ಮಾಲೂರು ರಕ್ಷಿತಾ ಅತ್ಯಾಚಾರ ಯತ್ನ ಕೊಲೆ ಪ್ರಕರಣ- ಕೊನೆಗೂ ಬಲೆಗೆ ಬಿದ್ದ ಕಾಮುಕ ಆರೋಪಿ!

 

ad

ಹಾಡಹಗಲೇ ಬಾಲಕಿಯೊರ್ವಳನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರದ ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ನಡೆದ 48 ಗಂಟೆಯಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾಲೂರು ತಾಲೂಕಿನ ಟೇಕಲ್​ ಗ್ರಾಮದ ರಂಜಿತ್ ಬಂಧಿತ ಆರೋಪಿ.
ಬಂಧಿತ ಆರೋಪಿ ಕಳೆದ ಒಂದು ವಾರದಿಂದ ಮೃತ ರಕ್ಷಿತಾ ಮನೆ ಸಮೀಪ ಗಾರೆ ಕೆಲಸ ಮಾಡಿಕೊಂಡಿದ್ದು, ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದ ರಕ್ಷಿತಾಳನ್ನು ನೋಡಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಸ್ಕೆಚ್​ ಹಾಕಿದ್ದ ಎನ್ನಲಾಗಿದೆ. ಮೊನ್ನೆ ಆಕೆ ಶಾಲೆ ಬಿಟ್ಟು ಸ್ನೇಹಿತೆ ಜೊತೆ ನಡೆದು ಬರುತ್ತಿರುವಾಗ ಆಕೆಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಆಕೆ ಸಹಕರಿಸದ ಹಿನ್ನೆಲೆಯಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಮಾಹಿತಿ ಆಧರಿಸಿ ಆರೋಪಿ ಸ್ಕೆಚ್​ ತಯಾರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ರಂಜಿತ್ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಮಾಲೂರಿನ ಇಂದಿರಾನಗರ ನಿವಾಸಿ ರವಿಕುಮಾರ್​ ಹಾಗೂ ಶ್ರೀಲಕ್ಷ್ಮಿ ಎಂಬುವರ ಹಿರಿಯ ಪುತ್ರಿ ರಕ್ಷಿತಾ ಮಾಲೂರು ಪಟ್ಟಣದಲ್ಲಿರುವ ಬಿಜಿಎಸ್​ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ಎಂದಿನಂತೆ ನಿನ್ನೆ ಶಾಲೆ ಮುಗಿಸಿಕೊಂಡು ಗೆಳೆತಿಯೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಮಾಲೂರಿನ ರೈಲ್ವೆ ಬ್ರಿಡ್ಜ್​ ಬಳಿ ಘಟನೆ ನಡೆದಿತ್ತು.


ಇನ್ನು ರಕ್ಷಿತಾ ಕೊಲೆ ಆರೋಪಿ ಬಂಧನಕ್ಕೆ ಆಗ್ರಹಿಸಿ ನಿನ್ನೆಯಿಂದ ಮಾಲೂರಿನಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳು ಸ್ವಯಂಘೊಷಿತವಾಗಿ ಮಾಲೂರು ಪಟ್ಟಣದ ಎಲ್ಲಾ ಶಾಲೆಗಳಿಗೆ ರಜೆ ಘೊಷಿಸಿದ್ರು. ಕೊಲೆಯಾದ ರಕ್ಷಿತಾಳ ಸಾವಿಗೆ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಆರಂಭಿಸಿದ್ರು. ಮಾಲೂರಿನ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಸಾವಿರಾರು ವಿದ್ಯಾರ್ಥಿಗಳು, ವಿವಿದ ಸಂಘಟನೆಗಳ ಕಾರ್ಯಕರ್ತರು ರಕ್ಷಿತಾಳ ಪೋಟೋ ಹಿಡಿದು ಐದು ಗಂಟೆಗೂ ಹೆಚ್ಚುಕಾಲ ಪಟ್ಟಣದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಿದ್ರು. ಆರೋಪಿಯನ್ನು ಬಂದಿಸುವವರೆಗೂ ಪ್ರತಿಭಟನೆ ಕೈಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.