ಅಂಗನವಾಡಿ ಇಂಜೆಕ್ಷನ್ ಗೆ ಎರಡು ಮಕ್ಕಳು ಬಲಿ- ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ!!

ಅಂಗನವಾಡಿಯಲ್ಲಿ ನೀಡಲಾದ ಚುಚ್ಚುಮದ್ದಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಮಂಡ್ಯದ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು 2 ವರ್ಷದ ಪ್ರೀತಮ್ ಹಾಗೂ 2 ವರ್ಷದ ಭುವನ್​​ ಎಂದು ಗುರುತಿಸಲಾಗಿದೆ.

ಕಳೆದ ಫೆ.9 ರಂದು ಸ್ಥಳೀಯ ಅಂಗನವಾಡಿಯಲ್ಲಿ 9 ಮಕ್ಕಳಿಗೆ ಚುಚ್ಚುಮದ್ದು ಲಸಿಕೆ ನೀಡಲಾಗಿತ್ತು. ಅದರಲ್ಲಿ 2 ಮಕ್ಕಳು ಸಾವನ್ನಪ್ಪಿದ್ದರೇ 7 ಮಕ್ಕಳು ಅಸ್ವಸ್ಥರಾಗಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮಿಮ್ಸ್​ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಚಿನ್ನಗಿರಿದೊಡ್ಡಿಯಲ್ಲಿ ಗುರುವಾರ ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಪೆಂಟಾವಲೆಂಟ್​​ ಇಂಜೆಕ್ಷನ್​ ನೀಡಲಾಗಿತ್ತು. ಸಂಜೆ ವೇಳೆಗೆ ಭುವನ್ ಎಂಬ ಮಗು ಅಸ್ವಸ್ಥಗೊಂಡಿತ್ತು. ತಕ್ಷಣ ಆ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮಗು ಮೃತಪಟ್ಟಿದೆ. ಶುಕ್ರವಾರ ಸಂಜೆ ಕೂಡ ಅದೇ ಗ್ರಾಮದ ಪ್ರೀತಮ್ ಎಂಬ ಮಗು ಕೂಡ ಅಸ್ವಸ್ಥಗೊಂಡಿತ್ತು. ಆ ಮಗುವನ್ನು ಮಿಮ್ಸ್ ಗೆ ದಾಖಲಿಸಲಾಗಿತ್ತಾದ್ರೂ ಆ ಮಗು ಕೂಡ ತಡರಾತ್ರಿ ಅಸುನೀಗಿದೆ.

ಇಬ್ಬರು ಮಕ್ಕಳು ಚುಚ್ಚುಮದ್ದಿನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಜನರು ಆಸ್ಪತ್ರೆ ಎದುರು ನೆರೆದಿದ್ದು, ಅಂಗನವಾಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಡಿ.ಎಚ್​.ಓ ಮೋಹನಕುಮಾರ್ ಸ್ಪಷ್ಟನೆ ನೀಡಿದ್ದು, ಲಸಿಕೆಯಿಂದ ಮಗು ಸಾವನ್ನಪ್ಪಿರುವ ಸಾಧ್ಯತೆ ಕಡಿಮೆ ಇದೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕು. ಒಂದೊಮ್ಮೆ ಲಸಿಕೆಯಿಂದ ಮಗು ಸಾವನ್ನಪ್ಪಿರೋದು ಸಾಬೀತಾದರೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಸರ್ಕಾರದಿಂದ ನೀಡಲಾಗುವ ಲಸಿಕೆಯಿಂದ ಮಗು ಸಾವನ್ನಪ್ಪಿರೋದರಿಂದ ಸರ್ಕಾರ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.