ಮಹದಾಯಿ ಹೋರಾಟ ಮರೆತ ಚಿತ್ರರಂಗ- ಬೆಂಗಳೂರಿನ ಬೀದಿಯಲ್ಲಿ ರೈತರು ಮೂರು ದಿನ ಕಳೆದ್ರೂ ಸ್ಪಂದಿಸದ ಸ್ಯಾಂಡಲ್​ವುಡ್

ರಾಜ್ಯದಲ್ಲಿ ಮಹದಾಯಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗತೊಡಗಿದೆ. ಈಗಾಗಲೇ ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ.

ad


ಈ ಮಧ್ಯೆ ಮಹದಾಯಿ ಹೋರಾಟಗಾರರು ಕಳೆದ ಮೂರು ದಿನಗಳಿಂದ ಚಳಿಯಲ್ಲಿ ಧರಣಿ ಮುಂದುವರೆಸಿದ್ದರೂ ಸಿನಿಮಾ ನಟ-ನಟಿಯರು ಹೋರಾಟಗಾರರತ್ತ ತಿರುಗಿಯೂ ನೋಡಿಲ್ಲ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಮಹದಾಯಿ ಹೋರಾಟಕ್ಕೆ ಸಿನಿಮಾ ನಟ-ನಟಿಯರು ಬೆಂಬಲ ನೀಡುವ ನಾಟಕವಾಡಿ ಈಗ ಕಣ್ಣೆತ್ತಿಯೂ ನೋಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಹದಾಯಿ ಹೋರಾಟ ತೀವ್ರಗೊಂಡ ವೇಳೆಯಲ್ಲಿ ಸ್ವಯಂಪ್ರೇರಿತರಾಗಿ ಚಿತ್ರರಂಗ ಹುಬ್ಬಳ್ಳಿಗೆ ಧಾವಿಸಿತ್ತು. ಅಷ್ಟೇ ಅಲ್ಲದೇ ಬಹಿರಂಗವಾಗಿ ಮಹದಾಯಿ ಹೋರಾಟಗಾರರ ಬೆಂಬಲಕ್ಕೆ ನಿಂತಿತ್ತು. ಡಾ.ಶಿವಣ್ಣ, ಯಶ್​ ಸೇರಿದಂತೆ ಎಲ್ಲರೂ ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದರು. ರೈತರು ತಮ್ಮ ಹಕ್ಕಿನ ಹೋರಾಟವನ್ನು ಚುರುಕುಗೊಳಿಸಬೇಕು ಎಂದಿದ್ದರು.

ಅಷ್ಟೇ ಅಲ್ಲ ನಾನಿರುವುದೇ ನಿಮಗಾಗಿ ಎಂದು ಸಿನೆಮಾ ಹಾಡು ಹೇಳಿ ಸಾಂತ್ವನ ಹೇಳಿದ್ದರು. ಆದರೇ ಇದೀಗ ಮಹದಾಯಿ ಹೋರಾಟ ತೀವ್ರಗೊಂಡಿದ್ದು, ರೈತರು ಕಳೆದ ಮೂರು ದಿನದಿಂದ ರಸ್ತೆಯಲ್ಲೇ ರೈತರು ಹೋರಾಡುತ್ತಿದ್ದರೂ ಸಿನಿಮಾ ನಟ-ನಟಿಯರು ಸ್ಪಂದಿಸಿಲ್ಲ.
ಬೆಂಗಳೂರಿನಲ್ಲಿ ಹೋರಾಟಗಾರರು ಪ್ರತಿಭಟನೆಯಲ್ಲಿ ತೊಡಗಿರುವ ದೃಶ್ಯ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರು ಸಿನಿಮಾರಂಗ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ರೈತರು ಚಿತ್ರರಂಗದವರ ಬೆಂಬಲ ಬರಿಯ ಪ್ರಚಾರಕ್ಕೆ ಸೀಮಿತವಾಯ್ತಾ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ವಾ ಎಂದು ಪ್ರಶ್ನಿಸುತ್ತಿದ್ದು, ಚಿತ್ರರಂಗವೇ ಇದಕ್ಕೆ ಉತ್ತರಿಸಬೇಕಿದೆ.