ಕರ್ನಾಟಕಕ್ಕೆ ಅಲ್ಪತೃಪ್ತಿ ತಂದ ಮಹದಾಯಿ ತೀರ್ಪು- ಮಹದಾಯಿ ಹೋರಾಟಗಾರರ ಮುಖದಲ್ಲಿ ಮಂದಹಾಸ!

 

ad


  

ದಶಕಗಳಿಂದ ನಡೆಯುತ್ತ ಬಂದಿದ್ದ ಗೋವಾ ಮತ್ತು ಕರ್ನಾಟಕ ನಡುವಿನ ಮಹದಾಯಿ ನೀರಿನ ಹೋರಾಟದಲ್ಲಿ ಕರ್ನಾಟಕಕ್ಕೆ ತಕ್ಕಮಟ್ಟಿಗಿನ ಗೆಲುವು ಸಿಕ್ಕಿದಂತಾಗಿದೆ. ಕುಡಿಯುವ ನೀರು, ಕೃಷಿ, ಜಲವಿದ್ಯುತ್, ಕಳಸಾ ಬಂಡೂರಿ ನಾಲೆಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 18 .03 ಟಿ.ಎಂಸಿಯಷ್ಟು ನೀರು ನೀಡಲು ಜಲನ್ಯಾಯಾಧೀಕರಣ ಆದೇಶಿಸಿದೆ.

ತೀರ್ಪಿನಿಂದ ರಾಜ್ಯಕ್ಕೆ ಕುಡಿಯಲು ಮತ್ತು ಕೃಷಿಗಾಗಿ ಒಟ್ಟು 21 ಟಿಎಂಸಿ ನೀರು ಕೇಳಲಾಗಿತ್ತು. ಇದರಲ್ಲಿ 13.5 ಟಿಎಂಸಿ ನೀರು ಕೊಡಲು ನ್ಯಾಯಧೀಕರಣ ಒಪ್ಪಿಕೊಂಡಿದ್ದರೇ, ಕುಡಿಯಲು 5.5 ಟಿಎಂಸಿ, ನೀರಾವರಿಗೆ 8 ಟಿಎಂಸಿ ನೀರು, ವಿದ್ಯುತ್​ ಉತ್ಪಾದನೆಗೆ 8.2 ಟಿಎಂಸಿ, ಕಳಸಾ ಯೋಜನೆಗೆ 1.12 ಟಿಎಂಸಿ, ಬಂಡೂರಿ ನಾಲೆಗಳು ಸೇರಿದಂತೆ ವಿವಿಧ ಉದ್ಧೇಶಗಳಿಗೆ 2.18 ಟಿಎಂಸಿ ನೀರು ನೀಡಲಾಗಿದೆ. ಇದರಿಂದ ಕರ್ನಾಟಕಕ್ಕೆ ತೀವ್ರ ಅನ್ಯಾಯವಲ್ಲದಿದ್ದರೂ ತೀರಾ ಉಪಕಾರವೂ ಆಗಿಲ್ಲ.

 

 

ಆದರೇ ದಶಕಗಳಿಂದ ನಡೆಯುತ್ತಲೇ ಇದ್ದ ಕುಡಿಯುವ ನೀರು ಸೇರಿದಂತೆ ವಿವಿಧ ಕಾರಣಗಳಿಗಾಗಿನ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಮಹದಾಯಿ ವಿಚಾರ ಕಳೆದ 5 ವರ್ಷದಲ್ಲಿ ಬರೋಬ್ಬರಿ 106 ದಿನಗಳ ಕಾಲ ವಿಚಾರಣೆ ನಡೆದಿತ್ತು. ಕರ್ನಾಟಕದ ಪರ ಹಿರಿಯ ವಕೀಲರಾ ಮೋಹನ ಕಾತರಕಿ, ಇಂದಿರಾ ಜೈಸಿಂಗ್​ ಸೇರಿ ಹಲವು ವಕೀಲರು ವಾದಮಂಡಿಸಿದ್ದರು.
ಇದೀಗ ಸಿಕ್ಕಿರುವ ನೀರಿಗೆ ಕರ್ನಾಟಕ ಅಲ್ಪತೃಪ್ತಿ ಪಟ್ಟುಕೊಂಡಿದೆ. ಉತ್ತರ ಕರ್ನಾಟದ ರೈತರು ಈ ತೀರ್ಪನ್ನು ಅಸಮಧಾನದ ನಡುವೆಯೇ ಸ್ವಾಗತಿಸಿದ್ದರೆ, ಗೋವಾ ಸರ್ಕಾರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ಕರ್ನಾಟಕದ ಹಲವು ನಾಯಕರು ಪಕ್ಷಾತೀತವಾಗಿ ಈ ತೀರ್ಪನ್ನು ಸ್ವಾಗತಿಸಿದ್ದಾರೆ.