಡಾಡೋಕೆ ಹೆದರ್ತಾರೆ.. ಇನ್ನು ರಾತ್ರಿ ಹೊತ್ತು ಮನೆಯಿಂದ ಹೊರಗೆ ಹೋಗೋದು ದೂರದ ಮಾತು. ಕಳ್ಳರು, ಪುಂಡಪೋಕರಿಗಳ ಹಾವಳಿ ಮಿತಿ ಮೀರಿರೋದು ಇದಕ್ಕೆ ಕಾರಣ. ಒಂದರ ಮೇಲೆ ಒಂದರಂತೆ ಚೈನ್ ಸ್ನಾಚ್​, ಮನೆಗಳ್ಳತನ, ಬೆದರಿಸಿ ದುಡ್ಡು ಕಸಿದುಕೊಂಡು ಹೋಗುವ ಪ್ರಕರಣಗಳು ನಿರಂತರವಾಗಿ ನಡೀತಾನೆ ಇವೆ. ಪೊಲೀಸರಿಗೆ ದೂರು ಕೊಟ್ರೂ ಪ್ರಯೋಜನವಾಗಿಲ್ಲ. ಹಾಗಾದ್ರೆ ಆ ಏರಿಯಾ ಯಾವುದು ಅನ್ನೋದಕ್ಕೆ ಇಲ್ಲಿದೆ ಒಂದು ರಿಪೋರ್ಟ್.

ಹೌದು… ಹೀಗೆ ಒಂದಲ್ಲ.. ಎರಡಲ್ಲ.. ಮೇಲಿಂದ ಮೇಲೆ ಕಳ್ಳತನ, ಸುಲಿಗೆ ಪ್ರಕರಣಗಳು ನಡೀತಾನೆ ಇವೆ. ಹಗಲು ಹೊತ್ತಿನಲ್ಲಿಯೇ ಒಬ್ಬಂಟಿಯಾಗಿ ಓಡಾಡೋಕೂ ಕಷ್ಟವಾಗಿದೆ. ಎಲ್ಲಿ ಯಾವಾಗ ಯಾರು ವಕ್ಕರಿಸಿಕೊಂಡು ಒಡವೆ, ಹಣ ಕಿತ್ತುಕೊಂಡು ಹೋಗ್ತಾರೋ ಎನ್ನೋ ಭಯ ಬೇರೆ.. ಇದು ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಮತ್ತು ವಿವೇಕಾನಂದ ಬಡಾವಣೆ ಜನರ ಗೋಳು. ರಾತ್ರಿ ಹೊತ್ತು ಪೊಲೀಸರು ಗಸ್ತು ಹೊಡೆಯಲ್ಲ.. ಒಂದು ದಿನ ಬಂದ್ರೆ ನಾಲ್ಕು ದಿನ ಬರೋಲ್ಲ.. ಇನ್ನು ಮಟಮಟ ಮಧ್ಯಾಹ್ನವೇ ಕಳ್ಳತನ ಕೃತ್ಯಗಳನ್ನು ಇಲ್ಲಿ ದುಷ್ಕರ್ಮಿಗಳು ಎಸಗುತ್ತಿದ್ದಾರೆ. ಮೊಬೈಲ್, ಚಿನ್ನ, ಹಣ ವನ್ನೂ ದೋಚಿಕೊಂಡು ಹೋಗುತ್ತಿದ್ದಾರೆ. ತರಕಾರಿ ತರೋಕೆ ಹೋಗಿದ್ದ ಮಹಿಳೆಯ ಬಳಿ ಇದ್ದ 30 ರೂಪಾಯಿಯನ್ನೂ ಸಹ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.

ಈ ಹಿಂದೆ ಕಳ್ಳತನ ಪ್ರಕರಣಗಳು ನಡೆದಾಗ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿರೋದಾಗಿ ಬಡಾವಣೆ ಜನ್ರು ದೂರು ನೀಡಿದ್ರು. ಆದರೂ ಏನೂ ಕ್ರಮ ಕೈಗೊಂಡಿಲ್ಲ ಅನ್ನೋದು ಸ್ಥಳೀಯರ ಆರೋಪ. ಕಳೆದ 15 ದಿನಗಳ ಒಳಗೆ 8 -10 ಪ್ರಕರಣಗಳು ನಡೆದಿವೆ. ಕೃತ್ಯಗಳನ್ನ ಎಸಗುತ್ತಿರೋರು 18 ರಿಂದ 25 ವರ್ಷದ ಒಳಗಿನ ಯುವಕರ. ಅದು ಅಲ್ಲದೆ ಏರಿಯಾದಲ್ಲಿ ಪಾರ್ಕ್​ ಸಹ ಇದ್ದು, ಅದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಲ್ಲದೆ ಗಾಂಜಾ ನಶೆಯಲ್ಲೇ ಈ ಕೃತ್ಯಗಳು ನಡೀತಾ ಇವೆ. ಹಾಗಾಗಿ ಇಡೀ ಏರಿಯಾದ ಜನ್ರೆ ಒಟ್ಟಾಗಿ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿ, ನಮಗೆ ರಕ್ಷಣೆ ಕೊಡುವಂತೆ ಕೇಳಿಕೊಂಡಿದ್ದಾರೆ. ಇಡೀ ಶಿವಮೊಗ್ಗದಲ್ಲಿಯೇ ಅತೀ ಹೆಚ್ಚು ಕಳ್ಳತನ ಪ್ರಕರಣಗಳು ಗೋಪಾಲಗೌಡ ಬಡಾವಣೆಯಲ್ಲಿ ನಡೆಯುತ್ತಿರೋದನ್ನ ಒಪ್ಪಿಕೊಂಡ ಎಸ್ಪಿ, ಈಗಾಗಲೇ ಒಂದು ಗಸ್ತುವಾಹನ ಹಾಕಲಾಗಿದೆ. ಇನ್ನಷ್ಟು ಭದ್ರತಾ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

ಮಹಾತ್ಮ ಗಾಂಧಿಜೀಯವರು ಮಧ್ಯರಾತ್ರಿ ಮಹಿಳೆಯರು ಸ್ವಾತಂತ್ರ್ಯವಾಗಿ ನಡೆದಾಡುವಂತಾಗಬೇಕು ಎಂದು ಬಯಸಿದ್ರು. ಆದ್ರೆ, ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಮಟಮಟ ಮಧ್ಯಾಹ್ನವೇ ನಡೆದಾಡೋದು ದುಸ್ತರವಾಗಿದೆ. ಈಗಾಗಲದ್ರೂ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾ ಅನ್ನೋದುನ್ನು ಕಾದು ನೋಡಬೇಕು..