ಪೂಜಾರಿ ಪ್ಯಾಂಟ್ ಒಳಗೆ ಆರ್ ಎಸ್ ಎಸ್ ಚೆಡ್ಡಿ !! ಕರಾವಳಿಯ ಬಿಲ್ಲವ ರಾಜಕಾರಣಕ್ಕೆ ಮಧು ಬಂಗಾರಪ್ಪ !! ಪೂಜಾರಿ ಸ್ಥಾನ ತುಂಬುವರೇ ಈಡಿಗರ ಯುವ ನಾಯಕ ? !!

ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಜನಾರ್ಧನ ಪೂಜಾರಿಯವರು ಆರ್ ಎಸ್ ಎಸ್ ಜೊತೆ ಗುರುತಿಸಿಕೊಳ್ಳುತ್ತಿದ್ದಂತೆ ಮಧು ಬಂಗಾರಪ್ಪ ಕರಾವಳಿಯಲ್ಲಿ ಸಕ್ರೀಯರಾಗುತ್ತಿದ್ದಾರೆ. ಇದು ಕರಾವಳಿ ಬಿಲ್ಲವ ಸಮುದಾಯ ಮತ್ತು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ. ಬಂಗಾರಪ್ಪರಂತೆಯೇ ಜಾತ್ಯಾತೀತ ಸಿದ್ದಾಂತ ಹೊಂದಿರುವ ಮಧು ಬಂಗಾರಪ್ಪ ಈಡಿಗ ಮತ್ತು ಬಿಲ್ಲವ ಸಮುದಾಯದ ಮಧ್ಯೆ ಪ್ರಭಾವ ಹೊಂದಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಮತ್ತು ಬಂಗಾರಪ್ಪರ ರಾಜಕೀಯದ ಕಷ್ಟದ ದಿನಗಳಲ್ಲಿ ಕರಾವಳಿಯ ಬಿಲ್ಲವರು ಅವರ ಜೊತೆಗಿದ್ದರು.

 ಬಿಲ್ಲವ ಸಮುದಾಯದ ಪ್ರಶ್ನಾತೀತ ನಾಯಕರಂತಿದ್ದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಈಗೀಗ ಆರ್ ಎಸ್ ಎಸ್ ಜೊತೆ ಗುರುತಿಸಿಕೊಂಡಿದ್ದರಿಂದ ಮಧು ಬಂಗಾರಪ್ಪ ಅಖಾಡ ಪ್ರವೇಶ ಕುತೂಹಲ ಕೆರಳಿಸಿದೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಧು ಬಂಗಾರಪ್ಪ, ಬಿಲ್ಲವರ ಹಿತಾಸಕ್ತಿ ಕಾಪಾಡುವಲ್ಲಿ ಜನಾರ್ಧನ ಪೂಜಾರಿಯ ವೈಫಲ್ಯಗಳ ಬಗ್ಗೆ ಒತ್ತುಕೊಟ್ಟು ಮಾತನಾಡಿದರು. “ಜನಾರ್ದನ ಪೂಜಾರಿ ಪ್ಯಾಂಟ್ ಒಳಗಡೆ‌ ಆರ್ ಎಸ್ ಎಸ್ ಚೆಡ್ಡಿ ಇದೆ. ನಿಜವಾದ ಆರ್.ಎಸ್.ಎಸ್ ಜನಾರ್ದನ ಪೂಜಾರಿ. ಜನಾರ್ಧನ ಪೂಜಾರಿ ಬರೆದ ಆತ್ಮ ಚರಿತ್ರೆ ಒಂದು ಸುಳ್ಳಿನ ಕಂತೆ. ನಮ್ಮ ತಂದೆ ಇಂದಿರಾಗಾಂಧಿಗೆ ಹೊಡೆಯಲು ಹೋಗಿರಲಿಲ್ಲ. ಆದರೆ ಪೂಜಾರಿಯವರ ಆತ್ಮಕತೆಯಲ್ಲಿ ಸುಳ್ಳು ಸುಳ್ಳು ಕತೆಗಳನ್ನು ಹೆಣೆಯಲಾಗಿದೆ. ಅದು ಆತ್ಮಕತೆಯಲ್ಲ, ಪಾಪದ ಕೊಡ” ಎಂದು ಆರೋಪಿಸಿದ್ದಾರೆ.

“ಇತ್ತಿಚೆಗೆ ಜನಾರ್ಧನ ಪೂಜಾರಿ ಬಿಲ್ಲವರ ಸಮುದಾಯದ ಪರ ನಿಲುವನ್ನು ಕಳೆದುಕೊಂಡಿದ್ದಾರೆ. ಬಿಲ್ಲವ ಯುವಕರು ಕೋಮುಗಲಭೆಗಳಲ್ಲಿ ಸಾಯುವಾಗ ಯಾಕೆ ಕಣ್ಣೀರು ಹಾಕಿಲ್ಲ ? ಕನಿಷ್ಠ ಬಿಲ್ಲವ ಯುವಕರನ್ನು ಕೋಮು ಮನಸ್ಥಿತಿಯಿಂದ ಹೊರತರುವ ಕೆಲಸವನ್ನೂ ಮಾಡುತ್ತಿಲ್ಲ. ಅದರ ಬದಲು ಬಿಲ್ಲವ ಯುವಕರು ಜೈಲು ಸೇರಲು, ಕೊಲೆಯಾಗಲು ಕಾರಣರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಜೊತೆ ಜನಾರ್ಧನ ಪೂಜಾರಿ ಸೇರಿಕೊಂಡಿದ್ದಾರೆ ” ಎಂದು ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಜನಾರ್ಧನ್ ಪೂಜಾರಿಗೆ ವಯೋಸಹಜ ಅರಳು ಮರಳು ಪ್ರಾರಂಭವಾಗಿದ್ದು, ಕೆಟ್ಟ ಚಾಳಿ ಬಂದಿದೆ. ಅವರಿಗೆ ಎಲ್ಲರನ್ನು ತುಳಿದೇ ಗೊತ್ತಿರುವುದು. ಕರಾವಳಿ ಕೋಮು ಸಂಘರ್ಷಕ್ಕೆ ಆರ್.ಎಸ್.ಎಸ್ ಎಷ್ಟು ಕಾರಣವೋ ಜನಾರ್ಧನ ಪೂಜಾರಿಯೂ ಅಷ್ಟೇ ಕಾರಣ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕರಾವಳಿಯ ಬಿಲ್ಲವರು ಸಾಯಲು ಮತ್ತು ಜೈಲು ಸೇರಲು ಕಾರಣವಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಏಳೆಂಟು ಕೇಸ್ ಇದ್ದರೂ ರಾಜ್ಯ ಸರಕಾರ ಯಾಕೆ ಅವರನ್ನು ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ ಮಧುಬಂಗಾರಪ್ಪ, ಬಿಲ್ಲವ ಯುವಕರು ಯಾರದ್ದೇ ಪ್ರಚೋದನೆಗೆ ಒಳಗಾಗದೇ ನಾರಾಯಣ ಗುರುಗಳ ಮಾರ್ಗದರ್ಶನದಂತೆ ನಡೆಯಬೇಕು ಎಂದರು.